✍🏿 ಪಿ ಹರೀಶ್, ಮದ್ದೂರು
ಸಹಕಾರಿ ಧುರೀಣ ಪಟೇಲ್ ಕೆ.ತಮ್ಮಣ್ಣಗೌಡರ ಕಂಚಿನ ಪುತ್ಥಳಿ ಲೋಕಾರ್ಪಣೆ
ಕೆ ಆರ್ ಎಸ್ ಸಮಿತಿಯಲ್ಲಿದ್ದು ಹಲವಾರು ಅಭಿವೃದ್ಧಿ ಕಾಯಕಗಳಿಗೆ ನೆರವಾದ ಕೆ.ತಮ್ಮಣ್ಣಗೌಡರು
3.50 ಲಕ್ಷ ರೂ.ವೆಚ್ಚದಲ್ಲಿ ಕೆ. ತಮ್ಮಣ್ಣಗೌಡರ ಕಂಚಿನ ಪ್ರತಿಮೆ
ಸಹಕಾರಿ ಕ್ಷೇತ್ರ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ತಮ್ಮದೇ ಆದ ಮಹತ್ತರ ಕೊಡುಗೆ ನೀಡಿರುವ ಸಹಕಾರಿ ಧುರೀಣ ಪಟೇಲ್ ಕೆ.ತಮ್ಮಣ್ಣಗೌಡರ ಕಂಚಿನ ಪುತ್ಥಳಿಯನ್ನು ಮದ್ದೂರು ಪಟ್ಟಣದ ಟಿಎಪಿಎಂಎಸ್ ಗೋದಾಮು ಆವರಣದಲ್ಲಿ ನಾಳೆ ಲೋಕಾರ್ಪಣೆ ಗೊಳ್ಳಲಿದೆ.
ತಮ್ಮಣ್ಣಗೌಡರು ಮದ್ದೂರು ತಾಲ್ಲೂಕಿನ ಕೋಣಸಾಲೆ ಗ್ರಾಮದ ಪಟೇಲ್ ಕೆ.ಕೆಂಪೇಗೌಡ ಮತ್ತು ಶ್ರೀಮತಿ ಹೊಂಬಾಳಮ್ಮ ರವರ ಮಗನಾಗಿ 1902 ರಲ್ಲಿ ಜನಿಸಿದರು. ರೈತರಾಗಿ ಪಟೇಲ ವೃತ್ತಿಯಲ್ಲಿ ಇದ್ದ ಇವರು ಮದ್ದೂರು ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ಗುಮಾಸ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಮದ್ದೂರಿನ ಎಂ. ಹೆಚ್. ಚನ್ನೇಗೌಡರ ಸಹೋದರಿಯ ಮಗಳ ಮಗಳು ಲಿಂಗಮ್ಮನವರನ್ನು ಮದುವೆ ಆದ ಮೇಲೆ ಮದ್ದೂರಿನಲ್ಲಿ ನೆಲೆಸಿ ಗುಮಾಸ್ತ ಹುದ್ದೆಯನ್ನು ತ್ಯಜಿಸಿ ಪ್ರಜಾಪ್ರತಿನಿಧಿ ಸಭೆಯ ಸದಸ್ಯರಾಗಿ ಸಾಮಾಜಿಕ ಜೀವನದಲ್ಲಿ ತೊಡಗಿಸಿಕೊಂಡರು.
ಚಿಕ್ಕಪ್ಪ ಎಂ.ಹೆಚ್. ಚನ್ನೇಗೌಡರಿಗಿದ್ದ ಸಹಕಾರಿ ಕ್ಷೇತ್ರದಲ್ಲಿ ಅಪಾರವಾದ ಜ್ಞಾನ ಕಂಡು ಪುಳಕಿತರಾದ ಕೆ. ತಮ್ಮಣ್ಣಗೌಡರು ಮದ್ದೂರಿನಲ್ಲಿ ಅನೇಕ ಸಹಕಾರಿ ಸಂಘಗಳ ಸ್ಥಾಪನೆಗೆ ಕಾರಣರಾದರು.
