ವಸ್ತುನಿಷ್ಠ ವರದಿಯಿಂದ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಪತ್ರಿಕಾ ಕ್ಷೇತ್ರವು ದೇಶದ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತಿದೆ ಎಂದು ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಾಗಮಂಗಲ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಪತ್ರಕರ್ತರು ಪೆನ್ ಮತ್ತು ಕ್ಯಾಮೆರಾ ಸಮಾಜದ ಒಳಿತಿಗಾಗಿ ಬಳಸಬೇಕು. ಹಿಂದೆ ಶಿಕ್ಷಣ ಮುಖ್ಯವಾಗಿತ್ತು, ಇಂದು ಕೌಶಲ್ಯ ಮುಖ್ಯವಾಗಿದೆ. ಆದ್ದರಿಂದ ಪತ್ರಕರ್ತರು ಇಂದಿನ ಕಾಲಕ್ಕೆ ಅನುಗುಣವಾಗಿ ಕೌಶಲ್ಯ ಹೆಚ್ಚಿಸಿಕೊಳ್ಳಬೇಕು. ಅದಕ್ಕೆ ತಕ್ಕಂತಹ ತರಬೇತಿಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಒಳ್ಳೆಯ ಸಂದೇಶ ನೀಡುವ ಸುದ್ದಿ ಪ್ರಕಟಿಸಿ
ಪತ್ರಕರ್ತರು ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವ ವಿಚಾರಗಳನ್ನು ಸುದ್ದಿಯನ್ನಾಗಿ ಪ್ರಕಟಿಸಿದರೆ ಜನರಿಗೆ ಉಪಯೋಗವಾಗುತ್ತದೆ ಎಂದು ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ತಿಳಿಸಿದರು.
ಹಿಂದಿನ ದಿನಗಳಲ್ಲಿ ಯಾವುದಾದ್ರೂ ಒಂದು ಪತ್ರಿಕೆಯಲ್ಲಿ ಒಂದು ವರದಿ ಬಂದರೆ ಅದು ವಿಧಾನಸಭೆಯಲ್ಲಿ ಚರ್ಚೆಯಾಗುತ್ತಿತ್ತು, ಆ ವರದಿಗೆ ರಾಜಕಾರಣಿಗಳು ಉತ್ತರ ನೀಡಬೇಕಾಗಿತ್ತು. ಆದರೆ ಪ್ರಸ್ತುತ ಅಂತಹ ವಾತಾವರಣ ಇಲ್ಲ, ಇಂತಹ ಪರಿಸ್ಥಿತಿ ಏಕಾಯ್ತು ಅಂತ ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂದರು.
ವೇದಿಕೆಯಲ್ಲಿ ಜಿಲ್ಲಾಧಿಕಾರಿ ಡಾ.ಕುಮಾರ್, ತಹಶೀಲ್ದಾರ್ ಆದರ್ಶ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ನವೀನ್ ಕುಮಾರ್, ಪತ್ರಕರ್ತರ ಸಂಘದ ಪದಾಧಿಕಾರಿಗಳಾದ ಮತ್ತೀಕೆರೆ ಜಯರಾಮ್, ಸೋಮಶೇಖರ್ ಕೆರಗೋಡು, ಕೆ.ಸಿ.ಮಂಜುನಾಥ್, ಬಿ. ಪಿ. ಪ್ರಕಾಶ್, ಆನಂದ್, ನಂಜುಂಡಸ್ವಾಮಿ, ನಾಗಮಂಗಲ ತಾಲ್ಲೂಕು ಪತ್ರಕರ್ತ ಸಂಘದ ಸೀತಾರಾಮ್, ಮಂಜುನಾಥ್, ಕೌಶಿಕ್ ಹಾಗೂ ಜಯರಾಮ್ ಮತ್ತಿತರರಿದ್ದರು.




