ಪ್ರವಾದಿ ಮಹಮ್ಮದ್ ಅವರನ್ನು ನಿಂದನೆ ಮಾಡಿರುವ ಬಿಜೆಪಿ ರಾಷ್ಟ್ರೀಯ ವಕ್ತಾರೆ ನೂಪುರ್ ಶರ್ಮ ಹಾಗೂ ಬಿಜೆಪಿ ಮಾಧ್ಯಮ ಉಸ್ತುವಾರಿ ನವೀನ್ ಜಿಂದಾಲ್ ಅವರನ್ನು ಬಂಧಿಸಬೇಕೆಂದು ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ನಗರದ ಸರ್‌ಎಂವಿ ಪ್ರತಿಮೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರವಾದಿ ಅವರ ನಿಂದನೆಯಿಂದ ರಾಷ್ಟ್ರಮಟ್ಟದಲ್ಲಿಯೇ ಭಾರತ ದೇಶದ ಘನತೆ ಹಾಳಾಗಿದೆ. ಆದ್ದರಿಂದ ಇಡೀ ಬಿಜೆಪಿ ಸರ್ಕಾರವೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಬಿಜೆಪಿ ಸರ್ಕಾರ ಅಲ್ಪಸಂಖ್ಯಾತರು, ದಲಿತ, ಹಿಂದುಳಿದವರ ವಿರೋಧಿ ನೀತಿ ಅನುಸರಿಸುತ್ತಿದೆ. ದೇಶದಲ್ಲಿ ಮುಸ್ಲಿಂ ವಿರೋಧಿ ಹಿಂಸಾತ್ಮಕ ಚಟುವಟಿಕೆಗಳಿಗೆ ಬಿಜೆಪಿ ಸರ್ಕಾರ ಮೌನ ಸಮ್ಮತಿ ನೀಡುತ್ತಿದ್ದು, ಆಡಳಿತಾತ್ಮಕ ಸಹಕಾರ ನೀಡುತ್ತಿದೆ ಎಂದು ಕಿಡಿಕಾರಿದರು.
ಹಿಜಾಬ್, ಹಲಾಲ್, ವ್ಯಾಪಾರ ನಿಷೇಧ, ಆಜಾನ್, ಮಸೀದಿ, ಈದ್ಗಾಗಳ ವಿವಾದ ಸೃಷ್ಟಿ ಸೇರಿದಂತೆ ನಿರಂತರವಾಗಿ ಮುಸ್ಲಿಂ ಧಾರ್ಮಿಕ ವಿಚಾರಗಳಲ್ಲಿ ಸಂಘರ್ಷ ನಡೆಸುತ್ತಿದ್ದು, ಎಲ್ಲ ಸಂದರ್ಭದಲ್ಲೂ ಕಾನೂನಾತ್ಮಕ ಕ್ರಮ ಕೈಗೊಳ್ಳದೆ ಕುಮ್ಮಕ್ಕು ನೀಡಿದೆ.ಇಂತಹ ಘಟನೆಗಳ ಖಂಡಿಸುವ ಮಾತುಗಳನ್ನಾದರೂ ಸಹ ಆಡದ ಒಕ್ಕೂಟ ಬಿಜೆಪಿ ಸರ್ಕಾರ ಪ್ರವಾದಿ ನಿಂದನೆಯ ಪ್ರಕರಣದಲ್ಲೂ ಅಂತರಾಷ್ಟ್ರೀಯ ಒತ್ತಡಕ್ಕೆ ಮಣಿದು ಕೇವಲ ವಜಾ ಮಾಡುವ ಕಣ್ಣೊರೆಸುವ ತಂತ್ರ ಅನುಸರಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆದ್ದರಿಂದ ಪ್ರವಾದಿ ಮಹಮ್ಮದ್ ನಿಂದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ. ನೂಪುರ್ ಶರ್ಮಾ ಹಾಗೂ ನವೀನ್ ಜಿಂದಾಲ್ ಅವರನ್ನು ಬಂಧಿಸಬೇಕು ಎಂದರು.
ಸಂಘಟನೆಯ ಅಧ್ಯಕ್ಷ ಸಾದತ್ ಪಾಷ, ಉಪಾಧ್ಯಕ್ಷ ಆರ್.ಕೆ.ರಹೀಂ, ಮೊಕ್ತಾರ್ ಅಹಮದ್ ಸೇರಿದಂತೆ ಮತ್ತಿತರರಿದ್ದರು.