Friday, October 25, 2024

ಪ್ರಾಯೋಗಿಕ ಆವೃತ್ತಿ

ವಿರೋಧ ಪಕ್ಷವಾಗುವ ನಮ್ಮ ತುಡಿತ ಸಿನಿಕತನದತ್ತ ಜಾರದಿರಲಿ…

✍️ ಮಾಚಯ್ಯ ಎಂ ಹಿಪ್ಪರಗಿ

ಕರ್ನಾಟಕದಲ್ಲಿ ಬಿಜೆಪಿ ಅಧಿಕಾರದಿಂದ ನಿರ್ಗಮಿಸಿದೆ. ಸಿದ್ದರಾಮಯ್ಯನವರ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕಾಂಗ್ರೆಸ್ ಪಕ್ಷದ ಈ ಗೆಲುವಿನಲ್ಲಿ, ಕೈ ಕಾರ್ಯಕರ್ತರ ಶ್ರಮ ಎಷ್ಟಿದೆಯೋ, ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಶ್ರಮ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಳ್ಳದ ಸಾಮಾಜಿಕ ಕಾರ್ಯಕರ್ತರು, ಜನಪರ ಹೋರಾಟಗಾರರು, ಹಲವಾರು ಸಂಘಟನೆಗಳು, ಸೋಶಿಯಲ್ ಮೀಡಿಯಾದ ಸಕ್ರಿಯ ಆಕ್ಟಿವಿಸ್ಟುಗಳದ್ದಿದೆ. ಕಾಂಗ್ರೆಸ್ ಇದನ್ನು ಒಪ್ಪಲು ನಿರಾಕರಿಸಿದರು ಸಹಾ, ಇದು ವಾಸ್ತವ. ಇವರೆಲ್ಲ ಬಿಜೆಪಿಯನ್ನು ಶತಾಯಗತಾಯ ಸೋಲಿಸಲೇಬೇಕೆಂದು ಫಣ ತೊಟ್ಟಿದ್ದು ಕೇವಲ ಅದರ ಭ್ರಷ್ಟಾಚಾರದ ಕಾರಣಕ್ಕೆ ಮಾತ್ರವಲ್ಲ, ಅದರ ಕೋಮುವಾದಿ ಅಜೆಂಡಾದ ಕಾರಣಕ್ಕೆ; ಅದರ ದಲಿತ-ಅಲ್ಪಸಂಖ್ಯಾತ ವಿರೋಧಿ ನೀತಿಯ ಕಾರಣಕ್ಕೆ; ಅದರ ಬಂಡವಾಳಶಾಹಿ ಪರ ಪಾಲಿಸಿಗಳ ಕಾರಣಕ್ಕೆ; ಅದರ ಜೀವವಿರೋಧಿ ಮನುವಾದದ ಕಾರಣಕ್ಕೆ; ಎಲ್ಲಕ್ಕಿಂತ ಮುಖ್ಯವಾಗಿ ಸಮಾಜದ ನಡುವೆ ಸ್ನೇಹ-ಪ್ರೀತಿಯ ಬಂಧಗಳನ್ನೆ ತುಂಡರಿಸಿ, ಅದು ಹುಟ್ಟುಹಾಕಿದ್ದ ನಂಜಿನ ವಾತಾವರಣದ ಕಾರಣಕ್ಕೆ!

ಕೊನೆಗೂ ಬಿಜೆಪಿ ಸೋತಿದೆ. ನಾವೂ ನಿರಾಳ ನಿಟ್ಟುಸಿರೊಂದನ್ನು ಹೊರಚೆಲ್ಲಿದ್ದೇವೆ.

