✍️ ಚೇತನ್ ಕಾಗೇಪುರ
-
ಭೂತಾನಿನ ಸಂಚಾರಿ ನಿಯಮವನ್ನು ಅದೆಷ್ಟು ಶ್ಲಾಘಿಸಿದರೂ ಸಾಲದು
- 3 ಕಿ.ಮೀ ಪ್ರಯಾಣಿಸಿ ಡಾಚುಲಾ ಪಾಸ್ ಎಂಬ ಪರ್ವತ ರಾಶಿಗಳ ನಡುವಿನ ಬೌದ್ಧ ದಮ್ಮ ಗುರುಗಳ ಮೊನಸ್ಟ್ರಿ ( ಸಮಾದಿ )
- ಹಿಮದ ರಾಶಿಯಿಂದ ಆವೃತವಾದ ಪರ್ವತಗಳು ಸಂಜೆ ಸೂರ್ಯನ ಬೆಳಕಿನಲ್ಲಿ ಪ್ರಜ್ವಲಿಸುತ್ತಿರುವಂತೆ ಕಾಣುತ್ತಿತ್ತು
ಮದ್ಯಾಹ್ನ ಊಟ ಮುಗಿಸಿ ಕೀರ್ತನಾಳನ್ನು ಬೀಳ್ಕೊಟ್ಟು ನಮ್ಮ ಪಯಣ ಥಿಂಪು ನಗರದಿಂದ ಫೋಬ್ಜಿಖಾ ಕಣಿವೆಯ ಕಡೆಗೆ ಆರಂಭವಾಯಿತು, ಇಲ್ಲಿಂದ ಫೋಬ್ಜಿಕಾ ಕಣಿವೆಯ ದೂರ ಸುಮಾರು 130 ಕಿ.ಮೀ. ಈ ಪ್ರಯಾಣದ ಅವಧಿಯಲ್ಲಿ ನಿಮಗೆ ಪ್ರಯಾಣಿಸುತ್ತಿರುವ ನಾವು ನಾಲ್ಕೂ ಜನರು ಪರಿಚಯವಾದ ವಿದವನ್ನು ಹೇಳಿಬಿಡುತ್ತೇನೆ.
ಇದನ್ನೂ ಓದಿ : ಭೂತಾನ್ ಪ್ರಯಣ : ಬೆಟ್ಟದ ಮೇಲಿನ ಬುದ್ಧ ವಿಹಾರ
ಮೊದಲಿಗೆ ದಿನೇಶನ ಪರಿಚಯವಾಗಿದ್ದು ಒಂದು ಚಿತ್ರಕಲಾ ಕಾರ್ಯಕ್ರಮದಲ್ಲಿ. ನನ್ನ ಹಿರಿಯ ಸ್ನೇಹಿತರಲ್ಲಿ ಒಬ್ಬರಾದ ವಿಜಯ್ ರವರು ವೃತ್ತಿಯಲ್ಲಿ ಆಹಾರ ತಜ್ಞರು ಇವರೊಂದು ಚಿತ್ರಕಲಾ ಕಾರ್ಯಕ್ರಮವನ್ನು ಮೈಸೂರಿನಲ್ಲಿ ಆಯೋಜಿಸಿದ್ದರು , ಅಲ್ಲಿಗೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಹಲವಾರು ಚಿತ್ರ ಕಲೆ ಬಿಡಿಸುವವರು ಬಂದಿದ್ದರು, ಅವರುಗಳಲ್ಲಿ ಒಬ್ಬರು ನಮ್ಮ ಪ್ರಯಾಣದ ಸ್ನೇಹಿತ ದಿನೇಶನ ಬಾಳ ಸಂಗಾತಿ ಲತಾ ರವರು. ಇವರು ಗೃಹಿಣಿಯಾಗಿದ್ದು ಉತ್ತಮ ಚಿತ್ರ ಕಲಾವಿದರು. ಕಾರ್ಯಕ್ರಮಕ್ಕೆ ನಾನು ಸಹ ಹೋಗಿದ್ದೆ ಆಗ ಅಲ್ಲಿ ಪರಿಚಿತರಾದವರು ಈ ಲತಾ ದಿನೇಶ್.
