ರೇಷ್ಮೆ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದೆ ಇಲ್ಲ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ಮಂಡ್ಯ ಜಿಲ್ಲಾ ಪಂಚಾಯತ್ ಕಾವೇರಿ ಸಭಾಂಗಣದಲ್ಲಿ ನಡೆದ 2023-24 ನೇ ಸಾಲಿನ ಮೇ ಅಂತ್ಯದವರೆಗಿನ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೆಡಿಪಿ ಸಭೆಯಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಮರಿತಿಬ್ಬೇಗೌಡ, ರೇಷ್ಮೆ ರೈತರಿಗೆ ವರದಾನವಾಗಿರುವ ಪ್ರಮುಖ ಕೃಷಿ ವಿಧಾನವಾಗಿದೆ. ಹಿಂದಿನ ಸರ್ಕಾರ 2000 ಉದ್ಯೋಗಗಳನ್ನು ವಿಲೀನ ಮಾಡುವ ದೃಷ್ಟಿಯಿಂದ ರೇಷ್ಮೆ ಹಾಗೂ ತೋಟಗಾರಿಕೆಯನ್ನು ಕೃಷಿ ಇಲಾಖೆಯಲ್ಲಿ ವಿಲೀನಗೊಳಿಸುವ ಪ್ರಸ್ತಾಪ ಸಲ್ಲಿಸಿತ್ತು. ಇದನ್ನು ಕೈ ಬಿಟ್ಟು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಿ ಎಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅಂತಹ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.
ಮದ್ದೂರು, ಮಳವಳ್ಳಿ ತಾಲೂಕುಗಳಲ್ಲಿ ರೇಷ್ಮೆ ಉತ್ಪಾದನೆ ಪ್ರಮುಖವಾಗಿದ್ದು ಇಲಾಖೆಯಿಂದ ಉತ್ತೇಜನವಿಲ್ಲ, ವಿಸ್ತರಣಾ ಕಚೇರಿಗಳನ್ನು ಮುಚ್ಚಲಾಗಿದೆ.ರೇಷ್ಮೆ ಬೆಳೆಗಾರರು ಕೊಳ್ಳೇಗಾಲ, ರಾಮನಗರ, ಚನ್ನಪಟ್ಟಣಗಳಿಗೆ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ನರೇಂದ್ರಸ್ವಾಮಿ ಆತಂಕ ವ್ಯಕ್ತಪಡಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಮಂಡ್ಯ ನಗರದ ಡಿಸಿ ಕಚೇರಿ ಆವರಣದಲ್ಲಿರುವ ತೋಟಗಾರಿಕಾ ಇಲಾಖೆಯ ಒಂದು ಭಾಗವನ್ನು ನ್ಯಾಯಾಂಗ ಇಲಾಖೆಗೆ ಹಸ್ತಾಂತರಿಸುವ ಸಂಬಂಧ 8 ಷರತ್ತುಗಳನ್ನು ವಿಧಿಸಿ ನೀಡಲು ತೀರ್ಮಾನಿಸಲಾಗಿತ್ತು. ಇದೀಗ ಅದನ್ನು ಕೈಬಿಟ್ಟು ನ್ಯಾಯಾಂಗ ಇಲಾಖೆಗೆ ಸೂಕ್ತ ಜಾಗ ಕಲ್ಪಿಸಲು ಕ್ರಮ ವಹಿಸಲಾಗುವುದು. ಈ ಸಂಬಂಧ ಉದ್ಭವಿಸುವ ಸಮಸ್ಯೆಗಳನ್ನು ಕಾನೂನು ಮಂತ್ರಿಗಳೊಂದಿಗೆ ಚರ್ಚಿಸಿ ಬಗೆಹರಿಸಲಾಗುವುದು ಎಂದು ಸಚಿವರು ತಿಳಿಸಿದರು.ನ್ಯಾಯಾಂಗ ಇಲಾಖೆಗೆ ಪರ್ಯಾಯ ಸ್ಥಳ ಒದಗಿಸಲಾಗುವುದು ಎಂದರು.
ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಮಾತನಾಡಿ ನಗರದ ಹೃದಯ ಭಾಗದಲ್ಲಿರುವ ಹಸಿರು ವಲಯವನ್ನು ಈಗಿರುವಂತೆ ಉಳಿಸಿಕೊಳ್ಳಬೇಕು ಎಂದು ಆಗ್ರಹಪಡಿಸಿದರು.
