ವಿದ್ಯಾಭ್ಯಾಸ ಮುಗಿಸಿದ ನಂತರ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸರ್ಕಾರಿ ಕೆಲಸ ಸಿಗುವುದು ಬಹಳ ಕಷ್ಟಕರ. ದಿನಗಳು ಉರುಳುತ್ತ ಹೋದಂತೆ ಸ್ಪರ್ಧಾತ್ಮಕತೆ ಎನ್ನುವುದು ಹೆಚ್ಚುತ್ತಲೇ ಇರುತ್ತದೆ. ಸ್ವಯಂ ಉದ್ಯೋಗ ಕೈಗೊಳ್ಳಲು ಉದ್ದಿಮೆಗಳನ್ನು ಪ್ರಾರಂಭಿಸಲು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಎಂ.ಎಸ್.ಐ.ಎಲ್ ನ ಮುಖ್ಯ ಪ್ರಧಾನ ವ್ಯವಸ್ಥಾಪಕ ಶ್ರೀನಿವಾಸ ಹೆಚ್ ಎಂ ತಿಳಿಸಿದರು.
ಮಂಡ್ಯನಗರದ ಸುರಭಿ ಹೋಟಲ್ ನಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು ಮತ್ತು ವೇಗಗೊಳಿಸುವುದು (RAMP) ಯೋಜನೆಯಡಿಯಲ್ಲಿ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ಸರ್ಕಾರ, ಎಂ.ಎಸ್.ಎಂ.ಇ ಸೌಲಭ್ಯ ಕಛೇರಿ-ಭಾರತ ಸರ್ಕಾರ, ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಬ್ಯಾಂಕ್ (ಸಿಡ್ಬಿ), ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನಾ ಕೇಂದ್ರ (ವಿ.ಟಿ.ಪಿ.ಸಿ) ಮತ್ತು ಕಾಸಿಯಾ ಸಹಯೋಗದಲ್ಲಿ ಎಂ.ಎಸ್.ಎಂ.ಇ ಔಟ್ ರೀಚ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕದಲ್ಲಿ 15 ಲಕ್ಷಕ್ಕೂ ಹೆಚ್ಚು ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿವೆ, ಇದರಲ್ಲಿ ಉತ್ಪಾದನೆ ಕ್ಷೇತ್ರ, ಸೇವಾ ಕ್ಷೇತ್ರ, ವ್ಯಾಪಾರ ಕ್ಷೇತ್ರಗಳಿವೆ. ಇವುಗಳಲ್ಲಿ ಭಾರತ ಸರ್ಕಾರ ಮೊದಲು ವ್ಯಾಪಾರ ಕ್ಷೇತ್ರವನ್ನು ಸಣ್ಣ ಕೈಗಾರಿಕೆ ಕ್ಷೇತ್ರ ಎಂದು ಪರಿಗಣಿಸುತ್ತಿರಲಿಲ್ಲ ಆದರೆ ಕಳೆದ 2 ವರ್ಷದಿಂದ ವ್ಯಾಪಾರ ಕ್ಷೇತ್ರ ಎಂ.ಎಸ್.ಎಂ.ಇ ವಲಯದಲ್ಲಿ ಸೇರ್ಪಡೆಗೊಂಡಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸುಮಾರು 15 ಲಕ್ಷ ಎಂ.ಎಸ್.ಎಂ.ಇ ಗಳು 1 ಕೋಟಿ ಜನರಿಗೆ ಉದ್ಯೋಗವನ್ನು ಕಲ್ಪಿಸಿದೆ. ಇವುಗಳ ಬಲವರ್ಧನೆಗೆ ರಾಜ್ಯ ಮತ್ತು ಕೇಂದ್ರ ಸರ್ಕಾರವು ಅನೇಕ ಯೋಜನೆಗಳನ್ನು ಜಾರಿಗೊಳಿಸುತ್ತಿದೆ ಎಂದು ಹೇಳಿದರು.
ಆದರೆ ಜನರಿಗೆ ಈ ಯೋಜನೆಯ ಬಗ್ಗೆ ಸಾಕಷ್ಟು ಅರಿವಿಲ್ಲ ಹಾಗೂ ಯಾವ ಕಾಲಘಟ್ಟದಲ್ಲಿ ಯೋಜನೆ ಪಡೆದುಕೊಳ್ಳಬೇಕು ಎಂಬುದರ ಬಗ್ಗೆ ಅರಿವಿಲ್ಲ. ನಿಗದಿತ ಅವಧಿಯೊಳಗೆ ಅದರ ಸೇವೆಯನ್ನು ಪಡೆದುಕೊಳ್ಳಬೇಕು ಅದನ್ನು ಪಡೆದುಕೊಳ್ಳದಿದ್ದರೆ ಉದ್ದಿಮೆದಾರರಿಗೆ ನಷ್ಟಚಾಗುತ್ತದೆ ಎಂದರು.