ನಂತರ ಆಗೊಮ್ಮೆ ಈಗೊಮ್ಮೆ ಒಬ್ಬರು ಇನ್ನೊಬ್ಬರಿಗೆ ಫೋನ್ ಮಾಡುತ್ತಿದೆವು ಹೀಗೇ ನಮ್ಮ ಸ್ನೇಹ ಬೆಳೆಯುತ್ತಾ ಹೋಯಿತು. ಒಮ್ಮೆ ನಾನು ಏಕಾಂಗಿಯಾಗಿ ಹಿಮಾಚಲಪ್ರದೇಶ, ಪಂಜಾಬ್, ಉತ್ತರ ಖಂಡ, ದೆಹಲಿ ಗೆ ಪ್ರಯಾಣ ಹೋಗಿದ್ದೆ. ಆಗ ಈ ದಿನೇಶ ನನಗೆ ಇಲ್ಲಿ ಬೆಂಗಳೂರಿನಿಂದ ಅಲ್ಲಿರುವ ನನಗೆ ಯಾವಾಗ ಎಲ್ಲಿಂದ ಎಲ್ಲಿಗೆ ಬಸ್ಸು ಗಳಿವೆ, ರೈಲುಗಳಿವೆ ಎಂದು ನೋಡಿ ನನ್ನ ಸಮಯಕ್ಕನುಗುಣವಾಗಿ ಸೀಟ್ ರಿಸರ್ವ್ ಮಾಡಿಕೊಡುತ್ತಿದ್ದ.
ಕೆಲವು ದಿನಗಳ ನಂತರ ನನಗೆ ಕರೆ ಮಾಡಿದ ದಿನೇಶ ಒಂದು ಲಾಂಗ್ ಡ್ರೈವ್ ಪ್ರವಾಸ ಸಿದ್ಧತೆ ನಡೆಸುತ್ತಿದ್ದವೇ ನೀವು ಬಂದರೆ ಚೆನ್ನಾಗಿರುತ್ತದೆ, ಬರುವಿರಾ.. ಎಂದ. ಎಲ್ಲಿಗೆ ಏನು ಎಂಬುದು ಚರ್ಚೆಯಾಯಿತು. ಸರಿ ಬರುತ್ತೇನೆಂದು ನಾನು ಒಪ್ಪಿಕೊಂಡೆ. ಆದರೆ ಮನಸ್ಸಿನಲ್ಲಿ ಒಂದು ರೀತಿಯ ತಳಮಳ, ಕಲಹ ಶುರುವಾಯಿತು. ನಾನು ತೆಗೆದುಕೊಂಡ ನಿರ್ಧಾರ ಸರಿಯೇ ಎಂದು. ಕಾರಣ ಹೇಮಂತ, ಯೋಗಿ ಇವರೊಟ್ಟಿಗೆ ಮಾತನಾಡಿ ಹೊರಡುವ ದಿನಾಂಕ ನಿಗದಿಪಡಿಸಿಯಾಗಿತ್ತು. ಅದು ನಾನು ಹಾಗೂ ಅಪೂರ್ವ ಮದುವೆಯಾದ ಸರಿಯಾಗಿ ಒಂದು ತಿಂಗಳಿಗೆ. ಮದುವೆಯಾದ ಇಷ್ಟು ಕಡಿಮೆ ಅಂಥರದಲ್ಲಿಯೇ ಸಂಗತಿಯನ್ನು ಬಿಟ್ಟು ಅಷ್ಟು ದೂರ ಕಾರಿನಲ್ಲಿ ಪ್ರಯಾಣ ಹೊರಟಿರುವುದು ಸರಿಯೇ ? ನೆಂಟರಿಷ್ಟರು ಏನನ್ನಬಹುದು ಎಂಬ ಚಿಂತೆ. ಅಪೂರ್ವ ಜೊತೆಗೆ ಪ್ರಯಾಣದ ಸಿದ್ಧತೆ ಆರಂಭಿಸುವಾಗಲೇ ಎಲ್ಲವನ್ನೂ ಚರ್ಚಿಸಿದ್ದೆ, ಒಪ್ಪಿಗೆಯನ್ನೂ ಪಡೆದಿದ್ದೆ. ಆದರೆ ನೆಂಟರಿಷ್ಟರದ್ದೇ ದೊಡ್ಡ ಯೋಚನೆಯಾಗಿತ್ತು. ಇರಲಿ ನಿಭಾಯಿಸಿದರಾಯಿತು ಎಂದುಕೊಳ್ಳುತ್ತಲೇ ಆದರೆ ಇಂತಹ ಸಂದರ್ಭ ಮತ್ತೆ ಸಿಗುವುದೋ.. ಇಲ್ಲವೋ.. ಎಂದುಕೊಂಡು ತಯಾರಾಗಿದ್ದೆ.
