ಮಂಡ್ಯನಗರ ಹೊರವಲಯದ ಹೊಸ ಬೂದನೂರು ಸಮೀಪ ಶಬರೀ ಮಲೆಗೆ ತೆರಳುತ್ತಿದ್ದ ಭಕ್ತರಿದ್ದ ಮಿನಿ ಬಸ್ಸು ಅಪಘಾತಕ್ಕೀಡಾಗಿ ಚಾಲಕ ಗಾಯಗೊಂಡಿರುವ ಘಟನೆ ಗುರುವಾರ ಸಂಜೆ 5.30ರ ಸಮಯದಲ್ಲಿ ನಡೆದಿದೆ.
ಈ ಘಟನೆಯಲ್ಲಿ ಚಾಲಕ ರವಿ ಎಂಬಾತನಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ಧಾರೆ.

ಬೆಂಗಳೂರಿನ ಕೇಂಗೇರಿಯಿಂದ ಅಯ್ಯಪ್ಪ ಭಕ್ತರು ಶಬರೀಮಲೆ ಯಾತ್ರೆಗೆ ಹೊರಟ್ಟಿದ್ದರು. ಇಂದು ಸಂಜೆ 5.30ರ ಸಮಯದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದಾಗ ಹೊಸ ಬೂದನೂರು ಸಮೀಪ ಮಿನಿ ಬಸ್ಸಿನ ಆಕ್ಸೆಲ್ ಕಟ್ಟಾಗಿ, ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ನಿಂತುಕೊಂಡಿತು. ಘಟನೆಯಲ್ಲಿ ಬಸ್ಸು ಜಖಂಗೊಂಡಿದ್ದು, ಯಾತ್ರಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಈ ಸಂದರ್ಭದಲ್ಲಿ ವಾಹನದಲ್ಲಿ 24 ಶಬರೀಮಲೆ ಭಕ್ತರಿದ್ದರು ಎಂದು ತಿಳಿದು ಬಂದಿದೆ.
ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.