ಇಷ್ಟು ದಿನಗಳ ಕಾಲ ಯಾರೆಲ್ಲಾ, ಆಡಳಿತಾರೂಢ ಬಿಜೆಪಿಯ ವಿರುದ್ಧ ತಮ್ಮದೇ ಶಕ್ತ್ಯಾನುಸಾರ, ತಮ್ಮದೇ ರೀತಿ-ಮಿತಿಗಳಲ್ಲಿ ಜನಾಭಿಪ್ರಾಯ ರೂಪಿಸಲು ಮುಂದಾಗಿದ್ದರೋ, ಅವರಲ್ಲಿ ಬಹುತೇಕರು “ಈಗ ಬಿಜೆಪಿ ಜಾಗದಲ್ಲಿ ಕಾಂಗ್ರೆಸ್ ಬಂದು ಕೂತಿದೆ. ಹಾಗಾಗಿ ನಾವು ಇನ್ಮುಂದೆ ಕಾಂಗ್ರೆಸ್ ಸರ್ಕಾರವನ್ನು ಟೀಕಿಸುವ ವಿರೋಧಪಕ್ಷವಾಗಿ ಬದಲಾಗುತ್ತೇವೆ. ನಾವು ಶಾಶ್ವತ ವಿರೋಧಪಕ್ಷ ಎಂದು ಘೋಷಿಸುತ್ತಿದ್ದಾರೆ. ಅವರ ಈ ಅಭಿಪ್ರಾಯವನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಯಾಕೆಂದರೆ ಯಾವಾಗ ಒಂದು ಜಾಗೃತ ನಾಗರಿಕ ಸಮುದಾಯ ಹೀಗೆ ಆಳುವ ಪ್ರಭುತ್ವದ ವಿರುದ್ಧ ಟೀಕೆ-ವಿಮರ್ಶೆಯಂತಹ ನಿಷ್ಠುರ ವರ್ತನೆಯನ್ನು ತೋರುತ್ತದೋ ಆಗ ಆ ಪ್ರಭುತ್ವ ಪ್ರಜಾಪ್ರಭುತ್ವದ ಮೌಲ್ಯಗಳಿಗೆ, ಚೌಕಟ್ಟುಗಳಿಗೆ ಬದ್ಧನಾಗಿ ವರ್ತಿಸುವ ಅನಿವಾರ್ಯತೆಗೆ ತುತ್ತಾಗುತ್ತದೆ. ನೋ ಡೌಟ್, ಎತ್ತಲಿಂದ ಎತ್ತ ಕಡೆಗೆ ನೋಡಿದರೂ ಅವರ ನಿಲುವು ಸರಿಯಾದುದೇ ಆಗಿದೆ. ಆದರೆ ನಾವೀಗ ನೋಡಬೇಕಾಗಿರುವುದು ಅತ್ತ-ಇತ್ತ ಅಲ್ಲ; ವಿಚಾರದ ಆಳಕ್ಕಿಳಿದು. ನಾವು ಇಷ್ಟು ನಿಷ್ಠುರ ಘೋಷಣೆಯ ಅಭಿಯಾನ ಹೊರಡಿಸುವುದಕ್ಕು ಮುನ್ನ ನಮ್ಮ ಸಮಾಜ ಒಂದು ಸಂತುಲಿತ ಹಂತಕ್ಕೆ ತಲುಪಿದೆಯೇ? ಎಂಬುದನ್ನೂ ನಾವಿಲ್ಲಿ ಪ್ರಶ್ನಿಸಿಕೊಳ್ಳಬೇಕಿದೆ.