ತಾಲೂಕು ಬೋರ್ಡ್ ಪ್ರಥಮ ನಾಮಕರಣ ಅಧ್ಯಕ್ಷರಾಗಿ ಸರ್ಕಾರದಿಂದ ನೇಮಕಗೊಂಡ ನಂತರ ಮದ್ದೂರು ತಾಲ್ಲೂಕು ವ್ಯವಸಾಯೋತ್ಪನ್ನ ಮಾರಾಟಗಾರರ ಸಹಕಾರ ಸಂಘದ ಸ್ಥಾಪನೆಗೆ ಮುಂದಾದರು. ಮುಂದೆ ಇವರು 21-03-1949 ರಿಂದ 1963 ರವರೆಗೆ 15 ವರ್ಷಗಳವರೆಗೆ ನಿರಂತರವಾಗಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ, ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾದರು.
ಮದ್ದೂರು ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಮದ್ದೂರು ಟೌನ್ ಬಳಕೆದಾರರ ಸಹಕಾರಿ ಸಂಘ , ಬೆಸಗರಹಳ್ಳಿ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಸ್ಥಾಪನೆಗೆ ಕಾರಣರಾದರು. ಮದ್ದೂರು ಧ್ವಜ ಸತ್ಯಾಗ್ರಹ ಸೌಧ ನಿವೇಶನವನ್ನು ಪುರಸಭೆ ವ್ಯಾಪ್ತಿಯಲ್ಲಿ ಉಳಿಸಲು ಶ್ರಮಿಸಿದರು. ಕೆ.ಆರ್.ಎಸ್. ಸಮಿತಿಯಲ್ಲಿದ್ದು ಹಲವಾರು ಅಭಿವೃದ್ಧಿ ಕಾಯಕಗಳಿಗೆ ನೆರವಾದ ಇವರು ಮದ್ದೂರು ತಾಲ್ಲೂಕಿನಲ್ಲಿ ಸಹಕಾರಿ ಸಂಘಗಳು ಅಸ್ಥಿತ್ವಕ್ಕೆ ಬರಲು ಅವಿರತವಾಗಿ ದುಡಿದರು. ಇವರ ಅವಧಿಯಲ್ಲಿ ಸಹಕಾರಿ ಸಂಘಕ್ಕೆ ನಿವೇಶನವನ್ನು, ಕಟ್ಟಡವನ್ನು ನಿರ್ಮಿಸಿದರು.
ಪಟ್ಟಣದ ಪುರಸಭೆ 1952 ರವರೆಗೆ ಕಿರಿಯ ಪುರಸಭೆಯಾಗಿದ್ದು, ಅಮಲ್ದಾರರೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಪುರಸಭೆಯನ್ನ ಹಿರಿಯ ದರ್ಜೆಗೆ ಕೊಂಡೊಯ್ಯವುದರಲ್ಲಿ ಇವರ ಶ್ರಮ ಅಗಾಧವಾದುದು. ಮದ್ದೂರು ಪಟ್ಟಣದ ರಾಜಕುಮಾರಿ ಲೀಲಾವತಿ ಬಡಾವಣೆ ಅಸ್ತಿತ್ವಕ್ಕೆ ಬರಲು, ಪುರಸಭೆ ಭೂಮಿಯನ್ನು ಹೊಂದಲು ಕ್ರಮ ಕೈಗೊಂಡರು. 1963 ರಲ್ಲಿ ತಮ್ಮ ಮಗ ಕೆ.ಟಿ. ಚಂದುರವರಿಗೆ ಟಿ.ಎ.ಪಿ.ಸಿ.ಎಮ್.ಎಸ್. ಅಧ್ಯಕ್ಷಗಿರಿಯನ್ನು ವರ್ಗಾಯಿಸುವುದರ ಮುಖಾಂತರ ಅವರಿಗೂ ಸಹಕಾರಿ ಕ್ಷೇತ್ರದ ಗೀಳನ್ನು ಹಚ್ಚಿದರು.
