ಗ್ರಾಮೀಣ ಭಾಗದ ಸರ್ಕಾರಿ ಶಿಕ್ಷಣಕ್ಕೆ ಹೊಸ ಕಾಯಕಲ್ಪ ನೀಡಿ ಸರ್ಕಾರಿ ಶಾಲೆಗಳು ಖಾಸಗಿ ಶಾಲೆಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಶಿಕ್ಷಕರು ಸಿದ್ಧತೆಗೊಳ್ಳಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಸಲಹೆ ನೀಡಿದರು .
ಮಳವಳ್ಳಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಶನಿವಾರ ಜಿಲ್ಲಾ ಪಂಚಾಯತ್ ಮಂಡ್ಯ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ನಿವೃತ್ತ ಶಿಕ್ಷಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ತಮ್ಮ ಜವಾಬ್ದಾರಿಯನ್ನು ಅರಿತು ಭವಿಷ್ಯ ಭಾರತವನ್ನು ನಿರ್ಮಾಣ ಮಾಡುವತ್ತ ಕಾರ್ಯಪ್ರವೃತ್ತವಾಗುವುದರ ಜೊತೆಗೆ ಮಕ್ಕಳಿಗೆ ಅಕ್ಷರ ಜ್ಞಾನ ಕಲಿಸುವುದರ ಜೊತೆಗೆ ಪ್ರಾಪಂಚಿಕ ಜ್ಞಾನವನ್ನು ನೀಡಬೇಕು, ಶಿಕ್ಷಣದಲ್ಲಿ ಖಾಸಗಿ ಮತ್ತು ಸರ್ಕಾರಿ ಎಂಬ ಎರಡು ವ್ಯವಸ್ಥೆ ಗಳಿದ್ದು, ಪೋಷಕರು ಇತ್ತೀಚಿನ ದಿನಗಳಲ್ಲಿ ಖಾಸಗಿಯತ್ತ ಮುಖ ಮಾಡುತ್ತಿದ್ದು, ಇದಕ್ಕೆ ಪರಿಹಾರ ಎಂಬಂತೆ ಸರ್ಕಾರಿ ಶಿಕ್ಷಣ ವ್ಯವಸ್ಥೆಯನ್ನು ಆಮೂಲಾಗ್ರವಾಗಿ ಬದಲಾವಣೆಗೆ ತಂದು ನಮ್ಮ ತಾಲ್ಲೂಕಿನ ಸರ್ಕಾರಿ ಶಿಕ್ಷಣ ವ್ಯವಸ್ಥೆ ಇತರರಿಗೆ ಮಾದರಿಯಾಗುವಂತೆ ಮಾಡುವಲ್ಲಿ ನಿಮ್ಮ ಸಹಕಾರ ಅಗತ್ಯವಾಗಿದೆ.
ಸರ್ಕಾರಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ವಿಚಾರದಲ್ಲಿ ಪ್ರಥಮ ಆದ್ಯತೆ ನೀಡಿ ಪ್ರಸ್ತುತ ಶೈಕ್ಷಣಿಕ ವರ್ಷ ಮುಗಿಯುವಷ್ಟರಲ್ಲಿ ತಾಲ್ಲೂಕಿನ ಯಾವುದೇ ಸರ್ಕಾರಿ ಶಾಲೆಯಲ್ಲೂ ಸಹ ಮೂಲಭೂತ ಸೌಕರ್ಯ ಸಮಸ್ಯೆ ಕಂಡು ಬರದಂತೆ ಕ್ರಮ ವಹಿಸುತ್ತೇನೆ.
ಸರ್ಕಾರಿ ಶಾಲೆಗಳ ಬಲವರ್ಧನೆಗೆ ಸಂಬಂಧಿಸಿದಂತೆ ಈಗಾಗಲೇ ಪ್ರತಿಯೊಂದು ಸರ್ಕಾರಿ ಶಾಲೆಗೂ ಡಿಜಿಟಲ್ ಲ್ಯಾಬ್ ಒದಗಿಸುವ ವ್ಯವಸ್ಥೆ ಮಾಡಿದ್ದೇನೆ, ಮುಂದಿನ ದಿನಗಳಲ್ಲಿ ತಾಲ್ಲೂಕಿನಲ್ಲಿ 25 ಮಲ್ಟಿ ಮೀಡಿಯಾ ಕೇಂದ್ರಗಳನ್ನು ಕ್ಲಸ್ಟರ್ ಗೆ ಒಂದರಂತೆ ತೆರೆಯಲಾಗುವುದು ಎಂದರು.
ಕಾರ್ಯಕ್ರಮದ ಪ್ರಧಾನ ಭಾಷಣವನ್ನು ಕೊಳ್ಳೇಗಾಲ ಚೇತವನ ಬೌದ್ಧ ವಿಹಾರದ ಪೂಜ್ಯ ಮನೋ ರಂಕಿತ ಬಂತೇಜಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನ ಅನುಷ್ಠಾನ ಸಮಿತಿ ಅಧ್ಯಕ್ಷ ಚಿಕ್ಕಲಿಂಗಯ್ಯ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎ.ಲೊಕೇಶ್, ಡಯಟ್ ಪ್ರಾಂಶುಪಾಲ ಕೆ.ಯೋಗೇಶ್, ತಾ.ಪಂ.ಇಒ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಈ.ಉಮಾ, ಕ್ಷೇತ್ರ ಸಮನ್ವಯಾಧಿಕಾರಿ ಶ್ರೀನಿವಾಸ್, ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ನಾಗೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನಯ್ಯ. ದಡಕಪುರ ಚಂದ್ರು ಸೇರಿದಂತೆ ಇತರರಿದ್ದರು.




