ಮದ್ದೂರು ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಆಯೋಜಿಸಲಾಗಿದ್ದ ಜನಸ್ಪಂದನ ಕಾರ್ಯಕ್ರಮದಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ಭಾವುಕರಾದ ಪ್ರಸಂಗ ಜರುಗಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ನಾವು ಎಷ್ಟೇ ಪ್ರಾಮಾಣಿಕವಾಗಿ ಜನರ ಸಮಸ್ಯೆಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು ಕೆಲವರಿಗೆ ತೃಪ್ತಿಯೇ ಇಲ್ಲ, ಕಳೆದ ಬಾರಿಯ ಸರ್ಕಾರ ಕಳೆದ ಐದು ವರ್ಷದಲ್ಲಿ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮತ್ತು ನಮ್ಮ ಸರ್ಕಾರ ಬಂದ ಎರಡೂವರೆ ವರ್ಷದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕೆಲಸಗಳನ್ನು ಅವಲೋಕಿಸಿ ನೋಡಿ ಯಾರೂ ಎಷ್ಟು ಕೆಲಸ ಮಾಡಿದ್ದಾರೆ ಎಂಬುದರ ಬಗ್ಗೆ ನಿಮಗೆ ಸ್ಪಷ್ಟತೆ ದೊರೆಯುತ್ತದೆ ಎಂದು ಹೇಳಿದರು.
2018 ರಲ್ಲಿ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರದಲ್ಲಿ ಸಿಎಂ ಸ್ಥಾನ ಗಿಟ್ಟಿಸಿಕೊಂಡ ಕುಮಾರಸ್ವಾಮಿ ಅವರು ರೈತರ ಸಾಲವನ್ನು ಮನ್ನಾ ಮಾಡಲಾಗುವುದು ಎಂದು ಘೋಷಣೆ ಮಾಡಿದರು. ಆದರೆ ಇಂದಿಗೂ ಎಷ್ಟೋ ರೈತರ ಸಾಲ ಮನ್ನವಾಗಿಲ್ಲ, ಜೊತೆಗೆ ಅವರ ಸರ್ಕಾರದಲ್ಲಿ ಮನ್ನಾ ಮಾಡಿದ ಸಾಲದ ಮೊತ್ತ ನಮ್ಮ ಸರ್ಕಾರ ಪಾವತಿಸುತ್ತಿದೆ. ಇಲ್ಲಿಯವರೆಗೆ 480 ಕೋಟಿಯಷ್ಟು ಸಾಲವನ್ನು ಪಾವತಿಸಿದೆ ಹಾಗೂ ಇನ್ನೂ 400 ರಿಂದ 500 ಕೋಟಿ ಬಾಕಿ ಉಳಿದಿದೆ ಎಂದು ಹೇಳಿದರು.
ನಾನು ನಾಲ್ಕು ಬಾರಿ ಎಂ.ಎಲ್.ಎ ಹಾಗೂ ಒಂದು ಬಾರಿ ಎಂ.ಪಿ ಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ನಾಗಮಂಗಲ ಕ್ಷೇತ್ರದಿಂದ ಎಂ.ಎಲ್.ಎ ಸ್ಥಾನಕ್ಕಾಗಿ ಸ್ಪರ್ಧಿಸದ 2018 ರಲ್ಲಿ ಜನರು ಸರಿಸುಮಾರು 50 ಸಾವಿರ ಮತಗಳ ಅಂತರದಿಂದ ಸೋಲಿಸಿದರು. ಕ್ಷೇತ್ರದ ಅಭಿವೃದ್ಧಿಗಾಗಿ ಸಾಕಷ್ಟು ಕೆಲಸ ಕಾರ್ಯಗಳು ಮಾಡಿದ್ದೆ ಆದರೂ ಜನರು ನನ್ನ ಕೈ ಹಿಡಿಯಲಿಲ್ಲ ಎಂದು ಭಾವುಕರಾದರು.
ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ
ಕೇಂದ್ರ ಸರ್ಕಾರ ರಾಜ್ಯ ಸರ್ಕಾರಕ್ಕೆ ನೀಡಬೇಕಾಗಿದ್ದ ಅನುದಾನವನ್ನು ಸರಿಯಾಗಿ ನೀಡುತ್ತಿಲ್ಲ ಕಳೆದ ಬಾರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ 3000 ಕೋಟಿಯಷ್ಟು ಅನುದಾನವನ್ನು ರಾಜ್ಯಕ್ಕೆ ತಂದಿತು. ರಾಜ್ಯದಿಂದ ಆರಿಸಿ ಕಳಿಸಲಾದ ಎಂ ಪಿ ಗಳು ಕೇಂದ್ರದ ಕ್ಯಾಬಿನೆಟ್ ಚರ್ಚೆಯಲ್ಲಿ ಕೇಳಬೇಕು. ಆದರೆ ರಾಜ್ಯದ ಎಂ ಪಿ ಗಳಿಗೆ ಮರ್ಯಾದೆ ಇಲ್ಲ. ನಮಗೂ ಇದಕ್ಕೂ ಸಂಬಂಧವೇ ಇಲ್ಲ ಎಂಬಂತೆ ವರ್ತಿಸುತ್ತಿದ್ದಾರೆ ಅವರ ಜವಾಬ್ದಾರಿಯನ್ನು ಮರೆತಿದ್ದಾರೆ ಎಂದು ಕಿಡಿ ಕಾರಿದರು.
ರಾಜ್ಯದ ಎಂಪಿಗಳು ರಾಜ್ಯ ಸರ್ಕಾರದ ವಿರುದ್ಧ ಮಾತ್ರ ಮಾತನಾಡಲು ಮುಂದೆ ಬರುತ್ತಾರೆ. ಪ್ರಧಾನಿಯ ಬಳಿ ಅನುದಾನ ಕೇಳುವ ಧೈರ್ಯ ಯಾರಿಗೂ ಇಲ್ಲ. ಕೇಂದ್ರ ಮಾಡಬೇಕಾದ ಅಭಿವೃದ್ಧಿ ಕಾರ್ಯಗಳನ್ನು ರಾಜ್ಯ ಸರ್ಕಾರ ಜನರ ಹಿತಕ್ಕಾಗಿ ಮಾಡುತ್ತಿದೆ. ನಮ್ಮ ಜಿಲ್ಲೆಯ ಅಧಿಕಾರಿಗಳು ಜನರ ಅಭಿವೃದ್ಧಿಗಾಗಿ ಸಾಕಷ್ಟು ಪ್ರಾಮಾಣಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದ್ದಾರೆ ಎಂದರು.




