ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವ ರಾಜ್ಯ ಸರ್ಕಾರದ ವಿರುದ್ದ ತಾಲೂಕಿನಲ್ಲಿ ಹೋರಾಟ ತೀವ್ರತೆ ಪಡೆದುಕೊಂಡಿದ್ದು, ಪಾಂಡವಪುರದಲ್ಲಿ ರೈತರು ಅರೆ ಬೆತ್ತಲೆ ಮೂಲಕ ಪ್ರತಿಭಟನೆ ನಡೆಸುವ ಮೂಲಕ ಸರ್ಕಾರರ ವಿರುದ್ಧ ಆಕ್ರೋಶ ಹೊರ ಹಾಕಿದರು.
ಬಿಜೆಪಿ ಮುಖಂಡ ಎಚ್.ಎನ್.ಮಂಜುನಾಥ್ ನೇತೃತ್ವದಲ್ಲಿ ಶ್ರೀರಂಗಪಟ್ಟಣ-ಜೇವರ್ಗಿ
ಹೆದ್ದಾರಿಯ ಡಾ.ರಾಜಕುಮಾರ್ ವೃತ್ತದಲ್ಲಿ ಜಮಾವಣೆಗೊಂಡು ಅರೆ ಬೆತ್ತಲೆ
ಚಳವಳಿ ನಡೆಸಿ ಕೆಲ ಕಾಲ ವಾಹನ ಸಂಚಾರ ತಡೆದರು. ಇದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು.
ಕಾವೇರಿ ನದಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆ ಮಾಡುವ ಮೂಲಕ ನೆರೆ ರಾಜ್ಯದ ರೈತರ ಕಾಪಾಡಲು ಮುಂದಾಗಿರುವ ರಾಜ್ಯ ಸರ್ಕಾರ ಇಲ್ಲಿನ ರೈತರ ಹಿತವನ್ನು ಕಡೆಗಣಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ ಪ್ರತಿನಿತ್ಯ 5,000 ಕ್ಯೂಸೆಕ್ ನೀರು ಬಿಡಲು ಆದೇಶಿಸಿದ್ದರೆ, ಕೆ ಆರ್ ಎಸ್ ನಿಂದ 7,000 ಕ್ಕೂ ಹೆಚ್ಚು ಕ್ಯೂ ಸೆಕ್ಸ್ ನೀರು ಬಿಡುತ್ತಿರುವುದು ಖಂಡನೀಯ. ಬೆಳೆದು ನಿಂತಿರುವ ಬೆಳೆ ರಕ್ಷಣೆಗೆ ನೀರಿಲ್ಲದ ಪರಿಸ್ಥಿತಿಯಲ್ಲಿ ಜಲಾಶಯ ಬರಿದು ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ತರಲಿದೆ ಎಂದು ಕಿಡಿಕಾರಿದರು.
ಪರಿಹಾರ ಘೋಷಿಸಿ, ನೀರು ಬಿಡಿ
ನಮಗೆ ಕುಡಿಯುವ ನೀರಿಗೂ ಸಂಕಷ್ಟ ಎದುರಾಗಿರುವ ವೇಳೆ ತಮಿಳುನಾಡಿಗೆ ನೀರು ಬಿಡುಗಡೆ ಮಾಡುತ್ತಿರುವುದು ಸರಿಯಲ್ಲ. ಈ ಕೂಡಲೇ ನೀರು ಸ್ಥಗಿತಗೊಳಿಸಬೇಕು. ಇಲ್ಲವೇ ಸರ್ಕಾರ
ರೈತರಿಗೆ ಕಬ್ಬು, ಭತ್ತದ ಬೆಳೆಗೆ ಪರಿಹಾರ ಘೋಷಿಸಿ, ಬಳಿಕ ನೀರು ಬಿಡಿ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಹೋರಾಟಗಾರ ಹಾರೋಹಳ್ಳಿ ಎಚ್.ಎನ್.ನಾರಾಯಣಗೌಡ, ಬಿಜೆಪಿ ಮುಖಂಡರಾದ ಎಚ್.ಕೆ.ದೊರೆಸ್ವಾಮಿ, ಎನ್.ಭಾಸ್ಕರ್, ಶ್ರೀನಿವಾಸನಾಯಕ, ಚಿಕ್ಕಾಡೆ ತಿಮ್ಮೇಗೌಡ, ಕುಮಾರನಾಯಕ, ಪಾಪು, ಹುಲ್ಕೆರೆ ನಾರಾಯಣಗೌಡ, ರೈತ ಮುಖಂಡರಾದ ಬೇವಿನಕುಪ್ಪೆ ಚಂದ್ರು, ಸೋಮು, ಪುರಸಭೆ ಮಾಜಿ ಅಧ್ಯಕ್ಷ ಹೊನ್ನಗಿರಿಗೌಡ ಇತರರು ಭಾಗವಹಿಸಿದ್ದರು.




