ಮಂಡ್ಯ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಒದಗಿಸುವ ರೈತರಿಗೆ ನ್ಯಾಯಯುತವಾಗಿ ಪಾವತಿ ನೀಡಿ ಮತ್ತು ಹೀಗಾಗಲೇ ಬಾಕಿಯಿರುವ ಪಾವತಿಯನ್ನು ಶೀಘ್ರದಲ್ಲೆ ಒದಗಿಸಿ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.
ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು, ಸಕ್ಕರೆ ಕಾರ್ಖಾನೆಗಳು ರೈತರಿಗೆ ಪಾವತಿ ಹಣವನ್ನು ನೀಡುತ್ತಿರುವ ಬಗ್ಗೆ ಅಧಿಕಾರಿಗಳು ನಿಗಾ ವಹಿಸಿ ಮತ್ತು ರೈತರಿಗೆ ಪಾವತಿ ಹಣ ನೀಡದ ಕಾರ್ಖಾನೆಗಳಿಗೆ ನೋಟಿಸ್ ನೀಡಿ ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಹೇಳಿದರು.
ಮಂಡ್ಯ ಜಿಲ್ಲೆಯಲ್ಲಿನ ಸಕ್ಕರೆ ಕಾರ್ಖಾನೆಗಳು ಪಾವತಿ ಹಣವನ್ನು ನೀಡುತ್ತಿಲ್ಲ ಎಂದು ರೈತರಿಂದ ದೂರು ಬರುತ್ತಿದ್ದು, ರೈತರಿಗೆ ಅಧಿಕೃತವಾಗಿ ನೀಡಬೇಕಾದ ಪಾವತಿಯನ್ನು 14 ದಿನದೊಳ ಸಕ್ಕರೆ ಕಾರ್ಖಾನೆಗಳು ನೀಡಬೇಕು ಮತ್ತು ಹಣ ಪಾವತಿ ಕುರಿತು ವರದಿಯನ್ನು ಒದಗಿಸಬೇಕು ಎಂದು ತಿಳಿಸಿದರು.
ರೈತರು ಕಬ್ಬು ನೀಡಿದ 14 ದಿನದೊಳಗೆ ಕಡ್ಡಾಯವಾಗಿ ಸಕ್ಕರೆ ಕಾರ್ಖಾನೆಗಳು ಪಾವತಿಯನ್ನು ನೀಡಬೇಕು 14 ದಿನದೊಳಗೆ ನಂತರ ಪಾವತಿ ನೀಡಿದಲ್ಲಿ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು. ಯಾವುದೇ ಕಾರಣಕ್ಕೂ ರೈತರನ್ನು ಪಾವತಿ ವಿಷಯವಾಗಿ ಅಲೆದಾಡಿಸಬಾರದು ಎಂದು ಎಚ್ಚರಿಸಿದರು.
ಸಭೆಯಲ್ಲಿ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಪ್ರತೀಕ್ ಹೆಗ್ಡೆ, ಸಹಾಯ ನಿರ್ದೇಶಕ ಶ್ರೀನಿವಾಸ್, ವ್ಯವಸ್ಥಾಪಕ ರೇಣುಕಾ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ರೈತ ಮುಖಂಡರು ಉಪಸ್ಥಿತರಿದ್ದರು.




