Tuesday, November 24, 2026

ಪ್ರಾಯೋಗಿಕ ಆವೃತ್ತಿ

ನಬಾರ್ಡ್‌ ಹಣಕಾಸು ನೆರವು ಶೇ.58ರಷ್ಟು ಇಳಿಕೆಯಾದರೂ ಗುರಿ ಸಾಧಿಸುತ್ತೇವೆ: ಕೆ.ಎನ್‌.ರಾಜಣ್ಣ


ವಿಧಾನ ಪರಿಷತ್‌ನಲ್ಲಿ ಮಾಹಿತಿ ನೀಡಿದ ಸಹಕಾರ ಸಚಿವ ಕೆ.ಎನ್‌.ರಾಜಣ್ಣ
ವಿಧಾನ ಪರಿಷತ್ ಶಾಸಕ ದಿನೇಶ ಗೂಳಿಗೌಡ ಅವರ ಚುಕ್ಕೆ ಗುತುತಿನ ಪ್ರಶ್ನೆಗೆ ಸಚಿವರ ಉತ್ತರ


ಬೆಂಗಳೂರು ನಬಾರ್ಡ್‌ ರಾಜ್ಯಕ್ಕೆ ನೀಡುವ ನೆರವನ್ನು ಶೇ.58 ರಷ್ಟು ಕಡಿಮೆ ಮಾಡಿದ್ದರಿಂದ ರಾಜ್ಯದ ರೈತರಿಗೆ ಸಹಕಾರ ಸಂಘಗಳ ಮೂಲಕ ಸಾಲ ನೀಡಲು ಅಡಚಣೆಯಾಗಿದೆ. ಆದರೂ ಮುಖ್ಯಮಂತ್ರಿಗಳು ನೀಡಿದ ಗುರಿ ಸಾಧಿಸುತ್ತೇವೆ ಎಂದು ಸಹಕಾರ ಸಚಿವ ಕೆ.ಎನ್‌.ರಾಜಣ್ಣ ತಿಳಿಸಿದರು.

ವಿಧಾನ ಪರಿಷತ್‌ ಶಾಸಕ ದಿನೇಶ ಗೂಳಿಗೌಡ ಅವರು, ವಿಧಾನ ಪರಿಷತ್‌ನಲ್ಲಿ ಮಂಗಳವಾರ ಕೇಳಿದ ಚುಕ್ಕೆ ಗುರುತಿನ ಪ್ರಶ್ನೆಗೆ ಅವರು ಉತ್ತರ ನೀಡಿದರು. ಆರ್ಥಿಕ ನೆರವು ಹೆಚ್ಚಿಸಲು ಕೇಂದ್ರ ಹಾಗೂ ನಬಾರ್ಡ್‌ ಜತೆ ಪತ್ರ ವ್ಯವಹಾರ ನಡೆಸಿದ್ದು, ಇನ್ನಷ್ಟು ನೆರವು ನೀಡುವ ನಿರೀಕ್ಷೆ ಇದೆ ಎಂದರು. ಹಾಗಾದರೆ, ಈ ವರ್ಷ ಮುಖ್ಯಮಂತ್ರಿ ಗಳು ನೀಡಿದ ಸಾಲದ ಗುರಿ ತಲುಪುವುದು ಕಷ್ಟವೇ ಎಂದು ದಿನೇಶ್ ಗೂಳಿಗೌಡ ಅವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಖ್ಯಮಂತ್ರಿಯವರು ನೀಡಿದ ಗುರಿಯನ್ನು ತಲುಪುವುದಾಗಿ ತಿಳಿಸಿದರು.

2,364 ಕೋಟಿ ರೂ. ನೆರವು ಇಳಿಕೆ ; ನಬಾರ್ಡ್‌ ನೆರವು ಕಡಿಮೆಯಾಗಿದ್ದೇಕೆ..?