ಕಾಂಗ್ರೆಸಿಗೆ ಬಿಜೆಪಿಯನ್ನು ಮಣಿಸುವ ತುರ್ತು ಇತ್ತು, ಯಾಕೆಂದರೆ ಅದಕ್ಕೆ ಅಧಿಕಾರದ ಗುರಿಯಿತ್ತು. ಆದರೆ ನಾವು, ಅಂದರೆ ಮೇಲೆ ಉಲ್ಲೇಖಿಸಲಾದ ಸಾಮಾಜಿಕ ಕಾರ್ಯಕರ್ತರ ವಲಯ ಬಿಜೆಪಿಯನ್ನು ಸೋಲಿಸಲು ಬಯಸಿದ್ದು ಅಧಿಕಾರದ ಉದ್ದೇಶಕ್ಕಲ್ಲ, ಅದರ ಕೋಮುವಾದಿ ಮತ್ತು ಮನುಷ್ಯವಿರೋಧಿ ನೀತಿಯ ಕಾರಣಕ್ಕೆ. ಈ ನೀತಿಯ ಅನುಷ್ಠಾನದಲ್ಲಿ ಬಿಜೆಪಿ ಒಂದು ರಾಜಕೀಯ ಮುಖವಾಡವಾಗಿ ನಮಗೆ ಗೋಚರಿಸುತ್ತದಾದರೂ, ಅದರ ಅಸಲಿ ಜೀವ ಅಡಗಿರುವುದು ಕೋಮುವಾದಿ ಸಂಘ ಪರಿವಾರದ ಭದ್ರ ಕೋಟೆಯಲ್ಲಿ. ಆ ಭದ್ರ ಕೋಟೆಯನ್ನು ಬೇಧಿಸುವ ಮಾತಿರಲಿ, ಸಣ್ಣಗೆ ಅಲ್ಲಾಡಿಸುವುದಕ್ಕೂ ನಮ್ಮಿಂದ ಇದುವರೆಗೆ ಸಾಧ್ಯವಾಗಿಲ್ಲ. ಈ ಫಲಿತಾಂಶವನ್ನೇ ಪರಿಗಣಿಸುವುದಾದರೂ, ಕಳೆದ ಸಲ ಕೋಮುವಾದಿಗಳು ಎಷ್ಟು ಮತಗಳಿಸಿದ್ದರೋ, ಈಗಲೂ ಹೆಚ್ಚೂಕಮ್ಮಿ ಅಷ್ಟೆ ಪ್ರಮಾಣದ ಶೇಕಡಾವಾರು ಮತಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಳೆದ ಬಾರಿ ಶೇ. 36.6 ಮತ ಗಳಿಸಿದ್ದರೆ, ಈ ಸಲ ಕೇವಲ ಶೇ.0.6 ಮತ ಕಳೆದುಕೊಂಡು ಶೇ. 36 ಮತಗಳನ್ನು ಗಳಿಸಿದ್ದಾರೆ. ಅದರರ್ಥ ನಾವು ಯಾವ ಕಾರಣಕ್ಕೆ ಬಿಜೆಪಿಯನ್ನು ಮಣಿಸಲು ಯತ್ನಿಸಿದ್ದೆವೋ, ಆ ವೈರುಧ್ಯಗಳು ಸಮಾಜದಲ್ಲಿ ಇನ್ನೂ ಸಶಕ್ತವಾಗಿ ಬೇರೂರಿವೆ. ಜನ ಈ ಸಲ ಬೆಲೆಯೇರಿಕೆ, ಭ್ರಷ್ಟಾಚಾರ ಮತ್ತು ಒಂದಷ್ಟು ಭಾವನಾತ್ಮಕ ಇಶ್ಯೂಗಳನ್ನು ರೆಫರೆನ್ಸ್ ಆಗಿಟ್ಟುಕೊಂಡು ಈ ಫಲಿತವನ್ನು ನೀಡಿದ್ದಾರೆಯೇ ಹೊರತು, ದ್ವೇಷವನ್ನು ಬಿತ್ತುತ್ತಿರುವ ಕೋಮುವಾದಿ ಅಜೆಂಡಾದ ವಿರುದ್ಧವಲ್ಲ. ಈ ನಿಟ್ಟಿನಿಂದ ನೋಡಿದಾಗ ಅಧಿಕಾರ ಪ್ರಾಪ್ತಿಯೊಂದಿಗೆ ಕಾಂಗ್ರೆಸ್‌ನ ಹೋರಾಟ ಗುರಿ ತಲುಪಿರಬಹುದು, ಆದರೆ ನಮ್ಮೆಲ್ಲರ ಹೋರಾಟ ಇನ್ನೂ ಗುರಿಮುಟ್ಟಿಲ್ಲ.