ಇನ್ನೂ ಹೇಮಂತ ಮತ್ತು ಯೋಗಿ ಇಬ್ಬರನ್ನು ನಾನು ನೋಡಿದ್ದು ಮತ್ತು ಅವರು ನನ್ನನ್ನು ಭೇಟಿಯಾಗಿದ್ದು ಬೆಂಗಳೂರಿನಲ್ಲಿ ನಾವು ಹೊರಡಲು ಕಾರಿನಲ್ಲಿ ಕುಳಿತಾಗಲೇ. ಅಲ್ಲಿಯವರೆಗೆ ದಿನೇಶನ ಯೋಜನೆಯ ಮೇರೆಗೆ ಸ್ವಲ್ಪ ಪರಿಚಯವಿರಲಿ ಎಂದು ಒಮ್ಮೆ ಕನ್ಫೆರೆನ್ಸ್ ಕಾಲ್ ನಲ್ಲಿ ಮಾತಾಡಿದ್ದೆವು ಅಷ್ಟೇ. ನಾವು ಹೊರಟಿದ್ದ ಕಾರು ಸುಮಾರು 85 ಸಾವಿರ ಕಿಲೋಮೀಟರ್ ಓಡಿದ್ದ ವ್ಯಾಗನಾರ್. ಈ ಕಾರನ್ನು ಅಂತಿಮ ಆಯ್ಕೆ ಮಾಡಿಕೊಳ್ಳುವ ಮೊದಲು, ಟಾಟಾ ನ್ಯಾನೋ ಆದರೂ ಆಗಬಹುದು ಎಂದು ಚರ್ಚಿಸಿಕೊಂಡಿದ್ದೆವು. ಇಲ್ಲಿಯವರೆಗೆ ಅಷ್ಟು ದೂರದ ಪ್ರಯಾಣಕ್ಕೆ ತುಂಬಾ ದೊಡ್ಡ ಕಾರೇ ಬೇಕು ಅಂದುಕೊಂಡಿದ್ದ ನನ್ನ ಅಭಿಪ್ರಾಯ ಬದಲಾಗಿತ್ತು. ಏಕೆಂದರೆ ಕಾರು ಯಾವುದಾದರೇನು ಇಂತಹ ಪ್ರಯಾಣದ ಅನುಭವ ಹೊಂದಿಯೇ ತೀರಬೇಕೆಂಬ ಉತ್ಕಟತ್ತೆ ಎಲ್ಲವನ್ನು ಮೀರಿದ್ದಾಗಿತ್ತು.
ಈಗ ಥಿಮ್ಫು ಯಿಂದ ಹೊರಟ ನಾವು 23 ಕಿ.ಮೀ ಪ್ರಯಾಣಿಸಿ ಡಾಚುಲಾ ಪಾಸ್ ಎಂಬ ಪರ್ವತ ರಾಶಿಗಳ ನಡುವಿನ ಬೌದ್ಧ ದಮ್ಮ ಗುರುಗಳ ಮೊನಸ್ಟ್ರಿ ( ಸಮಾದಿ ) ಇರುವ ಸ್ಥಳದಲ್ಲಿ ಕಾರು ನಿಲ್ಲಿಸಿದೆವು. ಇಲ್ಲಿ ಹಲವಾರು ಬೌದ್ಧ ಧಮ್ಮ ಗುರುಗಳ ಸಮಾಧಿಗಳಿವೆ. ಇದರ ಪಕ್ಕದಲ್ಲಿಯೇ ಪ್ರಪಾತದಂತಹ ಕಣಿವೆಗಳಿವೆ. ಇಲ್ಲಿಂದ ನಿಂತು ನೋಡಿದರೆ ದೂರದಲ್ಲಿ ಹಿಮದ ರಾಶಿಯಿಂದ ಆವೃತವಾದ ಪರ್ವತಗಳು ಸಂಜೆ ಸೂರ್ಯನ ಬೆಳಕಿನಲ್ಲಿ ಪ್ರಜ್ವಲಿಸುತ್ತಿರುವಂತೆ ಕಾಣುತ್ತಿತ್ತು.
