Thursday, October 24, 2024

ಪ್ರಾಯೋಗಿಕ ಆವೃತ್ತಿ

ಒಂದೇ ಒಂದು ಯೋಜನೆ ತರಲಾಗದವನು ಮಣ್ಣಿನ ಮಗನಂತೆ ; ನರೇಂದ್ರಸ್ವಾಮಿ ವಾಗ್ದಾಳಿ

ಮಳವಳ್ಳಿ ತಾಲೂಕಿಗೆ ಒಂದೇ ಒಂದು ನೀರಾವರಿ ಯೋಜನೆ, ಏತ ನೀರಾವರಿ ಯೋಜನೆ ತರುವ ಯೋಗ್ಯತೆ ಇಲ್ಲದವನು ನಾನು ಮಣ್ಣಿನ ಮಗನೆಂದು ಬೊಗಳೆ ಬಿಡುತ್ತಾನೆ ಎಂದು ಮಾಜಿ ಶಾಸಕ ಅನ್ನದಾನಿ ವಿರುದ್ದ ಶಾಸಕ ಪಿ.ಎಂ.ನರೇಂದ್ರಸ್ವಾಮಿ ವಾಗ್ದಾಳಿ ನಡೆಸಿದರು.

ಮಳವಳ್ಳಿ ಪಟ್ಟಣದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇವರ ನಾಯಕರು ಇಗ್ಲೂರು ಬಲದಂಡೆ ಯೋಜನೆ ಮಾಡಿಯೇ ತೀರುವುದಾಗಿ ಈ ಭಾಗದ ಕೆರೆಗಳನ್ನು ತುಂಬಿಸಿ ನಂತರ ಹಲಗೂರಿಗೆ ಕಾಲಿಡುವುದಾಗಿ ಶಪಥ ಮಾಡಿದ್ದರು. ಆದರೆ ಈ ಯಾವ ಕೆಲಸ ಮಾಡದೇ ಜನರನ್ನು ವಂಚಿಸಿದರು ಎಂದು ಕಿಡಿಕಾರಿದರು.

ನೀರು ಸೋರಿಕೆ ತಡೆಯಲಾಗದ ಶೂರ

ಮಳವಳ್ಳಿ ಪಟ್ಟಣದ ಪೇಟೆವೃತ್ತದಲ್ಲಿ ನೀರು ತುಂಬಿಕೊಂಡು ಹತ್ತಾರು ಅಂಗಡಿ ಮಳಿಗೆಗಳಿಗೆ ನೀರು ನುಗ್ಗುತ್ತಿದ್ದದ್ದನ್ನು  ಐದು ವರ್ಷಗಳ ಕಾಲ ಸರಿಪಡಿಸಲಾಗದ, ಕಂದೇಗಾಲ ಕೆರೆಗೆ ಒಂದು ಗೇಟ್ ವಾಲ್ ಹಾಕಿ ನೀರು ಸೋರಿಕೆ ತಡೆಯಲಾಗದ ಶೂರ, ಅದೇ ಕೆರೆಯಲ್ಲಿ ನಿಂತು ನನ್ನ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ ಎಂದು ಲೇವಡಿ ಮಾಡಿದರು.

ಮಂಡ್ಯ ಜಿಲ್ಲೆಯ ಜನ ನೀರು ಕೇಳಲು ಹೋದಾಗ ಕೆ ಆರ್ ಎಸ್ ಕಿಲಿಕೈ ನನ್ನ ಬಳಿ ಇಲ್ಲ, ಕೇಂದ್ರದವರ ಕೈಯಲ್ಲಿದೆ ಎಂದಿದ್ದ ನಿಮ್ಮ ನಾಯಕರ ಮಾತನ್ನು ಮರೆತು, ಈಗ ಕೆರೆಗಳ ಬಳಿ ನಿಂತು ನೀರು ಬಿಟ್ಟಿಲ್ಲ ಎಂದು ಕೂಗುಮಾರಿ ಕೂಗು ಹಾಕುತ್ತಿರುವುದು ಹಾಸ್ಯಾಸ್ಪದ ಎಂದು ಟೀಕಿಸಿದರು.

ತನ್ನ ಅಧಿಕಾರಾವಧಿಯಲ್ಲಿ ಯಾವ ಯೋಜನೆಯನ್ನು ಕ್ಷೇತ್ರಕ್ಕೆ ತಾರದೇ ತಾನು ತಂದಿದ್ದ ಪಟ್ಟಣದ ಕುಡಿಯುವ ನೀರು ಪೂರೈಕೆ ಯೋಜನೆ, ಕಿರುಗಾವಲು ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ, ಪೂರಿಗಾಲಿ ಹನಿ ನೀರಾವರಿ ಯೋಜನೆಗಳನ್ನು ಮಣ್ಣುಪಾಲು ಮಾಡಿದ್ದ ಈ ಮಹಾನುಭಾವ ಕೆರೆಗಳಿಗೆ ಬಾಗಿನ ಅರ್ಪಿಸುವ ಹಿಂದಿನ ದಿನ ನನ್ನನ್ನು ಟೀಕಿಸಿ ವೀಡಿಯೋ ಹರಿಬಿಟ್ಟಿರುವುದು, ಈತನ ನೀಚತನಕ್ಕೆ ಸಾಕ್ಷಿಯಾಗಿದೆ. ಕೆಲಸ ಮಾಡುವವರಿಗೆ ಅಡ್ಡಗಾಲು ಹಾಕುವ, ಓಡುವವರಿಗೆ ತೊಡರುಗಾಲು ಹಾಕುವ ಆಟ ಹೆಚ್ಚು ದಿನ ನಡೆಯದು ಎಂದು ಎಚ್ಚರಿಸಿದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!