ಹಾಲು ಉತ್ಪಾದಕರಿಗೆ ಪಾವತಿಸಲು ಬಾಕಿ ಇರುವ ಪ್ರೋತ್ಸಾಹಧನವನ್ನು ಅನುದಾನ ಬಿಡುಗಡೆಯಾದ ತಕ್ಷಣ ಪಾವತಿಸಲು ಕ್ರಮವಹಿಸಲಾಗುವುದು ಎಂದು ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ.ವೆಂಕಟೇಶ್ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಬುಧವಾರ ಶಾಸಕ ಮಧು ಜಿ.ಮಾದೇಗೌಡ ಅವರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಸರ್ಕಾರದ ಲೆಕ್ಕ ಶೀರ್ಷಿಕೆ-100 (ಸಾಮಾನ್ಯ)ರಡಿ ಹೆಚ್ಚುವರಿ ಅನುದಾನ ಬಿಡುಗಡೆಯಾಗದ ಕಾರಣ ಪ್ರೋತ್ಸಾಹಧನ ಪಾವತಿಗೆ ಬಾಕಿ ಇರುತ್ತದೆ. ಅನುದಾನ ಬಿಡುಗಡೆಯಾದ ತಕ್ಷಣ ಪಾವತಿಸಲು ಕ್ರಮವಹಿಸಲಾಗುವುದು ಎಂದು ತಿಳಿಸಿದ್ದಾರೆ.
ಮಂಡ್ಯ ಜಿಲ್ಲೆಯಲ್ಲಿ ಸಾಮಾನ್ಯ ವರ್ಗದವರಿಗೆ ಏಪ್ರಿಲ್ ಮತ್ತು ಮೇ ಮಾಹೆಗಳಲ್ಲಿ ಪಾವತಿಸಬೇಕಿರುವ ಪ್ರೋತ್ಸಾಹಧನದ ಒಟ್ಟು ಮೊತ್ತ ರೂ. 23,88,41,820 ಗಳಾಗಿವೆ, ಹಾಗೂ ಮೇ ಮಾಹೆಯಲ್ಲಿ ಪರಿಶಿಷ್ಠ ಜಾತಿಯವರಿಗೆ ರೂ.23,00,836/- ಮತ್ತು ಪಂಗಡದವರಿಗೆ ರೂ. 4,15,775/- ಪ್ರೋತ್ಸಾಹಧನ ಪಾವತಿಸಲು ಬಾಕಿ ಇರುತ್ತದೆ ಎಂದು ತಿಳಿಸಿದ್ದಾರೆ.
ಹಣ ದುರುಪಯೋಗ
ಮಂಡ್ಯ ಜಿಲ್ಲೆಯಲ್ಲಿ ಒಟ್ಟು 575 ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳಿದ್ದು, ಈ ಪೈಕಿ 98 ಸಂಘಗಳಲ್ಲಿ ರೂ. 1.50 ಕೋಟಿ ಹಣ ದುರುಪಯೋಗವಾಗಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದ್ದಾರೆ.




