Wednesday, November 18, 2026

ಪ್ರಾಯೋಗಿಕ ಆವೃತ್ತಿ

ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ : ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ

ಮೈಸೂರಿನ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ ಪಾಲಿಮರ್/ಪ್ಲಾಸ್ಟಿಕ್ಸ್ ಡಿಪ್ಲೋಮಾ ಕೋರ್ಸ್‌ಗಳಿಗೆ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ನೇರ ಪ್ರವೇಶ ನೀಡಲಾಗುತ್ತಿದೆ ಎಂದು ಸಂಸ್ಥೆಯ ಸಹಾಯಕ ತಂತ್ರಜ್ಞಾನ ಅಧಿಕಾರಿ ಲಕ್ಷ್ಮಣ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದರಿ ಸಂಸ್ಥೆಯನ್ನು ಕೇಂದ್ರ ಸರ್ಕಾರವು ೧೯೬೮ರಲ್ಲಿ ಪ್ರಾರಂಭಿಸಿದ್ದು, ರಾಜ್ಯದಲ್ಲಿ ೧೯೯೧ರಲ್ಲಿ ಮೈಸೂರಿನಲ್ಲಿ ಪ್ರಾರಂಭಗೊಂಡಿತ್ತು. ಸಂಸ್ಥೆಯಲ್ಲಿ ಡಿಪ್ಲೋಮಾ ಇನ್ ಪ್ರಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ) ಹಾಗೂ ಡಿಪ್ಲೋಮಾ ಇನ್ ಪ್ಲಾಸ್ಟಿಕ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಎಂಬ ೩ ವರ್ಷಗಳ ಕೋರ್ಸ್‌ಗಳು ನಡೆಯಲಿವೆ ಎಂದರು.

ಕೇಂದ್ರದ ರಾಸಾಯನಿಕ ಮತ್ತು ರಸಗೊಬ್ಬರ ಇಲಾಖೆ ಸ್ಥಾಪಿಸಿದ ೪೦ ಸಂಸ್ಥೆಗಳಲ್ಲಿ ಮೈಸೂರಿನ ಸಂಸ್ಥೆಯೂ ಒಂದಾಗಿದ್ದು, ಕರ್ನಾಟಕದ ಯುವ ಪೀಳಿಗೆಗೆ ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯಲು ವರದಾನವಾಗಿದೆ. ಅಂತೆಯೇ ಕಾಲೇಜಿನಲ್ಲಿ ವರ್ಷಕ್ಕೆ ೧೨೦ ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ ಎಂದರು.

ಹೊರ ರಾಜ್ಯದವರಿಗೆ ಪ್ರವೇಶ ಪಡೆಯಲು ನಿಬಂಧನೆಗಳಿದ್ದು, ಸಂಸ್ಥೆಯ ಪ್ರಯತ್ನದ ಫಲವಾಗಿ ಕರ್ನಾಟಕ ರಾಜ್ಯದ ವಿದ್ಯಾರ್ಥಿಗಳಿಗೆ ನೇರವಾಗಿ ಪ್ರವೇಶ ಪಡೆಯುವ ಅವಕಾಶವನ್ನು ಕೇಂದ್ರ ಸರ್ಕಾರ ಕಲ್ಪಿಸಿದೆ. ೪೦ ಮೈಕ್ರಾನ್‌ಗಿಂತ ಕಡಿಮೆ ಪ್ಲಾಸ್ಟಿಕ್ ಅಲ್ಲದೇ ಎಂಜಿನಿಯರ್‍ಡ್ ಪ್ಲಾಸ್ಟಿಕ್ ಮೂಲಕ ಬಳಕೆಯ ವಸ್ತುಗಳನ್ನು ತಯಾರಿಸುವ ತರಬೇತಿ ಕೇಂದ್ರ ಇದಾಗಿದೆ ಎಂದು ಹೇಳಿದರು.

