ಸೋಲು ಗೆಲುವನ್ನು ಸಮಾನಾಗಿ ಸ್ವೀಕರಿಸಿ ಮುಂದೆ ಬರುವ ಲೋಕಸಭೆ, ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗಳಿಗೆ ಈಗಿನಿಂದಲೇ ಪೂರ್ವ ತಯಾರಿ ನಡೆಸಲಾಗುವುದು ಪರಾಜಿತ ಬಿಜೆಪಿ ಅಭ್ಯರ್ಥಿ ಜಿ.ಮುನಿರಾಜು ಹೇಳಿದರು.
ಮಳವಳ್ಳಿ ಪಟ್ಟಣ ಹೊರ ವಲಯದ ಮಾರೇಹಳ್ಳಿ ಲಕ್ಷ್ಮಿನರಸಿಂಹಸ್ವಾಮಿ ದೇವಸ್ಥಾನದ ಬಳಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಬಂದಾಗಿನಿಂದಲೂ ಇಲ್ಲಸಲ್ಲದ ಆರೋಪ, ಅಪವಾದ ಮಾಡುತ್ತಾ ಬಂದರು, ಮೊದಲು ಸೈಟ್ ಹಗರಣ ತಂದರು, ನಂತರ ಆಡಿಯೋ ಬಿಟ್ಟರು, ದೇವರ ಸನ್ನಿಧಿಯಲ್ಲಿ ಹೇಳುತ್ತೇನೆ, ನಾನು ಯಾರ ಹತ್ತಿರವೂ ಒಳ ಒಪ್ಪಂದ ಮಾಡಿಕೊಂಡಿಲ್ಲ, ಚುನಾವಣೆ ಸಮೀಪಿಸುತ್ತಿದ್ದಂತೆ ವಿರೋಧಿಗಳು ಅವರತ್ರ ಇವರತ್ರ ಬುಕ್ ಆಗಿ ಹೋದರು ಎಂದು ಮತದಾರರಿಗೆ ದಾರಿ ತಪ್ಪಿಸಿದರು, ನಾನೇನಾದರೂ ಆ ಕೆಲಸ ಮಾಡಿದ್ದರೇ ನನ್ನ ಕುಟುಂಬವನ್ನು ನರಸಿಂಹಸ್ವಾಮಿ ಸರ್ವ ನಾಶ ಮಾಡಲಿ, ಇಲ್ಲವೇ ನನ್ನ ಮೇಲೆ ಸುಳ್ಳು ಹೇಳಿದ್ದವರಿಗೆ ದೇವರೇ ಶಿಕ್ಷೆ ನೀಡಲಿ ಎಂದರು.
ಕ್ಷೇತ್ರ ಬಿಟ್ಟು ಹೋಗಬಾರದಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಮುಂದಿನ ಐದು ವರ್ಷ ಮಳವಳ್ಳಿಯಲ್ಲಿಯೇ ಇದ್ದು, ಪಕ್ಷ ಸಂಘಟನೆ ಮಾಡುತ್ತೇನೆ, ಎಲ್ಲಾರ ವಿಶ್ವಾಸ ಗಳಿಸುತ್ತೇನೆ, ರಾಜಕಾರಣ ನಿಂತ ನೀರಲ್ಲ, ಹರಿಯುವ ನೀರು, ಎರಡುವರೆ ಲಕ್ಷ ಜನರ ವಿಶ್ವಾಸವನ್ನು ಗಳಿಸುತ್ತೇನೆಂದು ಭರವಸೆ ನೀಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಕೃಷ್ಣ ಮಾತನಾಡಿ, ಕಾಂಗ್ರೆಸ್ ಪಕ್ಷದ ಭರವಸೆಗಳಿಗೆ ಮನಸೋತ ರಾಜ್ಯದ ಜನರು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದಾರೆ. ಬಿಜೆಪಿ ಕಾಯ೯ಕತ೯ರು ದೃತಿಗೆಡದೇ ಬಿಜೆಪಿ ಪಕ್ಷವನ್ನು ಕಟ್ಟಿ ಬೆಳೆಸಲು ಬಿಜೆಪಿ ಕಾಯ೯ಕತ೯ರು ಮುಂದಾಗುತ್ತಾರೆಂದು ಹೇಳಿದರು.
ಗೋಷ್ಠಿಯಲ್ಲಿ ಮುಖಂಡದಾದ ಕೆ.ಸಿ ನಾಗೇಗೌಡ, ಅಶೋಕ್, ಪುಟ್ಟಸ್ವಾಮಿ, ಶಕುಂತಲ, ರಾಜೀವ್, ವೇಣುಗೋಪಾಲ್, ನಾಗಣ್ಣ, ಸಿದ್ದಲಿಂಗಸ್ವಾಮಿ, ನಾಗೇಶ್, ಮಂಜಣ್ಣ ಸೇರಿದಂತೆ ಇತರರು ಇದ್ದರು.