ಔಟ ರೀಚ್ ಕಾರ್ಯಕ್ರಮದ ಉದ್ದೇಶ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಬಂದಂತಹ ಯೋಜನೆಗಳ ಬಗ್ಗೆ ಮಾಹಿತಿ ತಿಳಿಸುವ ಮತ್ತು ಯೋಜನೆಗಳ ಅವಧಿಯ ಬಗ್ಗೆ ಅರಿವು ಮೂಡಿಸುವುದು ಎಂದು ಹೇಳಿದರು.
ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ದಿನೇಶ ಅವರು ಮಾತನಾಡಿ ಉದ್ದಿಮೆದಾರರಿಗೆ ಮಾಹಿತಿ ನೀಡುವ ಕೆಲಸವನ್ನು ಕೈಗಾರಿಕಾ ಇಲಾಖೆ ಮಾಡುತ್ತಿದೆ. ಉದ್ದಿಮೆಗಳು ಸರ್ಕಾರ ನೀಡುವ ಸೌಲಭ್ಯಗಳಿಗೆ ನಿಗದಿಪಡಿಸಿರುವ ಅವಧಿಯಲ್ಲಿ ಅರ್ಜಿ ಸಲ್ಲಿಸಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಕೃಷಿಯಲ್ಲಿ ಮೊದಲು ಒಂದು ಎಕರೆಯಲ್ಲಿ 4 ರಿಂದ 5 ಜನ ಕೆಲಸ ನಿರ್ವಹಿಸುತ್ತಿದ್ದರು. ಇಂದು 4 ರಿಂದ 5 ಎಕರೆಗೆ ಒಂದು ಟ್ರಾಕ್ಟರ್ ಅಥವಾ ಇನ್ನಿತರೆ ಕೃಷಿ ಉಪಕರಣಗಳು ಕೆಲಸ ನಿರ್ವಹಿಸುತ್ತಿದೆ ಎಂದರು.
ಮಂಡ್ಯ ಜಿಲ್ಲೆಯಲ್ಲಿ ಇರುವ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸುಮಾರು ಪ್ರತಿ ವರ್ಷ 3000 ಜನರು ಪದವಿ ಮುಗಿಸಿ ಉದ್ಯೋಗದ ಹುಡುಕಾಟದಲ್ಲಿ ತೊಡಗುತ್ತಾರೆ. ಇವರಿಗೆ ಕೈಗಾರಿಕೆಗಳಲ್ಲಿ ಉದ್ಯೋಗ ಸೃಷ್ಠಿಯಾಗಬೇಕು.
ಇಲ್ಲ ಸ್ವಯಂ ಉದ್ಯೋಗ ಕೈಗೊಳ್ಳಲು ಅವಕಾಶ ಕಲ್ಪಿಸಬೇಕು.ಇಲ್ಲವಾದಲ್ಲಿ ನಿರುದ್ಯೋಗಿಗಳಾಗುತ್ತಾರೆ. ಉದ್ದಿಮೆಗಳನ್ನು ಪ್ರಾರಂಭಿಸಿ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಳ್ಳಲು ಎಂ.ಎಸ್ ಎಂ ಇ ಹಾಗೂ ಕೈಗಾರಿಕಾ ಇಲಾಖೆಗಳಲ್ಲಿ ಹಲವಾರು ಅವಕಾಶಗಳಿವೆ. ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ಸರ್ಕಾರಿ ಕೆಲಸ ಎನ್ನುವುದು ಪ್ರತಿಯೊಬ್ಬರಿಗೂ ಸಹ ಸಿಗುವುದಿಲ್ಲ. ಕೈಗಾರಿಕೆಗಳಲ್ಲಿ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಬೇಕು ಅಥವಾ ಸ್ವಯಂ ಉದ್ಯೋಗ ಮಾಡುವುದಕ್ಕೆ ಸರ್ಕಾರದಿಂದ ಸಾಲ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.
