ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರು ಪೊಲೀಸರೊಂದಿಗೆ ಸಹಕರಿಸಬೇಕು. ಪ್ರಮುಖವಾಗಿ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸುವ ಮೂಲಕ ಅಪಘಾತಗಳನ್ನು ತಪ್ಪಿಸಿ, ಅಮೂಲ್ಯ ಜೀವಗಳನ್ನು ಉಳಿಸಲು ಸಹಕಾರ ನೀಡಬೇಕು ಎಂದು ಮಂಡ್ಯ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.
ಯತೀಶ್ ನಾಗರೀಕರಲ್ಲಿ ಮನವಿ ಮಾಡಿದರು.
ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯ ಆವರಣದಲ್ಲಿ ನಡೆದ ತಾಲೂಕು ಸಾರ್ವಜನಿಕರ ಸಮಾಲೋಚನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಲ್ಲಿ ರಸ್ತೆ ಅಪಘಾತವು ಈ ವರ್ಷ ಒಂದರಲ್ಲಿಯೇ ಕನಿಷ್ಠ 450ರಿಂದ 500ಕ್ಕೂ ಹೆಚ್ಚು ಜನರು ಅಕಾಲಿಕವಾಗಿ ಸಾವನ್ನಪ್ಪುತ್ತಿದ್ದಾರೆ. ವಾಹನ ಚಾಲಕರು ವೈಯಕ್ತಿಕ ಸುರಕ್ಷತೆಗೆ ಒತ್ತು ನೀಡಿ, ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಿ ಅಮೂಲ್ಯವಾದ ಜೀವ ಹಾಗೂ ಜೀವನದ ಬಗ್ಗೆ ಎಚ್ಚರ ವಹಿಸಬೇಕೆಂದರು..
ಸಮಾಜಘಾತುಕ ಶಕ್ತಿಗಳನ್ನು ಮಟ್ಟ ಹಾಕಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪೋಲಿಸರಿಗೆ ಸಾರ್ವಜನಿಕರು ಅಗತ್ಯವಾದ ಸಹಕಾರ ನೀಡಬೇಕು. ಸಮಾಜದಲ್ಲಿ ಶ್ರೀಸಾಮಾನ್ಯರ ನೆಮ್ಮದಿಯ ಜೀವನಕ್ಕೆ ಭಂಗ ತರುವ ಸಮಾಜಘಾತುಕ ಶಕ್ತಿಗಳ ವಿರುದ್ಧ ಪೊಲೀಸರಿಗೆ ಮಾಹಿತಿಯನ್ನು ನೀಡಿದರೆ, ಅಂತಹ ಕಿಡಿಗೇಡಿಗಳ
ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮುಖಂಡರಾದ ಬಸ್ತಿರಂಗಪ್ಪ, ರಾಜಯ್ಯ, ನಿಂಗಯ್ಯ, ಸುರೇಶ್ ಹರಿಜನ, ಆಸರೆ ಸಮಾಜಸೇವಾ ಟ್ರಸ್ಟ್ ಅಧ್ಯಕ್ಷ ಹೆಚ್.ಬಿ.ಮಂಜುನಾಥ್, ಪ್ರಗತಿ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಕಾಳೇಗೌಡ, ವಿವಿಧ ಸಮಾಜದ ಮುಖಂಡರಾದ ಕೆ.ಗೌಸ್‌ಖಾನ್, ನವೀದ್‌ಅಹಮದ್, ರೈತ ಸಂಘದ ಮುಖಂಡರಾದ ಮುದ್ದುಕುಮಾರ್, ಕರೋಟಿ ತಮ್ಮಯ್ಯ, ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಸೇನೆಯ ತಾಲೂಕು ಅಧ್ಯಕ್ಷ ಸಮೀರ್, ಮಂಡ್ಯ ಜಿಲ್ಲಾ ಛಲವಾದಿ ಮಹಾಸಭಾದ ಅಧ್ಯಕ್ಷ ಮಾಂಬಳ್ಳಿ, ಜಯರಾಂ, ಬಿ.ವಿ.ನಾಗೇಶ್, ಆರ್.ಜಗದೀಶ್ ಸೇರಿದಂತೆ ನೂರಾರು ಮಂದಿ ನಾಗರೀಕರು ಸಭೆಯಲ್ಲಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ವತಿಯಿಂದ ಎಸ್‌ಪಿ ಯತೀಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.