ತುಂಬಾ ಉದ್ದದ ಟ್ರಕ್ ಒಂದು ಬೃಹತ್ ಗಾತ್ರದ ಯಂತ್ರವನ್ನು ಸಾಗಿಸುತ್ತಿತ್ತು, ಇದರಲ್ಲಿನ ವಿಶೇಷವೆಂದರೆ ಆ ಟ್ರಕ್ ನ ಮುಂದೆ ಒಬ್ಬ ಪೊಲೀಸ್ ಬೈಕ್ ನಲ್ಲಿ ಹೋಗುತ್ತಾ ಟ್ರಕ್ ಸರಾಗವಾಗಿ ಚಲಿಸಲು ಮತ್ತು ಬೇರೆ ವಾಹನಗಳಿಗೆ ತೊಂದರೆಯಾಗಬಾರದು ಹಾಗೆ ದಾರಿಮಾಡಿಕೊಡುತ್ತಲಿದ್ದ. ಈ ದೃಶ್ಯ ಇಂದಿಗೂ ನನಗೆ ಕಣ್ಣಿಗೆ ಕಟ್ಟಿದಂತಿದೆ. ಭೂತಾನಿನ ಸಂಚಾರಿ ನಿಯಮವನ್ನು ಅದೆಷ್ಟು ಶ್ಲಾಘಿಸಿದರೂ ಸಾಲದು.ಇಲ್ಲಿ ಸುಮಾರು ಒಂದು ಘಂಟೆಗೂ ಹೆಚ್ಚು ಸಮಯ ಕಳೆದ ನಾವು ಒಂದಷ್ಟು ಫೋಟೋಗಳನ್ನು ತೆಗೆದುಕೊಂಡು ಮುಂದಿನ ಪ್ರಯಾಣ ಸುರುಮಾಡಿದೆವು.
ಪ್ರಯಾಣ ಪರ್ವತಗಳ ನಡುವೆಯೇ ಸಾಗುತ್ತಿತ್ತು, ನಾವು ಒಂದು ಪರ್ವತದಲ್ಲಿ ಸಾಗುತ್ತಾ ದೂರದಲ್ಲಿರುವ ಹಲವು ಪರ್ವತಗಳ ಇಳಿಜಾರು, ಕಣಿವೆ ಗಳ ಮದ್ಯೆ ಕಾಡಿನೊಳಗೆ ಕಾಣುತ್ತಿದ್ದ ಗ್ರಾಮಗಳ ಪುಟ್ಟ ಮನೆಗಳನ್ನು ನೋಡುವುದು ಅದ್ಭುತ. ಈ ಮೊದಲೇ ಹೇಳಿದ್ದೇನಲ್ಲ ಭೂತನಿನಲ್ಲಿ ಸಂಜೆ 5 ಘಂಟೆಗೇ ಕತ್ತಲಾಗಿಬಿಡುತ್ತದೆ. ಕಾರಿನ ಕಿಟಕಿಯಿಂದ ಸಾಕಪ್ಪಾ ಸಾಕು ಅನ್ನಿಸುವಷ್ಟು ಶೀತಗಾಳಿ ತೂರಿಬರುವುದರಿಂದ ಚಳಿ ಹೆಚ್ಚಾಗುತ್ತಿತ್ತು. ನಾವೆಲ್ಲರೂ ಸದಾ ಜಾಕೆಟ್ ಹಾಕಿಕೊಂಡೆ ಇರುತ್ತಿದ್ದೆವು ಮತ್ತು ಅಲ್ಲಿನ ಜನರೆಲ್ಲರೂ ಸದಾ ದಪ್ಪದಾದ ಜಾಕೆಟ್ ಹಾಕಿಕೊಂಡೆ ಇರುತ್ತಾರೆ. ಈ ಕತ್ತಲ ಕಾಡು, ಯಾವುದೇ ಮೊಬೈಲ್ ನೆಟ್ವರ್ಕ್ ಇಲ್ಲದ ಕಣಿವೆಯಲ್ಲಿ ನಮಗೆ ದಾರಿ ತೋರುತ್ತಿದ್ದದ್ದು ಈ ಮೊದಲೇ ಡೌನ್ಲೋಡ್ ಮಾಡಿಕೊಂಡಿದ್ದ ಗೂಗಲ್ ಮ್ಯಾಪ್. ಕತ್ತಲಾಗುತ್ತಾ ಆಗುತ್ತಾ ಚಳಿ ಹೆಚ್ಚಾಯಿತು, ಎಷ್ಟೆಂದರೆ ಕಾರಿನ ಕಿಟಕಿಗಳೆಲ್ಲಾ ಮುಚ್ಚಿ ಎ. ಸಿ . ಅನ್ನು ಹೀಟ್ ಮೂಡಿನಲ್ಲಿ ತಿರುಗಿಸಿ ಬೆಚ್ಚಗೆ ಕಾರಿನ ಹೆಡ್ ಲೈಟ್ ಬೆಳಕನ್ನು ನೋಡುತ್ತಾ ಕುಳಿತು ಫೋಬ್ಜಿಕಾ ಕಣಿವೆಯ ಹತ್ತಿರ ಹತ್ತಿರ ಬಂದೆವು. ಅಷ್ಟರಲ್ಲಾಗಲೇ ಸಮಯ ರಾತ್ರಿ 9 ಘಂಟೆಯಾಗಿತ್ತು. ಸಂಜೆ 5 ಕ್ಕೇ ಕತ್ತಲಾಗುವುದರಿಂದ ರಾತ್ರಿ 9 ಘಂಟೆಯಷ್ಟರಲ್ಲೇ ಅರ್ಧರಾತ್ರಿ ಆದಂತೆ ಭಾಸವಾಗುತ್ತಿತ್ತು.
ಮೊಬೈಲ್ ನೆಟ್ವರ್ಕ್ ಇಲ್ಲಿ ಸ್ವಲ್ಪ ಸ್ವಲ್ಪ ಸಿಗಲಾರಂಭಿಸಿತ್ತು. ಮೊಬೈಲ್ ಬಳಸುವುದರಲ್ಲಿ ನಿಸ್ಸೀಮನಾಗಿದ್ದ ಯೋಗಿ ಮೊಬೈಲ್ ಕೈಗೆತ್ತಿಕೊಂಡು ಉಳಿದುಕೊಳ್ಳಲು ರೂಮ್ ಹಾಗೂ ಊಟಕ್ಕೆಂದು ಹೋಟೆಲ್ ಸಿಗಬಹುದೇ ಎಂದು ದಿನೇಶನ ಜೊತೆಗೂಡಿ ಹುಡುಕುತ್ತಲಿದ್ದ. ಆದರೇ ಯಾವುದೇ ಮಾಹಿತಿ ಅಲ್ಪ ಸ್ವಲ್ಪ ನೆಟ್ವರ್ಕ್ ನಲ್ಲಿ ದೊರಕುತ್ತಿರಲಿಲ್ಲ.
