ದೇಶದ ಕೋಟ್ಯಾಂತರ ಬಡ ಜನರಿಗೆ ಉದ್ಯೋಗ ಭದ್ರತೆ ಒದಗಿಸಿದ್ದ ಮನರೇಗಾ ಯೋಜನೆಯನ್ನು ರದ್ದು ಮಾಡುವ ಮೂಲಕ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿರುವ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ದ ಧ್ವನಿಯೆತ್ತಲು ಸಾಧ್ಯವಾಗದ ಸ್ಥಿತಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಲುಪಿದ್ದು, ಇಂತಹವರಿಂದ ಮಂಡ್ಯ ಜಿಲ್ಲೆಯ ಅಭಿವೃದ್ದಿ ಸಾಧ್ಯವೇ ? ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಪ್ರಶ್ನಿಸಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಉದ್ಯಾನದಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಯುವ ಸಮ್ಮೇಳನ ಉದ್ಘಾಟಿಸಿ, `ಮನರೇಗಾ ಬಚಾವೊ ಸಂಗ್ರಾಮ್’ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, `ವಿಬಿ ಜೀ ರಾಮ್ ಜೀ’ಯಿಂದ ಕೂಲಿಕಾರರಿಗೆ ಅನ್ಯಾಯವಾಗುತ್ತಿರುವುದು ಗೊತ್ತಿದ್ದರೂ ಎನ್‌ಡಿಎ ಮೈತ್ರಿಕೂಟದಲ್ಲಿ ಕೇಂದ್ರ ಸಚಿವರಾಗಿರುವ ಎಚ್.ಡಿ. ಕುಮಾರಸ್ವಾಮಿ ಅವರು ಯೋಜನೆಯನ್ನು ಸಮರ್ಥಿಸಿಕೊಳ್ಳುವ ಮೂಲಕ ಮೌನ ವಹಿಸಿದ್ದಾರೆ ಎಂದು ಛೇಡಿಸಿದರು.
ಬಡವರಿಗೆ ಕೂಲಿ ಕೊಡದೆ ಬೀದಿಗೆ ತಳ್ಳಿದೆ
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ದೇಶವನ್ನು ಹರಾಜು ಮತ್ತು ಅಡವಿಡುವುದನ್ನು ಬಿಟ್ಟು ಉಳಿದೆಲ್ಲ ಕೆಲಸವನ್ನು ಮಾಡುತ್ತಿದೆ. ಕೋಟ್ಯಂತರ ಕೂಲಿಕಾರರ ಜೀವನಕ್ಕೆ ಆಸರೆಯಾಗಿದ್ದ ಮನರೇಗಾ ಯೋಜನೆಯನ್ನು ರದ್ದುಪಡಿಸಿ, ವಿಬಿ ಜೀ ರಾಮ್ ಜೀ ಯೋಜನೆಯನ್ನು ಜಾರಿಗೆ ತರುವ ಮೂಲಕ ಕೂಲಿಕಾರರಿಗೆ ಕೊನೆಯ ಮೊಳೆ ಹೊಡೆದಿದೆ ಎಂದು ಶಾಸಕ ಪಿ. ರವಿಕುಮಾರ್ ಆರೋಪಿಸಿದರು.ಬಡವರಿಗೆ ಕೂಲಿ ಕೊಡದೆ ಬೀದಿಗೆ ತಳ್ಳಿದೆ. ದೇಶಕ್ಕೆ ಸ್ವಾತಂತ್ರö್ಯ ತಂದು ಕೊಟ್ಟ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಅಳಿಸಿ ಹಾಕಿ `ವಿಬಿ ಜೀ ರಾಮ್ ಜೀ’ ಎಂಬ ಹೆಸರಿನಲ್ಲಿ ಕೂಲಿಕಾರರ ಹೊಟ್ಟೆಯ ಮೇಲೆ ಹೊಡೆಯಲಾಗಿದೆ. ಇದರ ವಿರುದ್ಧ ಹೋರಾಟ ಅನಿವಾರ್ಯವಾಗಿದ್ದು, ಪ್ರತಿ ಹಳ್ಳಿ ಹಳ್ಳಿಯಲ್ಲೂ ಹೋರಾಟ ನಡೆಸಬೇಕೆಂದು ಹೇಳಿದರು.
ಹಿಂದೂ ಮತ್ತು ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಸಿ, ಕೊಲೆ ಮಾಡುತ್ತಿದ್ದರೂ ಮೌನ ವಹಿಸಿದ್ದಾರೆ. ಚುನಾವಣೆ ಬಂದಾಗ ಇಂತಹ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಾರೆ. ಸುಳ್ಳು ಹೇಳುವುದೇ ಇವರ ಕಾಯಕವಾಗಿದೆ ಎಂದರು.
