ಮಂಡ್ಯ ಜಿಲ್ಲೆಯ ರೈತರ ಜೀವನಾಡಿ ಮೈಷುಗರ್ ಕಾರ್ಖಾನೆಯ ಬಾಕಿ ಇರುವ 52.25 ಕೋಟಿ ರೂ. ವಿದ್ಯುತ್ ಬಿಲ್ ರೂಪಾಯಿಯನ್ನು ಮನ್ನಾ ಮಾಡಲು ರಾಜ್ಯ ಸಚಿವ ಸಂಪುಟ ಸಭೆ ತೀರ್ಮಾನ ಕೈಗೊಂಡಿದೆ.
ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳೀಗೌಡ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮನವಿ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.
ರಾಜ್ಯ ಸರ್ಕಾರ ಕಾರ್ಖಾನೆ ಪ್ರಾರಂಭೋತ್ಸವ ಹಾಗೂ ಗ್ಯಾಂಗ್ ಗಳಿಗೆ ನೀಡಲು 15 ಕೋಟಿ ರೂ. ದುಡಿಯುವ ಬಂಡವಾಳಕ್ಕಾಗಿ (ವರ್ಕಿಂಗ್ ಕ್ಯಾಪಿಟಲ್) 35 ಕೋಟಿ ರೂ.ಸೇರಿ ಒಟ್ಟಾರೆ 50 ಕೊಟಿ ರೂ.ಗಳನ್ನು ಕಾರ್ಖಾನೆಯ ಪುನಶ್ವೇತನಕ್ಕೆ ನೀಡಿದೆ. ಪರಿಣಾಮ ಕಳೆದ ವರ್ಷ ಕಾರ್ಖಾನೆಯು ಮಂಡ್ಯದ ರೈತರು ಬೆಳೆದ 2 ಲಕ್ಷ 41 ಸಾವಿರ ಟನ್ ಕಬ್ಬನ್ನು ನುರಿಸಲಾಗಿತ್ತು.
ಆದರೆ, ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಸಮರ್ಪಕವಾಗಿಲ್ಲ. ಕೋಟ್ಯಂತರ ರೂಪಾಯಿ ನಷ್ಟದಲ್ಲಿದೆ. ಅಷ್ಟೊಂದು ಹಣವನ್ನು ವಿದ್ಯುತ್ ಬಿಲ್ ಗೆ ಪಾವತಿಸಿದರೆ, ಈ ಹಂಗಾಮಿನಲ್ಲಿ ಕಬ್ಬು ನುರಿಸುವುದೇ ಕಷ್ಟವಾಗಬಹುದು. ಇದರಿಂದ ಈಗಾಗಲೇ ಕಾರ್ಖಾನೆ ನಂಬಿ ಕಬ್ಬು ಬೆಳೆದಿರುವ ರೈತರಿಗೆ ನಷ್ಟವಾಗಬಹುದು. ಈ ಹಿನ್ನೆಲೆಯಲ್ಲಿ ಕ್ಯಾಬಿನೆಟ್ ನಲ್ಲಿ ನಿರ್ಣಯ ಕೈಗೊಂಡು ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ದಿನೇಶ್ ಗೂಳಿಗೌಡ ಸರ್ಕಾರದ ಗಮನ ಸೆಳೆದಿದ್ದರು.