ಬಿಜೆಪಿ ಸ್ಥಾನಗಳಿಕೆಯಲ್ಲಿ ಕುಸಿದು, ಕಾಂಗ್ರೆಸ್ ಅಧಿಕಾರಕ್ಕೇರುತ್ತಿದ್ದಂತೆಯೇ ನಮ್ಮ ಗುರಿಯನ್ನು ಡೈವರ್ಟ್ ಮಾಡಿಕೊಳ್ಳುವುದಾಗಲಿ, ಡೈಲ್ಯೂಟ್ ಮಾಡಿಕೊಳ್ಳುವುದಾಗಲಿ ಮಾಡುವುದಾದರೆ, ನಮ್ಮ ಇಷ್ಟು ದಿನದ ಪ್ರಯತ್ನದ ಉದ್ದೇಶವನ್ನೇ ನಾವು ವಿಮರ್ಶೆಗೆ ಒಡ್ಡಿಕೊಳ್ಳಬೇಕಾಗುತ್ತದೆ. ನಮ್ಮ ಗುರಿ ಬಿಜೆಪಿ ಎಂಬ ಮುಖವಾಡವೋ, ಅಥವಾ ಕೋಮುವಾದದ ರಕ್ತಬೀಜಾಸುರನಂತಿರುವ ಸಂಘ ಪರಿವಾರವೋ ಅಂತ!

ನಿಮಗ್ಯಾರಿಗೂ ಆತಂಕ ಬೇಡ, ನಾವು ವಿರೋಧಪಕ್ಷವಾಗಿ ಕಾಂಗ್ರೆಸ್ ಸರ್ಕಾರವನ್ನು ಎಷ್ಟು ಟೀಕಿಸಬಹುದೋ, ವಿಮರ್ಶೆಗೊಡ್ಡಬಹುದೋ ಅದಕ್ಕಿಂತಲೂ ಹತ್ತು ಪಟ್ಟು ಹೆಚ್ಚು ಟೀಕೆ, ವಿಮರ್ಶೆ, ಆಪಾದನೆಗಳನ್ನೂ ಹೊರಿಸಲು ಬಿಜೆಪಿ ಕೃಪಾಪೋಷಿತ ಮೀಡಿಯಾಗಳು ಸನ್ನದ್ಧವಾಗಿ ಕುಳಿತಿವೆ. ಅಧಿಕಾರದ ಹತಾಶೆಯಿಂದ ಬಳಲುತ್ತಿರುವ ಬಿಜೆಪಿಯೂ ಬೀದಿ ಹೋರಾಟವನ್ನು ಜೋರಾಗಿಯೇ ರೂಪಿಸಲಿದೆ. ನಾವು ಕೈಕಟ್ಟಿ ಗಪ್‌ಚುಪ್ ಕೂತರು ಸಹಾ, ಮುಂದಿನ ಎಲೆಕ್ಷನ್ ಹೊತ್ತಿಗೆ ಕಾಂಗ್ರೆಸ್ ವಿರೋಧಿ ಜನಾಭಿಪ್ರಾಯವನ್ನು ಅವು ಸೃಷ್ಟಿಸಲಿವೆ. ಅದರ ಪ್ರಯೋಜನ ಪಡೆಯುವುದು ಒನ್ಸ್ ಎಗೇನ್ ಕೋಮುವಾದಿಗಳು ಮತ್ತು ಅವರ ಪಕ್ಷ.

