ಕೃಷ್ಣರಾಜಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ವಸಂತಪುರ ಗ್ರಾಮದಲ್ಲಿ ಕಳೆದ ಎರಡು ವರ್ಷಗಳಿಂದ ನೂರಾರು ಕೋತಿಗಳು ಗ್ರಾಮದಲ್ಲಿ ಬೀಡು ಬಿಟ್ಟಿದ್ದು, ದಾಂದಲೆ ನಡೆಸಿ ಮನೆಗಳ ಹೆಂಚು ತೆಗೆದು ಮನೆಯೊಳಗಡೆ ಇಳಿದು, ದಿನೋಪಯೋಗಿ ವಸ್ತುಗಳು ಸೇರಿದಂತೆ, ಮನೆಯೊಳಗಿರುವ ಅವಶ್ಯಕ ಆಹಾರ ಪದಾರ್ಥಗಳನ್ನು ಎತ್ತಿಕೊಂಡು ಓಡಿ ಹೋಗುತ್ತಿರುವ ಹಿನ್ನೆಲೆಯಲ್ಲಿ ಬೇಸತ್ತಿದ್ದ ಗ್ರಾಮಸ್ಥರು ಕೋತಿಗಳನ್ನು ಹಿಡಿಸಿ, ಗ್ರಾಮದಿಂದ ಹೊರಗಡೆ ಬಿಡಿಸಿ ಗ್ರಾಮದಲ್ಲಿ ಜನರು ನೆಮ್ಮದಿಯಿಂದ ಜೀವನವನ್ನು ನಡೆಸಲು ಅವಕಾಶ ಮಾಡಿಕೊಡುವಂತೆ ಆಗ್ರಹಿಸಿ ತಾಲೂಕು ಆಡಳಿತ ಹಾಗೂ ಅರಣ್ಯ ಇಲಾಖೆ ವಿರುದ್ಧ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದ್ದರು.
ಕೋತಿಗಳ ದಾಂದಲೆಯ ಹಿನ್ನೆಲೆಯಲ್ಲಿ ವಸಂತಪುರ ಗ್ರಾಮಕ್ಕೆ ಭೇಟಿ ನೀಡಿದ್ದ ಶಾಸಕ ಮಂಜು, ಗ್ರಾಮಸ್ಥರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಕೋತಿಗಳನ್ನು ಹಿಡಿದು ಗ್ರಾಮದಿಂದ ಹೊರಗಡೆ ಬಿಡಿಸಿ ಗ್ರಾಮದ ಜನತೆಗೆ ಅನುಕೂಲ ಮಾಡಿಕೊಡಬೇಕು ಎಂದು ತಾಲೂಕು ವಲಯ ಅರಣ್ಯ ಅಧಿಕಾರಿ ಅನಿತಾ ಪ್ರವೀಣ್ ಅವರಿಗೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಕಾರ್ಯೋನ್ಮುಖರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳು ನಾಗಮಂಗಲ ತಾಲೂಕಿನ ಶಿಕಾರಿಪುರ ಗ್ರಾಮದಿಂದ ಕೋತಿ ಹಿಡಿಯುವಲ್ಲಿ ಪರಿಣಿತರಾಗಿರುವ ಕೃಷ್ಣಪ್ಪ ಮತ್ತು ರಾಮಕೃಷ್ಣ ಅವರ ನೇತೃತ್ವದ ತಂಡವನ್ನು ಕರೆಸಿ , ಕೋತಿಗಳನ್ನು ಹಿಡಿಸಲು ಮುಂದಾಗಿದ್ದಾರೆ.