ಪ್ರತಿ ಹಳ್ಳಿ ಹಳ್ಳಿಯಲ್ಲೂ ನರೇಗಾ ಬಚಾವೋ ಹೋರಾಟ ನಡೆಸಿ, `ವಿಬಿ ಜೀ ರಾಮ್ ಜೀ’ ಯೋಜನೆಯಿಂದ ಆಗುವ ಅನ್ಯಾಯಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದರ ಜತೆಗೆ ಈ ಕಾಯ್ದೆಗೆ ಬೆಂಬಲವಾಗಿ ನಿಂತಿರುವ ಜಾತ್ಯತೀತ ಜನತಾದಳವನ್ನು ಸಹ ಕಿತ್ತೊಗೆಯಬೇಕೆಂದು ಕರೆ ನೀಡಿದರು.
ಎನ್‌ಡಿಎ ಜೊತೆ ಜಾ.ದಳದವರು ಹೋಗದಿದ್ದರೆ ಮನರೇಗಾ ಕಾಯಿದೆ ವಿರುದ್ಧ ಮೊದಲು ಬೀದಿಗಿಳಿಯುತ್ತಿದ್ದರು. ಆದರೆ, ಅವರಿಗೆ ಕೇಂದ್ರ ಸಚಿವ ಸ್ಥಾನ ಕೊಟ್ಟಿರುವುದರಿಂದ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅಧಿಕಾರಕ್ಕಾಗಿ ಯಾರ ಜೊತೆಗಾದರೂ ಕೈಜೋಡಿಸುವ ಇಂತಹವರಿಂದ ಜಿಲ್ಲೆಯ ಅಭಿವೃದ್ಧಿ ಸಾಧ್ಯವಿಲ್ಲ. ಆದ್ದರಿಂದ ಜಿಲ್ಲೆಯಿಂದ ಜಾತ್ಯತೀತ ಜನತಾದಳವನ್ನು ಕಿತ್ತೊಗೆಯಬೇಕೆಂದು ಯುವ ಕಾಂಗ್ರೆಸ್ ಕಾರ್ಯಕರ್ತರನ್ನು ಕರೆ ನೀಡಿದರು.
ವಿಶ್ವ ಸುತ್ತಾಡಿರುವುದೇ ಮೋದಿ ಸಾಧನೆ
೧೧ ವರ್ಷದಿಂದ ದೇಶದ ಪ್ರಧಾನಿಯಾಗಿ ಅಧಿಕಾರ ನಡೆಸುತ್ತಿರುವ ನರೇಂದ್ರ ಮೋದಿ ಅವರು ೮ ಸಾವಿರ ಕೋಟಿ ವಿಮಾನದಲ್ಲಿ ಇಡೀ ಪ್ರಪಂಚವನ್ನು ಸುತ್ತಾಡಿರುವುದು ಮತ್ತು ೫೬ ಲಕ್ಷ ಕೋಟಿ ರೂ.ಗಳಿದ್ದ ಸಾಲವನ್ನು ೩ ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಿರುವುದೇ ಮಹಾನ್ ಸಾಧನೆಯಾಗಿದೆ ಎಂದು ಲೇವಡಿ ಮಾಡಿದರು.
ಪೆಟ್ರೋಲ್, ಡೀಸೆಲ್, ಗ್ಯಾಸ್ ಸಿಲಿಂಡರ್ ಬೆಲೆಯನ್ನು ಹೆಚ್ಚಳ ಮಾಡಿದ್ದಾರೆ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆಯೇ ಹೊರತು ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿಲ್ಲ. ಬ್ರಿಟೀಷರಿಗಿಂತ ಅತ್ಯಂತ ಕೆಟ್ಟ ಆಡಳಿತ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಮನರೇಗಾ ಯೋಜನೆಯನ್ನು ಕೇಂದ್ರೀಕೃತಗೊಳಿಸಿ, ವಿಶ್ವದ ಮಹಾನ್ ನಾಯಕ ಮಹಾತ್ಮ ಗಾಂಧೀಜಿ ಅವರ ಹೆಸರನ್ನು ಅಳಿಸಲು ಹೊರಟಿದೆ. ಕಾರ್ಮಿಕರ ಘನತೆ, ಗ್ರಾಮ ಸ್ವರಾಜ್ಯ ಮತ್ತು ರಾಷ್ಟçದ ನೈತಿಕ ಜವಾಬ್ದಾರಿಯನ್ನು ನಾಶಪಡಿಸಿದೆ. ಈ ಕಾಯ್ದೆಯನ್ನು ಹಿಂಪಡೆಯಬೇಕು ಮತ್ತು ಮೂಲ ಮನರೇಗಾ ಕಾಯ್ದೆಯನ್ನು ಮರಳಿ ಜಾರಿಗೊಳಿಸುವವರೆಗೂ ಹೋರಾಟ ನಡೆಸಲಾಗುವುದು ಎಂದರು.
