ಪೌರಕಾರ್ಮಿಕರು ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ತಮ್ಮ ಮನೆಯನ್ನು ಬೆಳಗಿಸಬೇಕು, ಪೌರಕಾರ್ಮಿಕರ ಮಕ್ಕಳು ಪೌರಕಾರ್ಮಿಕರನ್ನಾಗಿ ಮಾಡಬೇಕು ಎನ್ನುವ ಮನಸ್ಥಿತಿಯನ್ನು ಬಿಟ್ಟು ಶಿಕ್ಷಣವಂತರನ್ನಾಗಿ ಮಾಡಬೇಕೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ಸಲಹೆ ನೀಡಿದರು.
ಮಳವಳ್ಳಿ ಪಟ್ಟಣದ ಪುರಸಭೆ ಆವರಣದಲ್ಲಿ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುವಾದವನ್ನು ನಾಶ ಪಡಿಸುವ ಉದ್ದೇಶದಿಂದ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ಅವರು ಹಿಂದೆಯೇ ಸಂಸತ್ನಲ್ಲಿ ಮನುಸ್ಮೃತಿಯನ್ನು ಸುಟ್ಟುಹಾಕಿದರು. ಆದರೇ ಇಂದಿಗೂ ವೃತ್ತಿಯಾಧಾರಿತ ಜಾತಿಸೃಷ್ಠಿಯಾಗಿರುವುದು ಭಾರತ ದೇಶದಲ್ಲಿ ಬಿಟ್ಟರೇ ಬೇರೆ ಯಾವ ರಾಷ್ಟ್ರದಲ್ಲಿಯೂ ಇಲ್ಲ, ಕೆಟ್ಟ ಸಂಸ್ಕೃತಿ ಮತ್ತು ಪರಂಪರೆಯನ್ನು ತೊಡೆದು ಹಾಕಲು ಮುಂದಾಗಬೇಕಿದೆ ಎಂದು ಹೇಳಿದರು.

ನಿವೇಶನ ಹಂಚಿಕೆ ಮಾಡಲು ಬದ್ದ
ನಿವೇಶನ ಇಲ್ಲದ ಪೌರಕಾರ್ಮಿಕರಿಗೆ ಕಡ್ಡಾಯವಾಗಿ ನಿವೇಶನ ಹಂಚಿಕೆ ಮಾಡಲು ಬದ್ದನಾಗಿರುತ್ತೇನೆ, ಪೌರಕಾರ್ಮಿಕರು ಸಲ್ಲಿಸಿರುವ ಮನವಿಯನ್ನು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು, ಸಧ್ಯದಲ್ಲಿಯೇ ನಿವೇಶನ ಫಲಾನುಭವಿಗಳನ್ನು ಆಯ್ಕೆಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ನಿವೇಶನ ಹಂಚಿಕೆ ಮಾಡಲು ಮುಂದಾಗುವುದಾಗಿ ಹೇಳಿದರು.
ಪೌರಕಾರ್ಮಿಕರು ಸ್ವಚ್ಚತೆ ಮಾಡುವಾಗ ಮುನ್ನೆಚ್ಚರಿಕೆ ಕ್ರಮವನ್ನು ಅನುಸರಿಸಬೇಕು, ಆಗಿಂದಾಗೆ ಆರೋಗ್ಯ ತಪಾಸಣೆಗೆ ಒಳಪಡಿಸಿಕೊಳ್ಳಬೇಕು, ವೃತ್ತಿಯ ಬಗ್ಗೆ ಗೌರವವನ್ನು ಹೆಚ್ಚಿಸಿಕೊಳ್ಳಬೇಕು, ಸಮಾಜದ ನೆಮ್ಮದಿಗಾಗಿ ದುಡಿಯುವ ಪೌರಕಾರ್ಮಿಕರಿಗೆ ಕೋಟಿ ನಮನಗಳನ್ನು ಸಲ್ಲಿಸುವುದಾಗಿ ಹೇಳಿದರು.