ನನಗೆ ಈ ತಂತ್ರಜ್ಞಾನ ಅವಶ್ಯ ಆದರೆ ಅದರ ಮೇಲೆ ಅತಿಯಾಗಿ ಅವಲಂಬಿಸುವುದನ್ನು ಒಪ್ಪಿಕೊಳ್ಳಲು ಆಗುವುದಿಲ್ಲ. ಅರ್ಧರಾತ್ರಿಯಂತೆ ಕಾಣುತ್ತಿದ್ದ ಕತ್ತಲಲ್ಲಿ ಎಲ್ಲಿ ಉಳಿಯುವುದು ಎಂದು ನನ್ನೊಳಗೆ ಯೋಚನೆ ಶುರುವಾಯಿತು. ಮೊದಲೇ ಅಸಿಡಿಟಿ ಸಮಸ್ಯೆಯಿಂದ ಬಳಲುತ್ತಿದ್ದ ನನಗೆ ಊಟವಿಲ್ಲದೆ ಇರುವುದು ಅಸಾಧ್ಯ. ರಸ್ತೆಯ ಒಂದು ಪಕ್ಕಕ್ಕೆ ಸ್ವಲ್ಪ ದೂರದಲ್ಲಿ ನಮ್ಮ ಮಲೆನಾಡಿನ ಮನೆಗಳಂತೆ ಕಾಣುತ್ತಿದ್ದ ಒಂದು ಮನೆಯಲ್ಲಿ ವಿದ್ಯುತ್ ದೀಪಒಂದು ಉರಿಯುತ್ತಿತ್ತು. ಅದನ್ನ ಕಂಡ ನಾನು ಕಾರು ನಿಲ್ಲಿಸಿ ಅಲ್ಲಿ ಯಾರನ್ನಾದರೂ ಕೇಳೋಣ ಎಂದೆ. ಅದಕ್ಕೆ ದಿನೇಶ, ಯೋಗಿ, ಹೇಮಂತ ಮೂವರು ಬೇಡ ಇಲ್ಲಿ ಯಾರನ್ನು ಕೇಳುತ್ತೀರಿ ? ಏನೆಂದು, ಯಾವ ಭಾಷೆಯಲ್ಲಿ ಕೇಳುತ್ತೀರಿ ? ಎಂದರು. ಮತ್ತೆ ಇನ್ನೊಂದಷ್ಟು ದೂರ ಚಲಿಸಿದೆವು ಅಲ್ಲೊಂದು ಮನೆಯಲ್ಲಿ ವಿದ್ಯುತ್ ದೀಪ ಉರಿಯುತ್ತಿದ್ದದ್ದನ್ನು ನೋಡಿ ಪುನಃ ಕಾರು ನಿಲ್ಲಿಸಿ ಯಾರನ್ನಾದರೂ ಕೇಳೋಣ ಎಂದೆ. ಈಗಲೂ ಯಾರು ಕಾರು ನಿಲ್ಲಿಸಿ ವಿಚಾರಿಸಲು ಒಪ್ಪಲಿಲ್ಲ.

ಇನ್ನೂ ಸ್ವಲ್ಪದೂರ ಹೋದಮೇಲೆ ದೂರದಿಂದಲೇ ಮತ್ತೊಂದು ಲೈಟ್ ಕಾಣುತ್ತಿತ್ತು. ಲೈಟ್ ಬೆಳಕಿನ ಹತ್ತಿರ ಹೋಗುತ್ತಿದ್ದಂತೆ ನಾನು ಮೂತ್ರಕ್ಕೆ ಹೋಗಬೇಕು ಸ್ವಲ್ಪ ಕಾರು ನಿಲ್ಲಿಸಿ ಎಂದೆ. ಮೂತ್ರದ ಕಾರಣ ನೀಡದಿದ್ದರೆ ಇವರು ಕಾರು ನಿಲ್ಲಿಸುವುದಿಲ್ಲ ಎಂದು ಲೆಕ್ಕಾಹಾಕಿ ಹೀಗೆ ಹೇಳಿದ್ದೆ. ನನಗೆ ಯಾವಾಗಲೂ ಅನ್ನಿಸುವುದು ಮನುಷ್ಯ ಸಂಬಂಧ ಎನ್ನುವುದು ಭಾಷೆ, ಸಂಸ್ಕೃತಿ, ಗಡಿ ಇವುಗಳನ್ನ ಮೀರಿದ್ದು ಎಂದು. ಹಾಗಾಗಿ ಮೂತ್ರದ ನೆಪಹೇಳಿ ಕಾರು ನಿಲ್ಲಿಸಲು ಹೇಳಿ ಕಾರಿನಿಂದ ಕೆಳಗೆ ಇಳಿದವನಿಗೆ ಹೊಸ ಅನುಭವ ಕಾದಿತ್ತು. ಅದು ತಡೆಯಲಾಗದ ಚಳಿ. ಬೆಚ್ಚಗೆ ಹೀಟರ್ ಹಾಕಿಕೊಂಡು ಕಾರಿನಲ್ಲಿ ಕುಳಿತಿದ್ದ ನನಗೆ ಹೊರಗಿನ ಚಳಿ ನಿಜಕ್ಕೂ ಮೈ ಮರುಗಟ್ಟಿ ಹೋಗುವಷ್ಟಿದೆ ಎಂಬ ಅರಿವಾಯಿತು.