ರಾಜ್ಯ ಸರ್ಕಾರ ಪ್ರಸ್ತಾವನೆ ಕಳಿಸಲು ವಿಳಂಬವಾಯಿತಾ ಎಂದು ದಿನೇಶ್ ಅವರು ಪ್ರಶ್ನಿಸಿದ್ದರು. ಅದಕ್ಕೆ ಉತ್ತರಿಸಿದ ಸಚಿವರು, ರಾಜ್ಯದ ಸಹಕಾರ ಕ್ಷೇತ್ರಕ್ಕೆ ನಬಾರ್ಡ್‌, ಎನ್‌ಸಿಡಿಸಿ, ಎನ್‌ಜಿಡಿಬಿ ಮೂರು ಹಣಕಾಸು ಸಂಸ್ಥೆಗಳು ನೆರವು ನೀಡುತ್ತವೆ. ರಾಜ್ಯದ ರೈತರಿಗೆ ಅಫೆಕ್ಸ್‌ ಬ್ಯಾಂಕ್‌ ಮೂಲಕ ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಸಾಲ ನೀಡಉವ ಸಲುವಾಗಿ ನಬಾರ್ಡ್‌ 2023-24 ನೇ ಸಾಲಿನಲ್ಲಿ 5,600 ಕೋಟಿ ರೂ.ಗಳನ್ನು ನೀಡಿತ್ತು. ಆದರೆ, ಈ ವರ್ಷ 3,226 ಕೋಟಿ ರೂ. ಮಾತ್ರ ಆರ್ಥಿಕ ನೆರವು ನೀಡಿದೆ. ಎಂದರೆ, ಕಳೆದ ವರ್ಷಕ್ಕೆ ಹೋಲಿಸಿದರೆ 2,364 ಕೋಟಿ ರೂ. ಕಡಿಮೆಯಾಗಿದೆ. ಕಳೆದ ಐದು ವರ್ಷದಲ್ಲಿ ನಬಾರ್ಡ್‌ ಹಾಗೂ ಇತರ ಸಂಸ್ಥೆಗಳು ರೈತರಿಗೆ ಸಾಲ ನೀಡಲು ನೀಡಿದ ನೆರವು 5,924 ಕೋಟಿ ರೂ.ಗಳಷ್ಟು ಕಡಿಮೆಯಾಗಿದೆ ಎಂದು ವಿವರಿಸಿದರು.

ನಿರಂತರ ಪತ್ರ ವ್ಯವಹಾರ
ಕೇಂದ್ರ ಸರ್ಕಾರ ಜನರಲ್‌ ಲೈನ್‌ ಆಫ್‌ ಕ್ರೆಡಿಟ್‌ ಆರ್ಗನೈಜೇಶನ್‌ನಿಂದ ನಬಾರ್ಡ್‌ಗೆ ಹಣ ಬಿಡುಗಡೆ ಆಗುತ್ತದೆ. ಅಲ್ಲಿಂದ ರೈತರಿಗೆ ಸಾಲ ಕೊಡಲು ರಾಜ್ಯ ಸರ್ಕಾರಗಳಿಗೆ ಹಣ ನೀಡಲಾಗುತ್ತದೆ. ಈ ವರ್ಷ ಮೊದಲ ಹಂತದಲ್ಲಿ ನಬಾರ್ಡ್‌ 2,340 ಕೋಟಿ ರೂ. ಮಾತ್ರ ಆರ್ಥಿಕ ನೆರವು ನೀಡಿತ್ತು. ನಂತರ ಮುಖ್ಯಮಂತ್ರಿಗಳು ಕೇಂದ್ರ ಸರ್ಕಾರಕ್ಕೆ ಪತ್ರ ಕೊಟ್ಟು, ಮನವಿ ಮಾಡಿದ್ದರು. ಸಹಕಾರ ಸಚಿವನಾಗಿ ನಾನೂ ಕೇಂದ್ರ ಸರ್ಕಾರಕ್ಕೆ ಹಾಗೂ ನಮ್ಮ ರಾಜ್ಯದ ಎಲ್ಲ ಲೋಕಸಭೆ ರಾಜ್ಯ ಸಭೆ ಸದಸ್ಯರಿಗೆ ಪತ್ರ ಬರೆದು, ಹಣ ಬಿಡುಗಡೆ ಕಡಿಮೆಯಾಗಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದೆ. ನಬಾರ್ಡ್‌ ದೇಶದ ಎಲ್ಲ ರಾಜ್ಯಗಳಿಗೆ ಆರ್ಥಿಕ ನೆರವು ಕಡಿಮೆ ಮಾಡಿದೆ. ಆದರೆ, ನಮ್ಮ ರಾಜ್ಯದಿಂದ ನಿರಂತರವಾಗಿ ಪತ್ರ ವ್ಯವಹಾರ, ಮನವಿ ಮಾಡಿದ್ದರಿಂದ 896 ಕೋಟಿ ರೂ.ಗಳನ್ನು ನಂತರ ಎರಡನೇ ಹಂತದಲ್ಲಿ ಬಿಡುಗಡೆ ಮಾಡಲಾಯಿತು. ಇನ್ನೂ ಪತ್ರ ವ್ಯವಹಾರ ಮುಂದುವರಿಸಿದ್ದರಿಂದ ಮತ್ತಷ್ಟು ಹಣ ನೀಡುವ ಆಶಾ ಭಾವನೆ ಹೊಂದಿದ್ದೇವೆ ಎಂದರು.

