ನಾಗಮಂಗಲ ತಾಲ್ಲೂಕಿನ ಕ್ರಿಯಾತ್ಮಕ ಸಂಘಟನೆಗಳಾದ ಕನ್ನಡ ಸಂಘ ಮತ್ತು ಸಾಹಿತ್ಯ ಚಾವಡಿ ಸಂಸ್ಥೆಗಳ ಸಹಯೋಗದಲ್ಲಿ ರಾಜ್ಯಮಟ್ಟದ ಕವಿ ಸಮ್ಮೇಳನವನ್ನು 22ರ ಭಾನುವಾರ ಸುಂದರ ಪರಿಸರದಿಂದ ಕೂಡಿದ ಗೆಳತಿಗುಡ್ಡದಲ್ಲಿ ಜರುಗಲಿದೆ ಎಂದು ತಾಲ್ಲೂಕು ಕನ್ನಡ ಸಂಘದ ಮಾಜಿ ಅಧ್ಯಕ್ಷ ನಾ ಸು ನಾಗೇಶ್ ತಿಳಿಸಿದರು.
ನಾಗಮಂಗಲ ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಮಾತನಾಡಿದ ಅವರು, 15ನೇ ಶತಮಾನದಲ್ಲಿ ಆಡಳಿತಗಾರನಾಗಿದ್ದ ನಾಗಮಂಗಲದ ಅಭಿವೃದ್ಧಿ ಹರಿಕಾರ ತಿಮ್ಮಣ್ಣ ಡಣಾಯಕನ ಬಾಳ ಗೆಳತಿ ವಾಸವಾಗಿದ್ದ ಸ್ಥಳ ಸೂಳೆಕೆರೆ ಈ ಸುಂದರ ಗುಡ್ಡದಲ್ಲಿ ಅವರ ವಾಸಸ್ಥಾನದ ಪಳೆಯುಳಿಕೆಯಾಗಿ ಒಂದು ವಿಶಾಲ ಹಾಸುಬಂಡೆಯ ಮಂಟಪದಲ್ಲಿ 22 ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 4.30 ರವರೆಗೆ ರಾಜ್ಯ ಮಟ್ಟದ ಕವಿ ಸಮ್ಮೇಳನ ನಡೆಯಲಿದೆ ಎಂದರು.
ಈ ಕಾರ್ಯಕ್ರಮದ ಭಾಗವಾಗಿ ಎರಡು ಕವಿಗೋಷ್ಠಿಗಳಿದ್ದು ಪೂರ್ವಭಾವಿಯಾಗಿ ಆಯ್ಕೆಯಾಗಿರುವ ರಾಜ್ಯದ ವಿವಿಧ ಭಾಗಗಳ ಮೂವತ್ತಾರು ಕವಿಗಳು ಕವಿಗೋಷ್ಠಿಯಲ್ಲಿ ತಮ್ಮ ಕವಿತೆಯನ್ನು ವಾಚಿಸಲಿದ್ದಾರೆ. ಸಮ್ಮೇಳನದ ಮಾರ್ಗದರ್ಶಕರಾಗಿ ಪ್ರಸಿದ್ಧ ವಿದ್ವಾಂಸರೂ ಖ್ಯಾತ ವಿಮರ್ಶಕರೂ ಆದ ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ಕವಯಿತ್ರಿ ಪಿ. ಚಂದ್ರಿಕಾ ಭಾಗವಹಿಸಲಿದ್ದು ಕಾವ್ಯ ರಚನೆಯ ಬಹು ಆಯಾಮಗಳನ್ನು ಕವಿಗಳಿಗೆ ಹಾಗೂ ಸಾಹಿತ್ಯಾಸಕ್ತರಿಗೆ ತಿಳಿಸಿಕೊಡಲಿದ್ದಾರೆ. ಅನೇಕ ಕಾವ್ಯಾಸಕ್ತರು ಸಹ ಸಮ್ಮೇಳನದಲ್ಲಿ ಭಾಗವಹಿಸಲಿದ್ದು ಪ್ರವೇಶ ಹಾಗೂ ನೋಂದಣಿ ಉಚಿತವಾಗಿರುತ್ತದೆ ಆಸಕ್ತರು ನರಸಿಂಹಪ್ರಸಾದ್ ಮೊ.9980670370 ಹಾಗೂ
ರಮೇಶ್ ಗೌಡ ಮೊ.9980309060 ಸಂಖ್ಯೆಯ್ನು ಸಂಪರ್ಕಿಸಬಹುದಾಗಿದೆ.
ನಾಗಮಂಗಲ ಪಟ್ಟಣದ ವಿಧಾನ ಸೌಧದ ಮುಂಭಾಗದಿಂದ ಗೆಳತಿಗುಡ್ಡಕ್ಕೆ ಕರೆದೊಯ್ಯಲು ವಾಹನ ವ್ಯವಸ್ಥೆ ಮಾಡಲಾಗಿದೆ. ನಾಡಿನ ಕಾವ್ಯಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಅವಕಾಶವನ್ನು ಬಳಸಿಕೊಳ್ಳಬೇಕೆಂದು ತಿಳಿಸಿದರು.




