ಮಳವಳ್ಳಿ ಪಟ್ಟಣದ ಕೋಟೆ ರಸ್ತೆಯಲ್ಲಿರುವ ಲಕ್ಷ್ಮಿನರಸಿಂಹ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಿಇಒ ಅವರು ಲಕ್ಷಾಂತರೂ ಹಣವನ್ನು ದುರುಪಯೋಗಪಡಿಸಿಕೊಂಡಿದ್ದಾರೆಂದು ಆರೋಪಿಸಿ ಕೆಲ ನಿರ್ದೇಶಕರು ಹಾಗೂ ಸದಸ್ಯರು ಸಂಘದ ಕಚೇರಿಗೆ ಮುತ್ತಿಗೆ ಹಾಕಿ ಕಾರ್ಯದರ್ಶಿ ಅವರಿಂದ ವಸೂಲಿ ಮಾಡಿ ಸಂಘಕ್ಕೆ ಆಗಿರುವ ನಷ್ಟವನ್ನು ಸರಿಪಡಿಸಬೇಕೆಂದು ಒತ್ತಾಯಿಸಿದರು.
ಮಳವಳ್ಳಿ ತಾಲ್ಲೂಕಿನ ಕಂಸಾಗರದ ಕೆ.ಟಿ.ಕುಮಾರ್ ಎಂಬುವವರು ಸಂಘದ ವ್ಯಾಪ್ತಿಯಲ್ಲಿ ಇಲ್ಲದಿದ್ದರೂ ಅವರ ಹೆಸರಿನಲ್ಲಿ 1.8 ಲಕ್ಷ ರೂ.ಮಂಜೂರು ಮಾಡಲಾಗಿದೆ. ಹಲವು ವರ್ಷಗಳ ಹಿಂದೆ ಸತ್ತಿರುವ ವ್ಯಕ್ತಿಯ ಹೆಸರಿನಲ್ಲೂ ನಕಲಿ ದಾಖಲಾತಿ ಸಿದ್ದಪಡಿಸಿ ಸಾಲ ನೀಡಲಾಗಿದೆ. ಕೆಲವು ಸದಸ್ಯರಿಗೆ ಹೆಚ್ಚುವರಿ ಸಾಲ ಮಂಜೂರು ಮಾಡಿಕೊಂಡು ಚೆಕ್ ಮೂಲಕ ಹಣವನ್ನು ಡ್ರಾ ಮಾಡಿ ಬಳಸಿಕೊಂಡಿದ್ದಾರೆಂದು ದೂರಿದರು.
ಅಧ್ಯಕ್ಷ ಎಂ.ವಿ.ಮಾಯಣ್ಣ ಮಾತನಾಡಿ, ಸಂಘದ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿರುವ ಪ್ರೇಮ್ ಕುಮಾರಿ ಅವರು ಹಣ ದುರುಪಯೋಗ ಮಾಡಿಕೊಂಡಿರುವ ಬಗ್ಗೆ ಸಾಕಷ್ಟು ದೂರು ಬಂದಿವೆ. ಹಲವು ಬಾರಿ ಪ್ರಶ್ನೆ ಮಾಡಿದ್ದರೂ ಸಮರ್ಪಕ ಉತ್ತರ ಕೊಡುತ್ತಿಲ್ಲ, ತಪ್ಪು ಒಪ್ಪಿಕೊಂಡು ಸ್ವಲ್ಪ ಹಣವನ್ನು ಮರು ಪಾವತಿ ಮಾಡಿದ್ದಾರೆ. ಜು.24ರಂದು ಸಭೆ ನಡೆಸಿ ಅವರನ್ನು ಅಮಾನತು ಮಾಡಲಾಗಿತ್ತು. ಆದರೆ ಅವರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದರು.
ಸಿಇಒ ಪ್ರೇಮ್ ಕುಮಾರಿ ಮಾತನಾಡಿ, ರೈತರಿಗೆ ಸಂಘದ ವತಿಯಿಂದ ನೀಡಬೇಕಿದ್ದ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಿಕೊಳ್ಳಲಾಗುವುದೆಂದು ಹೇಳಿದರು. ಇದೇ ಸಂದರ್ಭದಲ್ಲಿ ನಿರ್ದೇಶಕರು ಸದಸ್ಯರು ಇದ್ದರು.