9,219 ಕೋಟಿ ರೂ ಬೇಡಿಕೆ
ರಾಜ್ಯದಲ್ಲಿ ರೈತರಿಗೆ ಸಾಲ ನೀಡಲು 9,219 ಕೋಟಿ ರೂ. ಹಣಕಾಸಿನ ಬೇಡಿಕೆ ಇದೆ. ಈ ಬಗ್ಗೆ ನಾವು ಸರ್ಕಾರ ಹಾಗೂ ಅಫೆಕ್ಸ್‌ ಬ್ಯಾಂಕ್‌ನಿಂದಲೂ ನಬಾರ್ಡ್‌ ಹಾಗೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಸಾಮಾನ್ಯವಾಗಿ ಪ್ರತಿ ವರ್ಷದಿಂದ ವರ್ಷಕ್ಕೆ ಶೇ. 10 ರಿಂದ 20 ರಷ್ಟು ನೆರವು ಜಾಸ್ತಿ ಕೊಡಬೇಕು. ದುರ್ದೈವ ಎಂದರೆ ಕಳೆದ ಸಾಲಿಗಿಂತ ಕಡಿಮೆ ಹಣ ನೀಡಿದ್ದಾರೆ. ಅಲ್ಲಿನ ಲಭ್ಯತೆ ಆಧಾರದ ಮೇಲೆ ರೈತರಿಗೂ ಸಾಲ ಸೌಲಭ್ಯವನ್ನು ನಾವು ಹಂಚಿಕೆ ಮಾಡಿದ್ದೇವೆ ಎಂದರು.

ಗುರಿ ತಲುಪಲು ಅಸಾಧ್ಯ..?
ಸಹಕಾರ ಸಂಘಗಳ ಸಾಲ ಎಂದರೆ, ಸರ್ಕಾರದ ಸಾಲ ಎಂದು ಹಳ್ಳಿ ರೈತರು ತಿಳಿದುಕೊಂಡಿರುತ್ತಾರೆ. ಆದರೆ, ಸರ್ಕಾರದ ಬಂಡವಾಳ ಇಲ್ಲ. ರೈತರು ಕೊಡಬೇಕಾದ ಬಡ್ಡಿಯನ್ನು ರಾಜ್ಯ ಸರ್ಕಾರ ತುಂಬಿಕೊಡುತ್ತದೆ. ಸಾಲದ ಹಣ ಸಂಪೂರ್ಣವಾಗಿ ಅಫೆಕ್ಸ್‌ ಬ್ಯಾಂಕ್‌ ನಬಾರ್ಡ್‌ನಿಂದ ಸಾಲ ಪಡೆಯುತ್ತಾರೆ. ನಬಾರ್ಡ್‌ನಿಂದ ಶೇ.30 ರಿಂದ ಗರಿಷ್ಠ ಶೇ.40 ರಷ್ಟು ನೆರವು ಬರುತ್ತದೆ. ಉಳಿದ ಹಣವನ್ನು ಅಫೆಕ್ಸ್‌ ಬ್ಯಾಂಕ್‌ಗಳು ಹಾಗೂ ಡಿಸಿಸಿ ಬ್ಯಾಂಕ್‌ಗಳು ಅವರಲ್ಲಿರುವ ಠೇವಣಿ ಮುಂತಾದ ಸ್ವಂತ ಬಂಡವಾಳದಿಂದ ನೀಡುತ್ತವೆ. ಕಳೆದ ಸಾಲಿನಲ್ಲಿ ರಾಜ್ಯದ ವಿವಿಧ ಸಹಕಾರ ಬ್ಯಾಂಕ್‌ಗಳ ಮುಖಾಂತರ 21 ಲಕ್ಷ ರೈತರಿಗೆ 15,960 ಕೋಟಿ ರೂ. ಸಾಲ ನೀಡಲಾಗಿತ್ತು. ಈ ವರ್ಷ 37 ಲಕ್ಷ ರೈತರಿಗೆ 27 ಸಾವಿರ ಕೋಟಿ ರೂ. ಸಾಲ ಕೊಡುವ ಗುರಿ ಹೊಂದಿರುವುದಾಗಿ ಮುಖ್ಯಮಂತ್ರಿ ಅವರು ಬಜೆಟ್‌ನಲ್ಲಿ ಘೋಷಿಸಿದ್ದಾರೆ. ನಬಾರ್ಡ್‌ ನೆರವು ಕಡಿಮೆ ಮಾಡಿದರೆ, ಸಾಲದ ಗುರಿ ತಲುಪಲು ಸಾಧ್ಯವಿಲ್ಲವೇ ಎಂದು ದಿನೇಶ ಗೂಳಿಗೌಡ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವರು, ಮುಖ್ಯಮಂತ್ರಿಯವರು ನೀಡಿದ ಗುರಿಯನ್ನು ತಲುಪುವುದಾಗಿ ತಿಳಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