ಹೀಗೆ ತಮ್ಮ ನಿಷ್ಠೆ, ಪ್ರಾಮಾಣಿಕತೆಯ ಅಡಿಪಾಯದಲ್ಲಿ ನಿರಂತರವಾಗಿ ಸಹಕಾರಿ ಸಂಘಗಳ ಹಾಗೂ ಇನ್ನಿತರ ಹತ್ತು ಹಲವು ಅಭಿವೃಧ್ಧಿ ಕಾರ್ಯಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಶ್ರೀಯುತರು ಮಾಡಿದ ಕಾರ್ಯಸಾಧನೆ ಪದಗಳಿಗೆ ನಿಲುಕದ್ದು.ತಮ್ಮಣ್ಣ ಗೌಡರ ಸಾಧನೆಗಳು ಮುಂದಿನ ಪೀಳಿಗೆಗೆ ಮಾದರಿಯಾಗಿದೆ.
ಇಂತಹ ಮಹಾನ್ ಚೇತನ 1970 ರಲ್ಲಿ ಇಹಲೋಕ ತ್ಯಜಿಸಿದ್ದರೂ, ಕೆ.ತಮ್ಮಣ್ಣಗೌಡರ ಸಾಧನೆಗಳು ಮಾತ್ರ ಜನಮನದಲ್ಲಿ ಇಂದಿಗೂ ಸಹಾ ಅವರ ಜೀವಂತಿಕೆಗೆ ಸಾಕ್ಷಿಯಾಗಿವೆ.
ಮದ್ದೂರು ತಾಲೂಕು ವ್ಯವಸಾಯೋತ್ಪನ್ನ ಸಹಕಾರಿ ಸಂಘದ ಆವರಣದಲ್ಲಿ ಸೆ.23 ರಂದು ನಡೆಯುವ ಟಿಎಪಿಸಿಎಂಸ್ ವಾರ್ಷಿಕ ಮಹಾಸಭೆಯಲ್ಲಿ 3.50 ಲಕ್ಷ ರೂ.ವೆಚ್ಚದಲ್ಲಿ ಕೆ. ತಮ್ಮಣ್ಣಗೌಡರ ಕಂಚಿನ ಪ್ರತಿಮೆಯನ್ನು ಪ್ರತಿಷ್ಟಾಪಿಸಿ ಅವರ ಮಗ ಕೆ.ಟಿ. ಚಂದುರವರಿಂದ ಅನಾವರಣ ಮಾಡಿಸುತ್ತಿರುವುದು ನಿಜಕ್ಕೂ ಅವರಿಗೆ ಸಂದ ಗೌರವವಾಗಿದೆ.

ನಮ್ಮ ತಂದೆ ಕೆ.ತಮ್ಮಣ್ಣಗೌಡರು ಸಹಕಾರ ಕ್ಷೇತ್ರದಲ್ಲಿ ಹಲವಾರು ಮಹತ್ತರ ಕೊಡುಗೆ ನೀಡಿದ್ದಾರೆ. ಸಮಾಜ ಮುಖಿಯಾಗಿ ಜೀವಿತದ ಕೊನೆಯವರೆಗೆ ಕೆಲಸ ಮಾಡಿದ್ದಾರೆ.ಇವರ ಈ ಸಾಧನೆಯನ್ನು ಗುರುತಿಸಿ ಟಿಎಪಿಸಿಎಂಎಸ್ ಗೋದಾವಿನ ಆವರಣದಲ್ಲಿ ಇವರ ಕಂಚಿನ ಪುತ್ಥಳಿ ಅನಾವಣರ ಮಾಡುತ್ತಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಅವರ ಪುತ್ರ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ.ಟಿ.ಚಂದು ಸಂತಸ ವ್ಯಕ್ತಪಡಿಸಿದರು.




