ಸರ್ಕಾರದ ಅನುದಾನದಲ್ಲಿ ನಡೆಯುತ್ತಿರುವ ಸಂಸ್ಥೆಯ ಆಶ್ರಯದಲ್ಲಿ ಇದ್ದಂತಹ 11 ಮಕ್ಕಳಿಗೆ ಸಂಬಂಧಿಸಿದಂತೆ ಈ ದಿನ ದತ್ತು ಆದೇಶವನ್ನು ಜಿಲ್ಲಾಧಿಕಾರಿ ಡಾ.ಹೆಚ್.ಎನ್.ಗೋಪಾಲಕೃಷ್ಣ ನೀಡಿದ್ದಾರೆ.
ಮಂಡ್ಯ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ಸಭೆ ನಡೆಸಿ ಮಾತನಾಡಿದ ಅವರು, ಸರ್ಕಾರದ ಆದೇಶದಂತೆ ಜಿಲ್ಲಾ ಸತ್ರ ನ್ಯಾಯಾಧೀಶರಿಗಿದ್ದ ಅಧಿಕಾರವನ್ನು ಜಿಲ್ಲಾ ದಂಡಾಧಿಕಾರಿಗಳಿಗೆ ವರ್ಗಾಯಿಸಲಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ದಾಖಲೆಗಳು ಮತ್ತು ಪೋಷಕರ ಹಿನ್ನೆಲೆಯನ್ನು ಪರಿಶೀಲಿಸಿ ಮಕ್ಕಳ ರಕ್ಷಣಾ ಘಟಕದ ಶಿಫಾರಸ್ಸಿನಂತೆ ಈ ದಿನ ದತ್ತು ಆದೇಶವನ್ನು ಹೊರಡಿಸಲಾಗಿದೆ. ಅಧಿಕಾರವನ್ನು ಜಿಲ್ಲಾ ದಂಡಾಧಿಕಾರಿಗಳಿಗೆ ವರ್ಗಯಿಸಿದ ನಂತರ ಮಂಡ್ಯ ಜಿಲ್ಲೆಯಲ್ಲಿ ಕಳೆದ ಮೂರು ತಿಂಗಳಲ್ಲಿ ಹತ್ತು ಮಕ್ಕಳನ್ನು ಹಾಗೂ ಪ್ರಸ್ತುತ 11 ಮಕ್ಕಳ ದತ್ತು ಆದೇಶವನ್ನು ನೀಡಲಾಗಿದೆ ಎಂದರು.
ದತ್ತು ಕಾರ್ಯಕ್ರಮ
ಬಾಲನ್ಯಾಯ (ಪೋಷಣೆ ಮತ್ತು ರಕ್ಷಣೆ) ಕಾಯ್ದೆ 2015 ರ ಅನ್ವಯ ಮಕ್ಕಳನ್ನು ಕಾನೂನು ಬಾಹಿರ ದತ್ತು ಪಡೆಯುವುದು ಅಪರಾಧ ಆಗಿದೆ. ಸಿ ಎ ಆರ್ ಎ (ಸೆಂಟ್ರಲ್ ಅಡಾಪ್ಷನ್ ರಿಸೋರ್ಸ್ ಅಥಾರಿಟಿ) ರೂಪಿಸಿರುವ ಮಾರ್ಗಸೂಚಿಯಂತೆ ಬೇರೆಯವರ ಮಕ್ಕಳನ್ನು ದತ್ತು ಪಡೆಯಬೇಕಾಗುತ್ತದೆ. ಅನಧಿಕೃತವಾಗಿ ಬೇರೆಯವರ ಮಕ್ಕಳನ್ನು ತಂದು ಸಾಕುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಲು ಅವಕಾಶವಿದೆ.
ಯಾರು ಮಕ್ಕಳನ್ನು ದತ್ತು ಪಡೆಯಬಹುದು
ಮಕ್ಕಳು ಇಲ್ಲದ ಹಾಗೂ ಈಗಾಗಲೇ ಮಕ್ಕಳು ಇರುವ ಆರೋಗ್ಯವಂತ ದಂಪತಿಗಳು, ಅವಿವಾಹಿತ, ವಿವಾಹ ವಿಚ್ಚೇಧಿತ, ವಿಧವಾ, ಮಹಿಳೆಯರು ಗಂಡು ಮತ್ತು ಹೆಣ್ಣು ಮಕ್ಕಳು ಪಡೆಯಬಹುದು, ಆದರೆ ಪುರುಷರು ಗಂಡು ಮಕ್ಕಳನ್ನು ಮಾತ್ರ ದತ್ತು ಪಡೆಯಬಹುದಾಗಿದೆ. ಲಿವ್ ಇನ್ ರಿಲೇಷನ್ ಹೊಂದಿರುವ ವ್ಯಕ್ತಿಗಳು ಮಕ್ಕಳನ್ನು ದತ್ತು ಪಡೆಯಲು ಅರ್ಹರಿರುವುದಿಲ್ಲ.
ದತ್ತು ಪ್ರಕ್ರಿಯೆಗೆ ಒದಗಿಸಬೇಕಾಗದ ದಾಖಲೆಗಳು
ಪಾನ್ ಕಾರ್ಡ್, ವಯಸ್ಸಿನ ದೃಢೀಕರಣ ದಾಖಲೆಗಳು, ವಾಸ ಸ್ಥಳದ ದೃಢೀಕರಣಕ್ಕೆ ಪೂರಕವಾದ ದಾಖಲೆಗಳು, ವೈದ್ಯಕೀಯ ತಪಾಸಣಾ ದೃಢೀಕರಣ ದಾಖಲೆಗಳು, ವಿವಾಹ ದೃಢೀಕರಣ ದಾಖಲೆ, ಆದಾಯ ದೃಢೀಕರಣ ದಾಖಲೆ, ವಿವಾಹ ವಿಚ್ಛೇದನವಾದಲ್ಲಿ ಡೈವೋರ್ಸ್ ಸರ್ಟಿಫಿಕೇಟ್ ಮತ್ತು ಪತಿಯು ಮರಣ ಹೊಂದಿದಲ್ಲಿ ಪತಿಯ ಮರಣ ಪ್ರಮಾಣ ಪತ್ರ, ಪೋಸ್ಟ್ ಕಾರ್ಡ್ ಅಳತೆಯ ಭಾವಚಿತ್ರ. ದತ್ತು ಪಡೆಯಲು ಇಚ್ಚಿಸುವ ಪೋಷಕರು WWW.CARA.NIC.IN ರಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿರುತ್ತದೆ ಎಂದು ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ ಸಿ.ಬಿ ಹೇಳಿದರು. ಸಭೆಯಲ್ಲಿ ಮಕ್ಕಳ ರಕ್ಷಣಾಧಿಕಾರಿ ಮಹದೇವು ಭಾಗವಹಿಸಿದ್ದರು.