ಸಮಾಜದ ಆಳದಲ್ಲಿ ಬೇರೂರಿರುವ ಸಾಮಾಜಿಕ, ಆರ್ಥಿಕ ಸಂಕೀರ್ಣತೆಗಳ ಸಂಕ್ಷೆಭೆಯನ್ನು, ಧಾರ್ಮಿಕತೆಯ ಸೋಗಿನ ಹುನ್ನಾರಗಳನ್ನು ಅರ್ಥ ಮಾಡಿಕೊಳ್ಳದೆ ನಾವೀಗ ಅಧಿಕಾರ ಪಲ್ಲಟವನ್ನಷ್ಟೇ ಪರಿಗಣಿಸಿಕೊಂಡು ‘ಶಾಶ್ವತ ವಿರೋಧಪಕ್ಷ ಎನ್ನುವ ನಮ್ಮ ಪ್ರಜ್ಞೆಯನ್ನು ಗೊಂದಲಗೊಳಿಸಿಕೊಂಡರೆ, ನಮಗೆ ನಾವೇ ಸಿನಿಕರಂತೆ ಕಾಣಿಸುವುದಿಲ್ಲವೇ? ಕೇಂದ್ರದಲ್ಲಿ ಇನ್ನೂ ಕೋಮುವಾದಿಗಳು ಸಡಿಲಗೊಂಡಿಲ್ಲ, ಸಮಾಜದ ಜನರ ಮನಸ್ಸಿನಲ್ಲಿ ದ್ವೇಷದ ವಾತಾವರಣ ತಿಳಿಯಾಗಿಲ್ಲ (ಶೇಕಡಾವಾರು ಮತಪ್ರಮಾಣವೇ ಇದಕ್ಕೆ ಸಾಕ್ಷಿ), ಕೋಮುವಾದದತ್ತ ಜನ ಆಕರ್ಷಿತರಾಗುತ್ತಿರುವ ತೀವ್ರತೆಯೂ ವೇಗ ಕಳೆದುಕೊಂಡಿಲ್ಲ, ಸರಿ-ತಪ್ಪುಗಳನ್ನು ತೂಗಿ ನೋಡುವ ಜನರ ಗೊಂದಲಗಳಿನ್ನೂ ನಿವಾರಣೆಯಾಗಿಲ್ಲ… ಅಂದರೆ ನಾವು ವಿರೋಧಪಕ್ಷವಾಗಿ ಕಾರ್ಯನಿರ್ವಹಿಸಬೇಕಿರುವ ವಿರೋಧಿಗಳಿನ್ನೂ ಸಮಾಜದಲ್ಲಿ ಪ್ರಬಲವಾಗಿಯೇ ಉಳಿದಿದ್ದಾರೆ. ಆದರೆ ಅಧಿಕಾರಕೇಂದ್ರಿತ ರಾಜಕಾರಣದ ಪಲ್ಲಟವನ್ನೇ ಮುಖ್ಯವಾಗಿಸಿಕೊಂಡು ನಾವು ‘ಇನ್ಮುಂದೆ ಕಾಂಗ್ರೆಸ್ ವಿರುದ್ಧ ನಮ್ಮ ಹೋರಾಟ’ ಎಂದು ಘೋಷಿಸಿದರೆ, ಅದರ ಲಾಭ ಯಾರಿಗೆ?

ಹಾಗಂತ ಕಾಂಗ್ರೆಸ್ ಮಾಡುವ ತಪ್ಪುಗಳನ್ನು, ಯಡವಟ್ಟುಗಳನ್ನು ನಾವು ಪ್ರಶ್ನಿಸಬಾರದು, ಕಾಂಗ್ರೆಸ್ ಅನ್ನು ಸಮರ್ಥಿಸಿಕೊಳ್ಳುತ್ತಾ ಆ ಪಕ್ಷದ ಬಾಲಬುಡುಕರಾಗಬೇಕು ಎನ್ನುವುದು ನನ್ನ ಉದ್ದೇಶವಲ್ಲ. ಹಾಗಾಗುವುದು ಪ್ರಜಾಪ್ರಭುತ್ವಕ್ಕೆ ಯಾವತ್ತಿಗೂ ಅಪಾಯಕಾರಿ. ನಾವು ಇಷ್ಟು ದಿನ ಯಾವ ಕಾರಣಕ್ಕಾಗಿ ಬಿಜೆಪಿಯನ್ನು ವಿರೋಧಿಸಿದೆವೋ, ಆ ಕಾರಣಗಳಿನ್ನೂ ತಮ್ಮ ಪೂರ್ಣ ಸಾಮರ್ಥ್ಯದೊಂದಿಗೆ ಇನ್ನೂ ಸಮಾಜದಲ್ಲಿ ಜೀವಂತವಿರುವಾಗಲೇ, ಕೇವಲ ರಾಜಕೀಯ ವಿರೋಧಪಕ್ಷವಾಗುವ ತುಡಿತದಲ್ಲಿ ನಮ್ಮ ಗುರಿಯನ್ನು ಆ ಕಾರಣಗಳಿಂದ ಬೇರೆಡೆ ಶಿಫ್ಟ್ ಮಾಡಿ, ನಮ್ಮ ದಾರಿಯನ್ನು ನಾವೇ ತಿರುವುಮುರುವು ಮಾಡಿಕೊಳ್ಳುವುದು ಬೇಡ ಎನ್ನುವುದು ನನ್ನ ಕಾಳಜಿ.