ವೀಳ್ಯದೆಲೆ ಬೆಳೆಗಾರರಿಗೆ ಪರಿಹಾರ ನೀಡಿ ಎಂದ ಶಾಸಕ ಪಿ.ಎಂ.ನರೇಂದ್ರಸ್ವಾಮಿ
ಮಳವಳ್ಳಿ ತಾಲೂಕಿನಲ್ಲಿ ತೋಟಗಾರಿಕೆ ಬೆಳೆ ನಷ್ಟ ಹೊಂದಿದ ಕೃಷಿಕರಿಗೆ ಪರಿಹಾರ ನೀಡಲಾಗುತ್ತಿದೆ.ಆದರೆ ವೀಳ್ಯದೆಲೆ ಬೆಳಗಾರರಿಗೆ ಪರಿಹಾರ ಸಿಗುತ್ತಿಲ್ಲ ಎಂಬ ಆತಂಕ ವ್ಯಕ್ತಪಡಿಸಿದರು. ಬೇರೆಯವರ ಜಮೀನಿನಲ್ಲಿ ಗುತ್ತಿಗೆ ಪದ್ಧತಿಯಲ್ಲಿ ಬೆಳೆದ ಬೆಳೆಗೆ ಪರಿಹಾರ ನೀಡಲು ಬರುವುದಿಲ್ಲ ಎಂದು ಕೃಷಿ ಅಧಿಕಾರಿ ಹಾಗೂ ಜಿಲ್ಲಾಧಿಕಾರಿಗಳು ಪರಿಹಾರ ನೀಡುವಲ್ಲಿ ಆಗುತ್ತಿರುವ ಸಮಸ್ಯೆಯನ್ನು ಸಭೆಯ ಗಮನಕ್ಕೆ ತಂದರು. ಇದಕ್ಕೆ ಉತ್ತರಿಸಿದ ಸಚಿವರು ಅಡ್ಡಿ ಆತಂಕ ಹೇಳುವುದರ ಬದಲು ರೈತರಿಗೆ ಅನುಕೂಲವಾಗುವ ಮಾರ್ಗೋಪಾಯ ಕಂಡುಹಿಡಿಯಬೇಕು. ಕಂದಾಯ, ಕೃಷಿ ಮತ್ತು ಪಂಚಾಯತ್ ರಾಜ್ ಇಲಾಖೆಗಳು ಒಗ್ಗೂಡಿ ರೈತರಿಗೆ ಮಾಹಿತಿ ನೀಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು.
ಮಿಮ್ಸ್ ಅವ್ಯವಸ್ಥೆಗೆ ಆಕ್ರೋಶ
ಮಂಡ್ಯ ವೈದ್ಯಕೀಯ ಸಂಸ್ಥೆಗಳಲ್ಲಿ ಇರುವ ವೈದ್ಯರ ಕೊರತೆ, ಗರ್ಭಿಣಿ ಸ್ತ್ರೀಯರು ಕುಳಿತುಕೊಳ್ಳಲು ಸ್ಥಳಾಭಾವ, ಕ್ಯಾನ್ಸರ್ ಆಸ್ಪತ್ರೆಯ ಸ್ಥಿತಿಗತಿ, ಟ್ರಾಮಾ ಕೇರ್ ಸೆಂಟರ್ ಪ್ರಾರಂಭ, ಡಯಾಲಿಸಿಸ್ ಸಮಸ್ಯೆ,ಆಸ್ಪತ್ರೆ ಬಳಿಯ ಸ್ಲಂ ಜನರ ಸ್ಥಳಾಂತರಗಳ ಬಗ್ಗೆ ಶಾಸಕರಾದ ಮರಿತಿಬ್ಬೇಗೌಡ, ರವಿಕುಮಾರ್, ರಮೇಶ್ ಬಂಡಿಸಿದ್ದೇಗೌಡ ಗಮನಸೆಳೆದರು. ಇದಕ್ಕೆ ಉತ್ತರಿಸುವಲ್ಲಿ ಮಿಮ್ಸ್ ನಿರ್ದೇಶಕ ಮಹೇಂದ್ರ ಅವರು ವಿಫಲರಾದಾಗ ಕಳವಳ ವ್ಯಕ್ತಪಡಿಸಿದ ಸಚಿವರು ಜಿಲ್ಲಾಧಿಕಾರಿಗಳು ಪೂರ್ವಭಾವಿ ಸಭೆ ನಡೆಸಿ ಸಮಸ್ಯೆಗಳನ್ನು ಪರಿಶೀಲಿಸಲು ಸೂಚಿಸಿದರಲ್ಲದೆ, ಸದ್ಯದಲ್ಲೇ ತಾವು ಭೇಟಿ ನೀಡಿ ಪರಿಶೀಲಿಸುವುದಾಗಿ ತಿಳಿಸಿದರು.
