ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಹಿಂದೆಂದೂ ಇಂತಹ ಕೆಟ್ಟ ಆಡಳಿತ ನೋಡಿರಲಿಲ್ಲ. ಬಿಜೆಪಿ ಆಡಳಿತ ನಡೆಸಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದರು.
ಪಾಂಡವಪುರ ಪಟ್ಟಣದ ಹರಳಹಳ್ಳಿಯಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಸಮಾವೇಶದಲ್ಲಿ ಅವರು ಮಾತನಾಡಿದರು.
ನಾವು ರಾಜಕಾರಣಿ ಎಂದು ಹೇಳಿಕೊಳ್ಳಲು ನಾಚಿಕೆ ಆಗುತ್ತಿದೆ.ಧರ್ಮದ ಹೆಸರಲ್ಲಿ ನಡೆದ ರಾಜಕೀಯ ನೋಡಿದ್ದೇವೆ. ಜೆಡಿಎಸ್ ಪಕ್ಷ ನಾವೆಲ್ಲಾ ಒಂದೇ ತಾಯಿ ಮಕ್ಕಳಂತೆ ಬದುಕಲು ಅವಕಾಶ ಮಾಡಿಕೊಡುತ್ತದೆ ಎಂದು ಅಲ್ಪಸಂಖ್ಯಾತರಿಗೆ ಭರವಸೆ ನೀಡಿದರು.
1994ರಲ್ಲಿ ಜಾ.ದಳದ ಸಿ.ಎಂ.ಇಬ್ರಾಹಿಂ ಅವರು ರಾಜ್ಯಾಧ್ಯಕ್ಷರಾಗಿದ್ದಾಗ ಜಾ.ದಳ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿತ್ತು. ಇದೀಗ ಮತ್ತೆ ರಾಜ್ಯದಲ್ಲಿ 1994ರ ಜಾ.ದಳದ ಪರ್ವ ಮರುಕಳಿಸಲಿದೆ ಎಂದು ಹೇಳಿದರು.

ಎರಡು ರಾಷ್ಟ್ರೀಯ ಪಕ್ಷಗಳ ದುರಾಡಳಿತದಿಂದ ಜನತೆ ಬೇಸತ್ತು ಹೋಗಿದ್ದಾರೆ. ಹಾಗಾಗಿ ರಾಜ್ಯದ ಜನತೆ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದ್ದು ಮುಂದಿನ 2023ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಜಾ.ದಳ ಅಧಿಕಾರಕ್ಕೆ ಬರಲಿದ್ದು, ಎಚ್.ಡಿ.ಕುಮಾರಸ್ವಾಮಿ ಅವರು ನೂರಕ್ಕೆ ನೂರು ಮುಖ್ಯಮಂತ್ರಿಯಾಗಲಿದ್ದಾರೆ ಎಂದರು.
40 ವರ್ಷಗಳ ರಾಜಕೀಯ ಜೀವನದಲ್ಲಿ ನನಗೆ ಕ್ಷೇತ್ರದ ಜನತೆ ಜಿ.ಪಂ.ಸದಸ್ಯನಾಗಿ, ಶಾಸಕನಾಗಿ, ಸಂಸದನಾಗಿ, ಸಚಿವರಾಗಿಸಿ ಕೊಟ್ಟಿದ್ದಾರೆ.ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದರು.
ಹುಬ್ಬಳ್ಳಿಯಲ್ಲಿ ಈದ್ಗಾ ಮೈದಾನ ವಿವಾದವನ್ನು 24 ಗಂಟೆಯಲ್ಲಿ ಬಗೆಹರಿಸಿದ್ದು ಎಚ್.ಡಿ.ದೇವೇಗೌಡರು. ಸಿ.ಎಂ.ಇಬ್ರಾಹಿಂ ಅವರೊಂದಿಗೆ ಸೇರಿ ಹಲವು ವರ್ಷಗಳಿಂದ ಕಗ್ಗಂಟಾಗಿದ್ದ ವಿವಾದವನ್ನು ಬಗೆಹರಿಸಿ ಧ್ವಜ ಹಾರಿಸಿದ ಕೀರ್ತಿ ದೇವೇಗೌಡರಿಗೆ ಸಲ್ಲುತ್ತದೆ ಎಂದರು.
ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಜಾ.ದಳ ರಾಷ್ಟ್ರೀಯ ಉಪಾಧ್ಯಕ್ಷ ಜಫ್ರುಲ್ಲಾಖಾನ್, ಮಹಿಳಾ ವಿಭಾಗದ ರಾಜ್ಯ ಕಾರ್ಯದರ್ಶಿ ನಜ್ಮಾನಜೀರ್, ಹೈಕೋರ್ಟ್ ವಕೀಲ ಎಂ.ಎಸ್.ಮುಕ್ರಂಪಾಷ, ವಸ್ತು ಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಬ್ದುಲ್ಲಾ, ಜಾ.ದಳ ತಾಲ್ಲೂಕು ಅಧ್ಯಕ್ಷ ಮಲ್ಲೇಶ್, ಮೌಲಾನಾ ಅಬ್ದುಲ್ಸಲಾಂ, ಪುರಸಭೆ ಅಧ್ಯಕ್ಷೆ ಅರ್ಚನಾ ಚಂದ್ರು, ಉಪಾಧ್ಯಕ್ಷೆ ಶ್ವೇತಾ ಉಮೇಶ್, ಸದಸ್ಯ ಇಮ್ರಾನ್ ಷರೀಫ್, ನಜೀರ್ ಅಹಮದ್, ಎಲೆಕೆರೆ ಸಮಿಯುಲ್ಲಾ, ಅಬ್ದುಲ್ ವಾಹಿದ್, ಲಿಂಗರಾಜು ಸೇರಿದಂತೆ ಹಲವರು ಹಾಜರಿದ್ದರು.




