ಪಾಂಡವಪುರ ತಾಲೂಕಿನ ಮೇಲುಕೋಟೆಯ ಚಲುವನಾರಾಯಣಸ್ವಾಮಿಗೆ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಏಳು ಅಡಿ ಎತ್ತರದ ಸ್ವರ್ಣ ಲೇಪಿತ ಛಾಮರವನ್ನು (ಛತ್ರಿ) ಕೊಡುಗೆಯಾಗಿ ನೀಡಿದರು.
ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವಕ್ಕೆ ಆಗಮಿಸಿದ ಸಚಿವ ಚಲುವರಾಯಸ್ವಾಮಿ, 5.5.ಕೆ.ಜಿ ಬೆಳ್ಳಿ ಮೇಲೆ ಸ್ವರ್ಣ ಲೇಪಿತವಾದ ಛಾಮರವನ್ನು ಸರ್ಮಪಿಸಿದರು.
ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಲುಕೋಟೆ ಚಲುವನಾರಾಯಣಸ್ವಾಮಿ ನಮ್ಮ ಮನೆ ದೇವರು. ಪುರಾತನ ಕಾಲದಿಂದಲೂ ನಮ್ಮ ಕುಟುಂಬಕ್ಕೆ ಚಲುವನಾರಾಯಣಸ್ವಾಮಿ ಕುಟುಂಬದ ಕುಲದೇವರು.ಈ ದೇವಸ್ಥಾನಕ್ಕೆ ಏನಾದರೂ ಕೊಡುಗೆ ನೀಡಬೇಕೆಂಬ ಆಲೋಚನೆಯಲ್ಲಿದ್ದಾಗ ಇಲ್ಲಿನ ಶ್ರೀನಿವಾಸ್ ನರಸಿಂಹನ್ ಗುರೂಜಿ ಹಾಗೂ ಇತರರು ಚಲುವನಾರಾಯಣಸ್ವಾಮಿಗೆ ಪೂಜೆ ಮಾಡುವುದು ಸರ್ವೆ ಸಾಮಾನ್ಯ. ಸ್ವಾಮಿಗೆ ಛಾಮರ ಇಲ್ಲ, ಅದರ ಅವಶ್ಯಕತೆ ಇದೆ ಎಂದಿದ್ದಕ್ಕೆ ಆ ಭಗವಂತನ ಸನ್ನಿಧಾನಕ್ಕೆ ಈ ಛಾಮರವನ್ನು ಸರ್ಮಪಿಸಿದ್ದೇನೆ ಎಂದರು.
ಈ ವೇಳೆ ಶ್ರೀನಿವಾಸ್ ನರಸಿಂಹನ್ ಗುರೂಜಿ ಮಾತನಾಡಿ, ಭಾರತದ ಅತ್ಯಂತ ಪವಿತ್ರ ಕ್ಷೇತ್ರವಾಗಿರುವ ಮೇಲುಕೋಟೆಯ ಶ್ರೀ ಚಲುವನಾರಾಯಣಸ್ವಾಮಿಗೆ ಸಮರ್ಪಿಸುವ ಛಾಮರವನ್ನು (ಸ್ವರ್ಣ ಛತ್ರಿ) ಯತಿರಾಜರ ಗುರುಪೀಠದ ಮಾರ್ಗದರ್ಶನದಂತೆ 5.5ಕೆ.ಜಿ ಬೆಳ್ಳಿಯ ಮೇಲೆ ಸ್ವರ್ಣಲೇಪಿತವಾದ 7ಕೆ.ಜಿ ಛತ್ರಿ ನೀಡಿದ್ದಾರೆ. ಇದನ್ನು ಸಾರ್ವಭೌಮತ್ವ ಎನ್ನಬಹುದು, ಹಿಂದೆ ಅಯೋಧ್ಯೆಯಲ್ಲಿ ಶ್ರೀರಾಮನ ಪಟ್ಟಾಭಿಷೇಕದ ವೇಳೆ ಕಿರೀಟ ಧಾರಣೆ ಜತೆಗೆ ಛತ್ರಿ ಸಮರ್ಪಣೆಗೆ ನಿಗದಿಯಾಗಿತ್ತಾದರೂ ರಾಮನಿಗೆ ಅಂದು ಪಟ್ಟಾಭಿಷೇಕವಾಗಲಿಲ್ಲ. ಆಗ ಅಲ್ಲೇ ಇದ್ದ ಲಕ್ಷ್ಮಣ, ಕಲಿಯುಗದಲ್ಲಿ ರಾಮಾನುಜಾಚಾರ್ಯನಾಗಿ ಅವತಾರವೆತ್ತಿ ಅದೇ ದಿನ ಮೇಲುಕೋಟೆಯ ಚಲುವನಾರಾಯಣಸ್ವಾಮಿಗೆ ವೈರಮುಡಿ ವಜ್ರ ಕಿರೀಟ ಧಾರಣೆ ಮಾಡಿದರು. ಆಗ ಛತ್ರಿ ಇರಲಿಲ್ಲ. ಇದೀಗ ಸಚಿವರು ಕಿರೀಟ ಧಾರಣೆಗಾಗಿ ಛತ್ರಿ ನೀಡುವ ಮೂಲಕ ವೈರಮುಡಿ ಉತ್ಸವವನ್ನು ಪೂರ್ಣತ್ವಗೊಳಿಸಿದ್ದಾರೆ ಎಂದರು.
ಪ್ರಧಾನಿ ನರೇಂದ್ರಮೋದಿ ಮಾತ್ರ ಶ್ರೀರಾಮನಿಗೆ ಛಾಮರವನ್ನು ಕೊಟ್ಟಿದ್ದರು. ಈಗ ರಾಮ, ಕೃಷ್ಣ ಪೂಜೆ ಮಾಡಿದ ಶ್ರೀಚಲುವನಾರಾಯಣಸ್ವಾಮಿಗೆ ಸಚಿವ ಚಲುವರಾಯಸ್ವಾಮಿ ಛಾಮರವನ್ನು (ಛತ್ರಿ) ಕೊಡುಗೆ ನೀಡಿದ್ದು ವಿಶೇಷ ಎಂದರು.
ಈ ವೇಳೆ ಶ್ರೀರಂಗಪಟ್ಟಣ ಶಾಸಕ, ಸೆಸ್ಕ್ ಅಧ್ಯಕ್ಷ ಎ.ಬಿ.ರಮೇಶ ಬಂಡಿಸಿದ್ದೇಗೌಡ, ಕೆಪಿಸಿಸಿ ಸದಸ್ಯ ಎಚ್.ತ್ಯಾಗರಾಜು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ನಿರ್ದೇಶಕ ಎನ್.ಕೃಷ್ಣೇಗೌಡ ಇತರರಿದ್ದರು.