ಇಡೀ ದೇಶದಲ್ಲಿ 6 ಕೋಟಿ ಎಂ.ಎಸ್.ಎಂ.ಇ ಗಳು ಕೆಲಸ ನಿರ್ವಹಿಸುತ್ತಿವೆ. ಆ ಘಟಕಗಳನ್ನು ನಾವು ಬಲವರ್ಧನೆ ಮಾಡಬೇಕು ಇದರಿಂದ ಉದ್ಯೋಗದ ಅವಕಾಶಗಳು ಕೂಡ ಹೆಚ್ಚು ಬರುತ್ತವೆ ಎಂದು ಹೇಳಿದರು.
ಮಂಡ್ಯ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಕೆ.ಪ್ರಭಾಕರ್ ಅವರು ಮಾತನಾಡಿ ಮಂಡ್ಯ ಜನತೆಗೆ ಉದ್ಯೋಗ ಆಧಾರದ ಮೇಲೆ ಯಾವ ಯಾವ ಕಾರ್ಯಕ್ರಮಗಳು ಇವೇ ಎಂದು ಸರಿಯಾಗಿ ತಿಳಿದಿಲ್ಲ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದಿಂದ ಹಲವಾರು ಯೋಜನೆಗಳು ಇವೇ ಅದನ್ನು ತಿಳಿಸಿಕೊಡುವುದಕ್ಕೆ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಕಳೆದ ಕೆಲವು ವರ್ಷಗಳಿಂದ ಮಂಡ್ಯದಲ್ಲಿ ಕಾರ್ಖಾನೆಗಳಿಗೆ ಹೆಚ್ಚು ಉತ್ತೇಜನ ನೀಡುತ್ತಿಲ್ಲ ಎಂಬ ಆಪಾದನೆ ಇದೇ ಅದನ್ನು ಹೋಗಲಾಡಿಸಿ ವಿದ್ಯಾರ್ಥಿಗಳಿಗೆ ಉದ್ಯೋಗವನ್ನು ನೀಡಬೇಕೆಂದು ಉದ್ಯೋಗ ಮೇಳವನ್ನು ಸಹ ಆಯೋಜಸಿದ್ದೇವೆ ಎಂದರು.
ಜಿಲ್ಲೆಯಲ್ಲಿ ಎಲ್ಲಾ ಕಾರ್ಖಾನೆಗಳನ್ನು ಪ್ರಾರಂಭಿಸಲು ಸಾಧ್ಯವಿಲ್ಲ. ಮಂಡ್ಯದಲ್ಲಿ ಕೃಷಿಗೆ ಹೆಚ್ಚಿನ ಆದ್ಯತೆ ಇರುವುದರಿಂದ ಕೃಷಿಗೆ ಸಂಬಂಧಿಸಿದ ಕಾರ್ಖಾನೆಗಳಿಗೆ ಉತ್ತೇಜನೆ ನೀಡಬೇಕಾಗುತ್ತದೆ ಎಂದರು.
ಕಾಸಿಯಾ ಸಂಸ್ಥೆಯ ಅಧ್ಯಕ್ಷ ಎಂ.ಜಿ ರಾಜಗೋಪಲ್ ಮಾತನಾಡಿ, ಹೆಚ್ಚು ಜನರನ್ನು ಉದ್ದಿಮೆದಾರಾರಾಗಿ ಮಾಡಲು ಎಂ.ಎಸ್.ಎಂ.ಇ ಕಾರ್ಯಕ್ರಮದ ಬಗ್ಗೆ ಅರಿವು ಮೂಡಿಸಲು ಔಟ್ ರೀಚ್ ಕಾರ್ಯಕ್ರಮಗಳನ್ನು 20 ಜಿಲ್ಲೆಗಳಲ್ಲಿ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.
ಸಭೆಯಲ್ಲಿ ಮೈಸೂರು ರಫ್ತು ಸೌಲಭ್ಯ ಕೇಂದ್ರದ ಉಪ ನಿರ್ದೇಶಕಿ ಎಲ್ ಮೇಘಲಾ, ಕಾಸಿಯಾ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್ ಸಾಗರ್, ನಗರದ ಜಂಟಿ ಕಾರ್ಯದರ್ಶಿ ಜೆ.ಎಸ್ ಬಾಬು, ಗ್ರಾಮೀಣ ಜಂಟಿ ಕಾರ್ಯದರ್ಶಿ ಸತೀಶ್ ಎನ್, ಖಜಾಂಚಿ ಮಂಜುನಾಥ್ ಹೆಚ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.




