Saturday, October 19, 2024

ಪ್ರಾಯೋಗಿಕ ಆವೃತ್ತಿ

ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿಯಿಲ್ಲ: ಎಎಪಿ

ಮುಂಬರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಏಕಾಂಗಿಯಾಗಿ ಸ್ಪರ್ಧಿಸಲಿದ್ದು, ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದೆ. ಮುಂದಿನ ವರ್ಷ ಫೆಬ್ರವರಿ ವೇಳೆ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಎಎಪಿ ರಾಷ್ಟ್ರ ರಾಜಧಾನಿಯಲ್ಲಿ ಸತತ ಮೂರನೇ ಅವಧಿಗೆ ಅಧಿಕಾರ ಹಿಡಿಯುವ ಬಗ್ಗೆ ಎದುರು ನೋಡುತ್ತಿದೆ.

ಹರಿಯಾಣ ಚುನಾವಣೆ ವೇಳೆ ಸೀಟು ಹಂಚಿಕೆಯ ಮಾತುಕತೆ ಮುರಿದುಬಿದ್ದು ಎಎಪಿ ಏಕಾಂಗಿಯಾಗಿ ಸ್ಪರ್ಧಿಸಿತ್ತು. ಬಿಜೆಪಿ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದ ಹೊರತಾಗಿಯೂ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿಯಲು ವಿಫಲವಾಗಿದೆ. ಕಾಂಗ್ರೆಸ್ ಪಕ್ಷದ “ಅತಿಯಾದ ಆತ್ಮವಿಶ್ವಾಸ” ಅದರ ಕಳಪೆ ಪ್ರದರ್ಶನಕ್ಕೆ ಕಾರಣ ಎಂದು ಎಎಪಿ ಮುಖ್ಯ ವಕ್ತಾರ ಪ್ರಿಯಾಂಕಾ ಕಕ್ಕರ್ ಹೇಳಿದ್ದಾರೆ.

“ಎಎಪಿ ದೆಹಲಿಯಲ್ಲಿ ಕಾಂಗ್ರೆಸ್‌ನೊಂದಿಗೆ ಯಾವುದೇ ಮೈತ್ರಿ ಮಾಡಿಕೊಳ್ಳುವುದಿಲ್ಲ. ಲೋಕಸಭೆ ಚುನಾವಣೆಯ ಸಮಯದಲ್ಲಿ ಉತ್ತರ ಪ್ರದೇಶ ಮತ್ತು ದೆಹಲಿಯಲ್ಲಿ ಹೆಚ್ಚಿನ ಸ್ಥಾನಗಳನ್ನು ನೀಡಿದ್ದರೂ ಕಾಂಗ್ರೆಸ್ ಪಕ್ಷವೂ ಸಮಾಜವಾದಿ ಪಕ್ಷ ಮತ್ತು ಎಎಪಿಗೆ ಹರಿಯಾಣದಲ್ಲಿ ಅವಕಾಶ ನೀಡಿರಲಿಲ್ಲ” ಎಂದು ಪ್ರಿಯಾಂಕಾ ಕಕ್ಕರ್ ತಿಳಿಸಿದ್ದಾರೆ.

10 ವರ್ಷಗಳ ನಂತರ ಹರಿಯಾಣದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿದ್ದವು. ಅದಾಗ್ಯೂ, ರಾಜ್ಯದ 90 ಕ್ಷೇತ್ರಗಳಲ್ಲಿ ಕೇವಲ 37 ಸ್ಥಾನಗಳನ್ನು ಮಾತ್ರ ಗೆದ್ದಿದ್ದು, ಬಿಜೆಪಿ 48 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿದಿದೆ.

ಕಾಂಗ್ರೆಸ್ ಜೊತೆ ಸೀಟು ಹಂಚಿಕೆಯ ಮಾತುಕತೆ ವಿಫಲವಾದ ನಂತರ ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದ್ದ ಎಎಪಿ ಹರಿಯಾಣದ 90 ಸ್ಥಾನಗಳ ಪೈಕಿ 88 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಆದರೆ, ಎಎಪಿ, ಖಾತೆ ತೆರೆಯಲು ವಿಫಲವಾಗಿದೆ. ಈ ನಡುವೆ ಜಮ್ಮು ಕಾಶ್ಮೀರ ಚುನಾವಣೆಯಲ್ಲಿ ದೋಡಾ ಕ್ಷೇತ್ರವನ್ನು ಗೆದ್ದು ಜಮ್ಮುವಿನಲ್ಲಿ ಇದೆ ಮೊದಲ ಬಾರಿ ಖಾತೆ ತೆರೆದಿದೆ.

ಎಎಪಿ ಮತ್ತು ಕಾಂಗ್ರೆಸ್ ಈ ಹಿಂದೆ ಕೂಡಾ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಿತ್ತು. ಕಳೆದ ಲೋಕಸಭೆ ಚುನಾವಣೆಯಲ್ಲಿ ದೆಹಲಿ ಮತ್ತು ಹರಿಯಾಣದಲ್ಲಿ ಮೈತ್ರಿ ಮಾಡಿಕೊಂಡಿದ್ದ ಪಕ್ಷಗಳು ಪಕ್ಕದ ಪಂಜಾಬ್‌ನಲ್ಲಿ ಪ್ರತ್ಯೇಕವಾಗಿ ಸ್ಪರ್ಧಿಸಿದ್ದವು. ಈ ವೇಳೆ ಎಎಪಿ ದೆಹಲಿಯಲ್ಲಿ ನಾಲ್ಕು ಸ್ಥಾನಗಳಲ್ಲಿ ಸ್ಪರ್ಧಿಸಿ, ಮೂರು ಕ್ಷೇತ್ರಗಳನ್ನು ಕಾಂಗ್ರೆಸ್‌ಗೆ ಬಿಟ್ಟಿತ್ತು. ಆದಾಗ್ಯೂ, ಬಿಜೆಪಿ ಎಲ್ಲಾ ಏಳು ಸ್ಥಾನಗಳನ್ನು ಗೆದ್ದು, ಉಭಯ ಪಕ್ಷಗಳಿಗೂ ನಿರಾಸೆ ಮೂಡಿಸಿತ್ತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!