ವೃತ್ತಿ ಆಧಾರಿತವಾದ ಜಾತಿಯನ್ನು ಯಾವುದೋ ಕಾಲದಲ್ಲಿ ಮಾಡಲಾಗಿದೆ, ಪೂರಾಣ ಎಂದಿಗೂ ಇತಿಹಾಸವಾಗುವುದಿಲ್ಲ, ಆದರೇ ದೇಶದಲ್ಲಿ ಪುರಾಣವೇ ಮುನ್ನೆಡೆಯಲ್ಲಿದ್ದು, ಇದರ ಆಧಾರದ ಮೇಲೆ ಮನುವಾದವನ್ನು ಅಘೋಷಿತವಾಗಿ ಇಂದಿಗೂ ಆಚರಣೆಯಲ್ಲಿರುವುದು ವಿಷಾದನೀಯ ಎಂದರು.
ನಾವೆಲ್ಲರೂ ಸಮಾನರು ಎನ್ನುವುದನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು. ಸಂವಿಧಾನದ ಮೂಲ ಆಶಯಗಳನ್ನು ಅರ್ಥ ಮಾಡಿಕೊಳ್ಳದಿದ್ದರೇ ಮಾನವೀಯತೆಯ ಅರ್ಥ ಗೊತ್ತಿರುವುದಿಲ್ಲ, ಮನುಷ್ಯನನ್ನು ಮನುಷ್ಯನ್ನಾಗಿ ಕಾಣದ ವ್ಯವಸ್ಥೆಯನ್ನು ನಾವು ದಿಕ್ಕರಿಸಬೇಕು ಎಂದು ತಿಳಿಸಿದರು.
ಪುರಸಭೆ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಪುರಸಭೆ ವತಿಯಿಂದ ಪೌರಕಾರ್ಮಿಕರಿಗೆ ಅರ್ಥಪೂರ್ಣವಾಗಿ ಪೌರಕಾರ್ಮಿಕರ ದಿನಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದೆ, ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು, ಸರ್ಕಾರದಿಂದ ಸಿಗುವ ಸಲವತ್ತುಗಳನ್ನು ಸಮರ್ಪಕವಾಗಿ ಪೌರಕಾರ್ಮಿಕರಿಗೆ ಸಿಗುವಂತೆ ಆಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದರು.
ವಿವಿಧ ಕ್ರೀಡೆಯಲ್ಲಿ ವಿಜೇತರಾದ ಪೌರಕಾರ್ಮಿಕರಿಗೆ ಶಾಸಕ ಪಿ.ಎಂ ನರೇಂದ್ರಸ್ವಾಮಿ ನೀಡಿದರು, ಎಲ್ಲಾ ಪೌರಕಾರ್ಮಿಕರನ್ನು ಅಭಿನಂದಿಸಿ ಗೌರವಿಸಲಾಯಿತು. ಶಾಸಕರು ಪೌರಕಾರ್ಮಿಕರಿಗೆ ಊಟ ಬಡಿಸುವುದರ ಮೂಲಕ ಸೇವೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಎನ್.ಬಸವರಾಜು, ಸದಸ್ಯರಾದ ನೂರುಲ್ಲಾ, ಎಂ.ಎನ್.ಶಿವಸ್ವಾಮಿ, ಸಿದ್ದರಾಜು, ಎಂ.ಆರ್.ರಾಜಶೇಖರ್, ನಾಗೇಶ್, ರವಿ, ಪ್ರಮೀಳಾ, ಇಂದ್ರಮ್ಮ ದೊಡ್ಡಯ್ಯ, ಮಣಿ ನಾರಾಯಣ, ಮುಖ್ಯಾಧಿಕಾರಿ ಎಂ.ಸಿ.ನಾಗರತ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ದೊಡ್ಡಯ್ಯ, ಸಿ.ಪಿ.ರಾಜು, ಮುಖಂಡರಾದ ಪೊತ್ತಂಡೆ ನಾಗರಾಜು, ರಮೇಶ್, ಅಂಕರಾಜು, ರಮೇಶ್, ಷರೀಫ್ ಸೇರಿದಂತೆ ಇತರರು ಇದ್ದರು.