ಕೇಂದ್ರ ಉದ್ಯೋಗದ ಹಕ್ಕನ್ನು ಕಿತ್ತುಕೊಂಡಿದೆ:
ಕೇಂದ್ರ ಸರ್ಕಾರವು ಮನ್ರೇಗಾ ಕಾಯ್ದೆಯನ್ನು ವಾಪಸ್ ಪಡೆಯುವ ಮೂಲಕ ಗ್ರಾಮೀಣ ಭಾಗದ ಜನರ ಉದ್ಯೋಗದ ಹಕ್ಕನ್ನು ಕಿತ್ತುಕೊಳ್ಳುವ ಕೆಲಸವನ್ನು ಮಾಡಿದೆ. ಮನ್ರೇಗಾ ಮೂಲಕ ಪಂಚಾಯಿತಿಗಳಲ್ಲಿ ಆಸ್ತಿ ನಿರ್ಮಾಣವಾಗುತ್ತಿತ್ತು. ಗ್ರಾಮಗಳಲ್ಲಿ ಯಾವ ಕೆಲಸವಾಗಬೇಕೆಂದು ತೀರ್ಮಾನಿಸುವ ಅಧಿಕಾರ ಪಂಚಾಯಿತಿಗಳಿಗಿತ್ತು. ಈಗ ಅದನ್ನು ಸಂಪೂರ್ಣವಾಗಿ ಕಿತ್ತುಕೊಂಡು ಕೆಲಸ ಎಲ್ಲಿ ಆಗಬೇಕು ಎಂದು ಕೇಂದ್ರ ಸರ್ಕಾರ ನಿರ್ದೇಶನ ನೀಡಲಿದೆ. ಮೇಲ್ನೋಟಕ್ಕೆ ೧೨೫ ದಿನ ಕೆಲಸ ನೀಡುವುದು ಎಂದಿದ್ದರೂ, ಕೆಲಸ ಸಿಗುವುದೇ ಅನುಮಾನ ಎಂದರು.
ಯುವಜನತೆಗೆ ಶೇ.೫೦ರಷ್ಟು ಅವಕಾಶ:
ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೇ. ೫೦ರಷ್ಟು ಯುವಜನತೆಗೆ ಅವಕಾಶ ನೀಡಲಾಗುವುದು. ಅದಕ್ಕೂ ಮುನ್ನ ತಮ್ಮ ಸಾಮರ್ಥ್ಯವನ್ನು ತೋರಿಸಬೇಕು. ಆಗ ನಾವೇ ಗುರುತಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದರು.
ವೇದಿಕೆಯಲ್ಲಿ ಶಾಸಕ ಕೆ.ಎಂ. ಉದಯ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ. ಗಂಗಾಧರ, ಕಾರ್ಯಾಧ್ಯಕ್ಷ ಎಂ.ಎಸ್. ಚಿದಂಬರ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಚಿನ್ ಚಲುವರಾಯಸ್ವಾಮಿ, ಉಪಾಧ್ಯಕ್ಷ ಚಲುವರಾಜು, ಮನ್‌ಮುಲ್ ನಿರ್ದೇಶಕ, ಮಾಜಿ ಶಾಸಕ ಅಪ್ಪಾಜಿಗೌಡ, ಮುಡಾ ಅಧ್ಯಕ್ಷ ಬಿ.ಪಿ. ಪ್ರಕಾಶ್, ಯುವ ಕಾಂಗ್ರೆಸ್ ಉಸ್ತುವಾರಿ ನಿಗಮ್ ಭಂಡಾರಿ, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶೈಲೇಂದ್ರ ಕುಮಾರ್, ಕಾಂಗ್ರೆಸ್ ಮುಖಂಡರಾದ ಆರ್.ವಿ.ದೇವರಾಜು, ಸತೀಶ್ ಸಿದ್ದಾರೂಢ, ಅಂಜನಾ ಶ್ರೀಕಾಂತ್, ಸಿ.ಎಂ. ದ್ಯಾವಪ್ಪ ಇತರರು ಉಪಸ್ಥಿತರಿದ್ದರು.



ಬಡವರಿಗೆ ಕೂಲಿ ಕೊಡದೆ ಬೀದಿಗೆ ತಳ್ಳಿದೆ