ನಾವು ವಿರೋಧಪಕ್ಷವಾಗಲೇಬೇಕು, ರಾಜಕೀಯ ವಿರೋಧ ಪಕ್ಷವಾಗಿ ಅಲ್ಲ; ಸಾಮಾಜಿಕ ವಿರೋಧ ಪಕ್ಷವಾಗಿ. ಯಾಕೆಂದರೆ, ಅಂಕಿಸಂಖ್ಯೆಯ ಆಟದಲ್ಲಿ ರಾಜಕೀಯವಾಗಿ ಕ್ಷೀಣಿಸಿರುವಂತೆ ಕಾಣಿಸುವ ನಮ್ಮ ಶತ್ರುಗಳು ಸಾಮಾಜಿಕ ಸಂರಚನೆಯಲ್ಲಿ ಹುಲುಸಾಗಿ ಪಸರಿಸಿದ್ದಾರೆ. ಅದನ್ನು ಕಡೆಗಣಿಸಿ ನಮ್ಮ ವಿರೋಧಪಕ್ಷದ ಉಮೇದುವಾರಿಕೆಯನ್ನು ರಾಜಕೀಯಕ್ಕಷ್ಟೇ ಸೀಮಿತಗೊಳಿಸಿದರೆ, ನಾಳೆ ಅದರ ಫಲಾನುಭವಿಗಳು ಕೋಮುವಾದಿಗಳೇ ಆಗಿರುತ್ತಾರೆ ಅನ್ನೋದನ್ನು ಮರೆಯದಿರೋಣ. ಇಷ್ಟೆಲ್ಲದರ ಹೊರತಾಗಿಯೂ, ಈ ಸರ್ಕಾರ ಮಾಡಬಹುದಾದ ತಪ್ಪುಗಳ ವಿರುದ್ಧ ಮೊದಲಿನಂತೆಯೇ ವಿಮರ್ಶಿಸೋಣ, ಹೋರಾಟಕ್ಕಿಳಿಯೋಣ. ಇದೆಲ್ಲವನ್ನು ನಾವು ಯಾವುದೇ ಘೋಷಣೆಯಿಲ್ಲದೆ ಮಾಡುತ್ತೇವೆ. ಅದೇರೀತಿ, ‘ಇನ್ಮುಂದೆ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿಂತು, ವಿರೋಧ ಪಕ್ಷವಾಗುತ್ತೇವೆ’ ಎಂಬ ಸಿನಿಕತನದ ಘೋಷಣೆಯ ಮೂಲಕ ಸಲ್ಲದ ಅಭಿಯಾನಕ್ಕೆ ಚಾಲನೆ ಕೊಟ್ಟು, ಕೊನೆಗೆ ಕೋಮುವಾದಿಗಳಿಗೇ ಆಹಾರವಾಗದಿರೋಣ. ಯಾಕೆಂದರೆ ಹೇಳದೆಯೂ ಆ ಕೆಲಸ ಮಾಡುವ ಎಲ್ಲಾ ಹಕ್ಕು, ಅರ್ಹತೆ, ನೈತಿಕತೆ ನಮಗಿದೆ. ಆದರೆ ನಮ್ಮ ಮೊದಲ ಶತ್ರು ಯಾರೆಂಬುದನ್ನು ಗೊಂದಲಗೊಳಿಸಿಕೊಳ್ಳದೆ ಇರೋಣ. ಸಾಮಾಜಿಕ ವಿರೋಧ ಪಕ್ಷವಾಗಿ, ಕೋಮುವಾದಿಗಳ ಹುನ್ನಾರಗಳನ್ನು ಬಯಲುಗೊಳಿಸುವ ನಮ್ಮ ಕಾರ್ಯವನ್ನು ಮುಂದುವರೆಸೋಣ…

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!