ನಮ್ಮಲ್ಲಿ ತರಬೇತಿ ಪಡೆದವರಿಗೆ ಶೇ.೧೦೦ರಷ್ಟು ಉದ್ಯೋಗಾವಕಾಶಗಳು ದೊರೆಯಲಿದ್ದು, ಸ್ವ ಉದ್ಯೋಗ ಸೃಷ್ಠಿಗೂ ಸಹಕಾರಿಯಾಗಿದೆ. ಕಾಲೇಜಿನ ವತಿಯಿಂದ ವಿದ್ಯಾರ್ಥಿ ವೇತನ ಹಾಗೂ ವಿದ್ಯಾರ್ಥಿ ಸಾಲ ಪಡೆಯಲು ಮಾರ್ಗದರ್ಶನ ನೀಡಲಾಗುವುದು. ಕೋರ್ಸ್‌ನಲ್ಲಿ ಕೊನೆಯ ೬ ತಿಂಗಳು ಕೈಗಾರಿಕೆಗಳಲ್ಲಿ ತರಬೇತಿ ನೀಡಲಿದ್ದು, ೧೫ ಸಾವಿರ ರೂಗಳ ಸ್ಟೀಫಂಡ್ ಸಹ ವಿದ್ಯಾರ್ಥಿಗಳಿಗೆ ದೊರೆಯಲಿದೆ ಎಂದು ಮಾಹಿತಿ ನೀಡಿದರು.

ಕೋರ್ಸ್ ಮುಗಿಸಿದವರಿಗೆ ಆಟೋ ಮೊಬೈಲ್ಸ್ ಕೈಗಾರಿಕೆ, ವಾಹನದ ಬಿಡಿ ಭಾಗ ತಯಾರಿಸುವ ಉದ್ಯಮ, ಪಿವಿಸಿ ಪೈಪ್ ತಯಾರಿಕಾ ಕಂಪನಿಗಳು, ವಿದ್ಯುನ್ಮಾನ, ಪ್ಲಾಸ್ಟಿಕ್ ವಸ್ತು ಉತ್ಪಾದನಾ ಕಂಪನಿ, ಆಹಾರೋದ್ಯಮ, ವೈದ್ಯಕೀಯ ಕ್ಷೇತ್ರ, ಆಗ್ರೋ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ ಕ್ಷೇತ್ರ ಹಾಗೂ ಎಲೆಕ್ಟ್ರಿಕಲ್ಸ್, ಎಲೆಕ್ಟ್ರಾನಿಕ್ಸ್ ಕೇಂದ್ರಗಳಲ್ಲಿ ಉದ್ಯೋಗಾವಕಾಶಗಳು ದೊರೆಯಲಿದೆ ಎಂದು ಹೇಳಿದರು.

ಸಂಸ್ಥೆಯ ಹಿರಿಯ ಸಹಾಯಕ ತಂತ್ರಜ್ಞಾನ ಅಧಿಕಾರಿ ಮಹೇಶ್ ಮಾತನಾಡಿ, ೧೦ನೇ ತರಗತಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಅರ್ಹರಿದ್ದು, ಅವರಿಗೆ ೩ ವರ್ಷಗಳ ಕೋರ್ಸ್, ಪಿಯುಸಿ ವಿಜ್ಞಾನ ವಿಭಾಗ ಉತ್ತೀರ್ಣ ಹಾಗೂ ಐಟಿಐ ಫಿಟ್ಟರ್ ಮತ್ತು ಟರ್ನರ್ ಕೋರ್ಸ್‌ಗಳ ಉತ್ತೀರ್ಣರಾದವರಿಗೆ ೨ ನೇ ವರ್ಷಕ್ಕೆ ನೇರ ಪ್ರವೇಶ ನೀಡಲಾಗುತ್ತದೆ ಎಂದು ತಿಳಿಸಿದರು.

ಕೋರ್ಸ್‌ಗಳ ಪ್ರತಿ ಸೆಮಿಸ್ಟರ್‌ಗೆ ೨೦ ಸಾವಿರ ರೂ ಶುಲ್ಕವಿದ್ದು, ಬಾಲಕ, ಬಾಲಕಿಯರ ಪ್ರತ್ಯೇಕ ವಿದ್ಯಾರ್ಥಿನಿಲಯ ವ್ಯವಸ್ಥೆ ಲಭ್ಯವಿದೆ. ನಮ್ಮ ಕೋರ್ಸ್‌ಗಳಲ್ಲಿ ಉತ್ತೀರ್ಣರಾದವರಿಗೆ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಯಾವುದೇ ಪ್ರವೇಶ ಪರೀಕ್ಷೆಗಳಿಲ್ಲದೇ ನೇರವಾಗಿ ನೇಮಕಾತಿ ಪಡೆಯಬಹುದಾಗಿದೆ ಇಂದು ಇದೇ ವೇಳೆ ಮಾಹಿತಿ ಹಂಚಿಕೊಂಡರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