ಮೇಲುಕೋಟೆ ಕ್ಷೇತ್ರದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ ಹೊಳಲು ಗ್ರಾಮದ ಆರೋಗ್ಯ ಕೇಂದ್ರದ ವೈದ್ಯರ ಗೈರುಹಾಜರಿ, ಶಿವಳ್ಳಿ ಆಸ್ಪತ್ರೆಯಲ್ಲಿ ಮೂಳೆ ತಜ್ಞರು ಇಲ್ಲದಿರುವ ಬಗ್ಗೆ ಗಮನಸೆಳೆದರು. ಹೊರಗುತ್ತಿಗೆ ನೌಕರರಿಗೆ ಸಂಬಳ ಆಗುತ್ತಿಲ್ಲ ಎಂದರು.ಬಸರಾಳು ಆಸ್ಪತ್ರೆಯ ವೈದ್ಯರ ಕೊರತೆ ಬಗ್ಗೆ ಶಾಸಕ ರವಿಕುಮಾರ್ ಮಾತನಾಡಿದರು.ಸ್ಲಂ ಬೋರ್ಡ್ ಅಧಿಕಾರಿಗಳ ವಿರುದ್ಧ ತಮ್ಮ ಅಸಹನೆ ವ್ಯಕ್ತಡಿಸಿದರು. ಸಚಿವರು ಮಾತನಾಡಿ ನಿರ್ಮಾಣವಾಗಿರುವ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಸರಿಪಡಿಸಿ ೧೫ ದಿನಗಳೊಳಗೆ ಆಸ್ಪತ್ರೆ ಪಕ್ಕದ ಸ್ಲಂ ಜನರನ್ನು ಸ್ಥಳಾಂತರಿಸಬೇಕು ಎಂದು ಸೂಚಿಸಿದರು.
ಮಳವಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಬೆಲೆಬಾಳುವ ಉಪಕರಣಗಳಿದ್ದರು ತಾಂತ್ರಿಕ ಸಿಬ್ಬಂದಿಯ ಕೊರತೆ ಇದೆ. ಆಸ್ಪತ್ರೆಯ ಸ್ಥಿತಿಯನ್ನು ಹೇಳೋರು ಕೇಳೋರು ಯಾರು ಇಲ್ಲ.ಅದನ್ನು ಆಸ್ಪತ್ರೆ ಎನ್ನಲು ಸಾಧ್ಯವೇ ಎಂದು ನರೇಂದ್ರಸ್ವಾಮಿ ಕಿಡಿಕಾರಿದರು.
ಕೃಷಿ ಇಲಾಖೆಯ ಬಗ್ಗೆ ನಡೆದ ಚರ್ಚೆಯಲ್ಲಿ ಕೃಷಿ ಇಲಾಖೆ ಅಧಿಕಾರಿ ಮಾತನಾಡಿ ಜಿಲ್ಲೆಯಲ್ಲಿ ಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಇಲ್ಲ. ಈ ಬಾರಿ ವಾಡಿಕೆಗಿಂತ ಮಳೆ ಕಡಿಮೆಯಾಗಿದೆ. ಬೆಳೆ ವಿಮೆಗೆ ಕ್ರಮಕೈಗೊಳ್ಳಲಾಗುವುದು ಎಂದರು. ಕೃಷಿ ಸಚಿವರು ಮಾತನಾಡಿ ರೈತರಿಗೆ ತಲುಪಬೇಕಾದ ಸೌಲಭ್ಯಗಳು ಸಕಾಲದಲ್ಲಿ ತಲುಪಲಿ.ಕಂಪನಿಗಳ ಉದ್ಧಾರ ಬೇಡ ಎಂದು ಕಿವಿಮಾತು ಹೇಳಿದರು. ಕಳಪೆ ರಸಗೊಬ್ಬರ ಸರಬರಾಜಾಗದಂತೆ ಎಚ್ಚರಿಕೆ ವಹಿಸಿ ಎಂದರು.
ಸಭೆಯಲ್ಲಿ ಪಶುಪಾಲನಾ ಇಲಾಖೆ, ಮೀನುಗಾರಿಕಾ ಇಲಾಖೆ, ತೋಟಗಾರಿಕೆ, ಆಯುಷ್ ಇಲಾಖೆ ಬಗ್ಗೆ ಮಾಹಿತಿ ಪಡೆಯಲಾಯಿತು.
ಸಭೆಯಲ್ಲಿ ಶಾಸಕರಾದ ಹೆಚ್.ಟಿ.ಮಂಜು,ಕೆ.ಎಂ.ಉದಯ್, ವಿಧಾನಪರಿಷತ್ ಸದಸ್ಯರಾದ ದಿನೇಶ್ ಗೂಳೀಗೌಡ, ಮಧು ಜಿ ಮಾದೇಗೌಡ, ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಹೆಚ್.ಎಲ್ ನಾಗರಾಜು,ಜಿಲ್ಲಾ ಪಂಚಾಯತ್ ಸಿಇಓ ಶೇಖ್ ತನ್‌ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಭಾಗವಹಿಸಿದ್ದರು.




