Friday, November 20, 2026

ಪ್ರಾಯೋಗಿಕ ಆವೃತ್ತಿ

ಭಾರತ – ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ | ಟ್ರಂಪ್‌ಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ಪಾಕ್ ನಾಮನಿರ್ದೇಶನ!

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಭಾರತ-ಪಾಕಿಸ್ತಾನ ನಡುವೆ ಏರ್ಪಟ್ಟಿದ್ದ ಸಂಘರ್ಷವನ್ನು ಶಮನ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರನ್ನು 2026ರ ‘ನೊಬೆಲ್ ಶಾಂತಿ ಪ್ರಶಸ್ತಿ’ಗೆ ಪಾಕಿಸ್ತಾನ ನಾಮನಿರ್ದೇಶನ ಮಾಡಿದೆ ಎಂದು ವರದಿಯಾಗಿದೆ.

ಪಾಕಿಸ್ತಾನ ಸರ್ಕಾರದ ಅಧಿಕೃತ ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಲಾಗಿದೆ ಎಂದು ಪ್ರಮುಖ ಮಾಧ್ಯಮಗಳು ವರದಿ ಮಾಡಿವೆ.

“ಪಾಕಿಸ್ತಾನ ಸರ್ಕಾರ 2026ರ ನೊಬೆಲ್ ಶಾಂತಿ ಪ್ರಶಸ್ತಿಗೆ ಡೊನಾಲ್ಡ್ ಜೆ.ಟ್ರಂಪ್ ಅವರ ಹೆಸರನ್ನು ಶಿಫಾರಸ್ಸು ಮಾಡುತ್ತಿದೆ. ಭಾರತ-ಪಾಕ್ ಸಂಘರ್ಷದ ಸಂದರ್ಭದಲ್ಲಿ ಟ್ರಂಪ್ ವಹಿಸಿದ ಪ್ರಮುಖ ರಾಜತಾಂತ್ರಿಕ ಮಧ್ಯಸ್ಥಿಕೆ ಮತ್ತು ಪರಿವರ್ತನಾಶೀಲ ನಾಯಕತ್ವ ಪ್ರದರ್ಶಿಸಿದ್ದನ್ನು ಗುರುತಿಸಿ ಪಾಕಿಸ್ತಾನ ಸರ್ಕಾರವು 2026ರ ನೊಬೆಲ್ ಶಾಂತಿ ಪುರಸ್ಕಾರಕ್ಕೆ ಡೊನಾಲ್ಡ್ ಜೆ.ಟ್ರಂಪ್ ಅವರ ಹೆಸರನ್ನು ಅಧಿಕೃತವಾಗಿ ಶಿಫಾರಸ್ಸು ಮಾಡುತ್ತಿದೆ” ಎಂದು ಪೋಸ್ಟ್‌ನಲ್ಲಿ ಹೇಳಿರುವುದಾಗಿ ವರದಿಗಳು ವಿವರಿಸಿವೆ.

ಭಾರತ- ಪಾಕಿಸ್ತಾನದ ಸಂಘರ್ಷದ ಬಳಿಕ ಮೊದಲ ಬಾರಿಗೆ ಅಮೆರಿಕಕ್ಕೆ ಭೇಟಿ ನೀಡಿದ್ದ ಪಾಕಿಸ್ತಾನ ಸೇನೆಯ ಮುಖ್ಯಸ್ಥ ಅಸೀಮ್ ಮುನೀರ್ ಅವರಿಗೆ, ಅಧ್ಯಕ್ಷ ಟ್ರಂಪ್ ಜೂನ್ 18ರಂದು ಶ್ವೇತಭವನದಲ್ಲಿ ವಿಶೇಷ ಔತಣಕೂಟ ಆಯೋಜಿಸಿದ್ದರು. ಇದರ ಮರುದಿನವೇ ಪಾಕಿಸ್ತಾನದಿಂದ ಈ ಅಚ್ಚರಿಯ ಹೇಳಿಕೆ ಹೊರಬಿದ್ದಿದೆ.

ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದ ಟ್ರಂಪ್

“ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ. ಸೆರ್ಬಿಯಾ ಮತ್ತು ಕೊಸೊವೊ ನಡುವಿನ ಯುದ್ಧವನ್ನು ನಿಲ್ಲಿಸಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ ಎಂದು ಸ್ವತಃ ಟ್ರಂಪ್ ‘ಎಕ್ಸ್’ನಲ್ಲಿ ಬರೆದು ಕೊಂಡಿದ್ದಾರೆ.

ಈಜಿಪ್ಟ್ ಮತ್ತು ಇಥಿಯೋಪಿಯಾ ನಡುವೆ ಶಾಂತಿ ಕಾಪಾಡಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ. (ಯುಎಸ್‌ ಮೂರ್ಖತನದಿಂದ ಹಣಕಾಸು ಒದಗಿಸಿದ ಇಥಿಯೋಪಿಯನ್ ನಿರ್ಮಿಸಿದ ಬೃಹತ್ ಅಣೆಕಟ್ಟು, ನೈಲ್ ನದಿಗೆ ಹರಿಯುವ ನೀರನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ) ಮತ್ತು ಮಧ್ಯಪ್ರಾಚ್ಯದಲ್ಲಿ ಅಬ್ರಹಾಂ ಒಪ್ಪಂದಗಳನ್ನು ಮಾಡಿದ್ದಕ್ಕಾಗಿ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ” ಎಂದಿದ್ದಾರೆ.