ಶಿಕಾರಿಪುರ ಗ್ರಾಮದಿಂದ ಆಗಮಿಸಿರುವ ಕೋತಿ ಹಿಡಿಯುವುದರಲ್ಲಿ ಪರಿಣಿತರಾಗಿರುವ ಕೃಷ್ಣಪ್ಪ ಮಾತನಾಡಿ ವಸಂತಪುರ ಗ್ರಾಮದಲ್ಲಿ ಕೋತಿಗಳು ದಾಂದಲೆ ನಡೆಸಿ ಶ್ರೀಸಾಮಾನ್ಯರು ಹಾಗೂ ಮಹಿಳೆಯರು ಮತ್ತು ಶಾಲಾ ಮಕ್ಕಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ವಲಯ ಅರಣ್ಯಾಧಿಕಾರಿಗಳು ನಮಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆಯ ನಿರ್ದೇಶನದಂತೆ ಕೋತಿಗಳನ್ನು ಸುರಕ್ಷಿತವಾಗಿ ಹಿಡಿದು ಅವುಗಳನ್ನು ಮತ್ತೆ ಅರಣ್ಯಕ್ಕೆ ಬಿಡುವ ನಿಟ್ಟಿನಲ್ಲಿ ನಾವು ಗ್ರಾಮದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಎರಡು ಬೋನುಗಳನ್ನು ಇಡಿಸಿ, ಕೋತಿಗಳನ್ನು ಹಿಡಿಯಲು ಕಾರ್ಯಾಚರಣೆ ನಡೆಸಲು ಎಲ್ಲಾ ರೀತಿಯ ಸಿದ್ಧತೆಗಳನ್ನು ಕೈಗೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಬೋನಿಗೆ ಬೀಳದೆ,ಬಂಧಿಸಲು ಕೈಗೆ ಸಿಗದ ಚಾಲಾಕಿ ಕೋತಿಗಳು*.. ಕೋತಿಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲು ನಾಗಮಂಗಲ ತಾಲೂಕಿನ ಶಿಕಾರಿಪುರದಿಂದ ಕೋತಿಗಳನ್ನು ಹಿಡಿಯುವ ಪರಿಣಿತರ ತಂಡದ ಆಗಮನದ ಸುದ್ದಿ ಕೋತಿಗಳಿಗೆ ತಿಳಿಯಿತೋ ಎಂಬಂತೆ ಇಂದು ಶಾಲಾ ಅವರಣಕ್ಕೆ ಕೋತಿಗಳು ಆಗಮಿಸಲು ತೀವ್ರವಾಗಿ ಸತಾಯಿಸಿ, ಗ್ರಾಮದ ತೋಟದೊಳಗೆ ನುಗ್ಗಿ ಚಳ್ಳೆಹಣ್ಣು ತಿನ್ನಿಸಿದವು.
ಕೃಷ್ಣರಾಜಪೇಟೆ ತಾಲೂಕು ವಲಯ ಅರಣ್ಯಾಧಿಕಾರಿ ಅನಿತಾ ಮಾತನಾಡಿ ವಸಂತಪುರ ಗ್ರಾಮದಲ್ಲಿ ಕೋತಿಗಳು ಕಳೆದ ಆರು ತಿಂಗಳುಗಳಿಂದ ದಾಂದಲೆ ನಡೆಸಿ ಗ್ರಾಮಸ್ಥರಿಗೆ ಹಾಗೂ ಗ್ರಾಮದ ಮಹಿಳೆಯರು ಮತ್ತು ಶಾಲಾ ಮಕ್ಕಳಿಗೆ ತೊಂದರೆ ನೀಡುತ್ತಿರುವ ಬಗ್ಗೆ ಶಾಸಕರು, ಕೋತಿಗಳನ್ನು ಹಿಡಿಸಲು ನಿರ್ದೇಶನ ನೀಡಿರುವ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳಿಂದ ಅನುಮತಿಯನ್ನು ಪಡೆದುಕೊಂಡು ಕೋತಿಗಳನ್ನು ಹಿಡಿಸಲು ಕಾರ್ಯಾಚರಣೆ ನಡೆಸಲು ಮುಂದಾಗಿದ್ದೇವೆ . ಒಂದೆರಡು ದಿನಗಳಲ್ಲಿ ಗ್ರಾಮದಲ್ಲಿರುವ ಎಲ್ಲಾ ಕೋತಿಗಳನ್ನು ಹಿಡಿಸಿ ಮರಳಿ ಸುರಕ್ಷಿತವಾಗಿ ಅರಣ್ಯಕ್ಕೆ ಬಿಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.