“ಎಲ್ಲವೂ ಸರಿಯಾಗಿ ನಡೆದರೆ, ಇನ್ನಷ್ಟು ದೇಶಗಳು ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಿವೆ. ಈ ಮೂಲಕ ಈ ಯುಗದಲ್ಲೇ ಮೊದಲ ಬಾರಿಗೆ ಮಧ್ಯಪ್ರಾಚ್ಯ ಒಂದಾಗಲಿದೆ. ಇಲ್ಲ, ರಷ್ಯಾ-ಉಕ್ರೇನ್ ಮತ್ತು ಇಸ್ರೇಲ್-ಇರಾನ್ ಸೇರಿದಂತೆ ನಾನು ಏನೇ ಮಾಡಿದರೂ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗುವುದಿಲ್ಲ. ನನ್ನ ಶ್ರಮದ ಫಲಿತಾಂಶಗಳು ಏನೇ ಇರಲಿ. ಅದು ಜನರಿಗೆ ತಿಳಿದಿದೆ. ನನಗೆ ಅಷ್ಟೇ ಮುಖ್ಯ” ಎಂದು ಟ್ರಂಪ್ ಹೇಳಿದ್ದಾರೆ.

ಪಹಲ್ಗಾಮ್ ದಾಳಿ ಬಳಿಕ ಪಾಕಿಸ್ತಾನ ಪ್ರೇರಿತ ಮತ್ತು ಇತರ ರೀತಿಯ ಭಯೋತ್ಪಾದನೆಯ ಕುರಿತ ಭಾರತದ ನಿಲುವನ್ನು ಜಗತ್ತಿಗೆ ತಿಳಿಸಲು ಭಾರತ ಸರ್ಕಾರ ಸರ್ವಪಕ್ಷ ಸಂಸದರ ಸುಮಾರು 7 ನಿಯೋಗಗಳನ್ನು ವಿವಿಧ ರಾಷ್ಟ್ರಗಳಿಗೆ ಕಳುಹಿಸಿತ್ತು.

ಈ ನಿಯೋಗಗಳು ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನದ ಬಣ್ಣ ಬಯಲು ಮಾಡಿದೆ ಎಂದು ಹೇಳಲಾಗಿತ್ತು. ಇದಾಗಿ ಕೆಲ ದಿನಗಳಲ್ಲೇ ಅಮೆರಿಕ ಅಧ್ಯಕ್ಷ ಪಾಕಿಸ್ತಾನದ ಸೇನಾ ಮುಖ್ಯಸ್ಥರಿಗೆ ಔತಣಕೂಟ ಆಯೋಜಿಸಿ ಗೌರವಿಸಿರುವುದು ಭಾರತಕ್ಕೆ ಒಂದು ರೀತಿಯಲ್ಲಿ ರಾಜತಾಂತ್ರಿಕ ಹಿನ್ನಡೆ ಎನ್ನಬಹುದು.

ಅಲ್ಲಗಳೆದ ಭಾರತ

ಭಾರತ-ಪಾಕಿಸ್ತಾನ ನಡುವೆ ಸಂಘರ್ಷ ಏರ್ಪಟಿದ್ದಾಗ, ಆರಂಭದಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಅಮೆರಿಕ ಅಧ್ಯಕ್ಷ ಟ್ರಂಪ್, “ಅದು ಆ ಎರಡು ರಾಷ್ಟ್ರಗಳ ನಡುವಿನ ಸಂಘರ್ಷ. ಈ ರೀತಿಯ ಸಂಘರ್ಷ ಭಾರತ-ಪಾಕಿಸ್ತಾನ ನಡುವೆ ಸುದೀರ್ಘ ಸಮಯದಿಂದ ಇದೆ. ನಮಗೆ ಭಾರತ-ಪಾಕಿಸ್ತಾನ ಎರಡೂ ಮಿತ್ರ ರಾಷ್ಟ್ರಗಳೇ. ಅವರ ಸಮಸ್ಯೆಯನ್ನು ಅವರು ಬಗೆ ಹರಿಸಿಕೊಳ್ಳುತ್ತಾರೆ. ನಾವು ಅದರಲ್ಲಿ ತಲೆ ಹಾಕಲು ಹೋಗುವುದಿಲ್ಲ” ಎಂದಿದ್ದರು.

ಆದರೆ, ಮೇ 10ರಂದು ಸಂಜೆ 5.33ರ (ಭಾರತೀಯ ಕಾಲಮಾನ) ಸುಮಾರಿಗೆ ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ ಒಪ್ಪಂದಕ್ಕೆ ಒಪ್ಪಿಕೊಂಡಿವೆ ಎಂದು ಟ್ರಂಪ್ ಮೊದಲು ಪೋಸ್ಟ್ ಮಾಡಿದ್ದರು. ಆ ಬಳಿಕವಾಗಿದೆ. ಭಾರತದ ವಿದೇಶಾಂಗ ಕಾರ್ಯದರ್ಶಿ ಮತ್ತು ವಿದೇಶಾಂಗ ಇಲಾಖೆ ಸಚಿವರು ಕದನ ವಿರಾಮದ ಕುರಿತು ಘೋಷಣೆ ಮಾಡಿರುವುದು.

ಕೃಪೆ : ನಾನು ಗೌರಿ.ಕಾಂ

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