ತಕ್ಷಣ ಕಾರಿನ ಬಲಬಾಗದಲ್ಲಿದ್ದ ಲೈಟ್ ಬೆಳಕು ಕಾಣುತ್ತಿದ್ದ ಮನೆಯ ಕಡೆಗೆ ರಸ್ತೆದಾಟಿ ಹೋದೆ. ಮನೆ ರಸ್ತೆಯಿಂದ ಸ್ವಲ್ಪ ದೂರಕ್ಕೆ ಒಳಬಾಗಕ್ಕಾದಂತೆ ಥೇಟ್ ನಮ್ಮ ಮಲೆನಾಡಿನ ಮನೆಗಳಂತೆ ಸಣ್ಣ ಟ್ರೆಂಚ್ ದಾಟಿ ಹೋಗಬೇಕಿತ್ತು. ಟ್ರೆಂಚ್ ದಾಟಲು ಅದರ ಮೇಲೆ ಮರದ ಗಳಗಳು ಹಾಗು ಹಲಗೆಯನ್ನು ಜೋಡಿಸಿಡಲಾಗಿತ್ತು. ಅಲ್ಲಿಯ ಚಳಿಗೆ ಮೈ ತುಂಬಾ ಕೂದಲು ಬೆಳೆದಿದ್ದ ನಾಯಿಯೊಂದು ತಾಡಿಕೆಗಳಿಂದ ನಿರ್ಮಿಸಲಾಗಿದ್ದ ಕಾಂಪೌಂಡ್ ಒಳಗಿಂದ ಒಂದೆರಡು ಸಲ ಬೊಗಳಿ ಸುಮ್ಮನಾಯಿತು.
ರಸ್ತೆಯಲ್ಲಿ ನಿಂತು ಮನೆಯ ಒಳಗೆ ಉರಿಯುತ್ತಿದ್ದ ಲೈಟ್ ಅನ್ನು ನೋಡುತ್ತಾ ಒಳಗಿರುವವರನ್ನು ಹೇಗೆ ಕರೆಯುವುದು ಎಂದು ಯೋಚಿಸುತ್ತಿದ್ದೆ. ತಕ್ಷಣ ಕೈಲಿದ್ದ ಮೊಬೈಲ್ ಟಾರ್ಚ್ ಆನ್ ಮಾಡಿ ಲೈಟ್ ಬೆಳಕು ಕಾಣುತ್ತಿದ್ದ ಮನೆಯ ಕಿಟಕಿಯ ಕಡೆ ತಿರುಗಿಸಿ ಟಾರ್ಚ್ ಅನ್ನು ಮೇಲೆತ್ತಿ ಹಿಡಿದು ಕೈ ಯನ್ನು ಅತ್ತಿತ್ತ ಅಲುಗಾಡಿಸಿ ಹಲೋ ಹಲೋ ಎಂದು ಕೂಗಿದೆ. ಅತ್ತಲಿಂದ ಯಾರೂ ಶಬ್ದಮಾಡಲಿಲ್ಲ ಬರಲೂ ಇಲ್ಲ. ಮತ್ತೂ ಜೋರಾಗಿ ಕೂಗಿದೆ ಸ್ವಲ್ಪ ಸಮಯದ ನಂತರ ಒಳಗಿನಿಂದ ಒಬ್ಬ ಮಹಿಳೆ ಹೊರಬಂದು ಭೂತಾನಿ ಭಾಷೆಯಲ್ಲಿ ಏನೋ ಮಾತನಾಡಿದರು, ನನಗೆ ಒಂದು ಪದವೂ ಅರ್ಥವಾಗಲಿಲ್ಲ. ಇವರಿಗೆ ಹಿಂದಿ ಬರ ಬಹುದೇ ಅನಿಸಿತು ಆದರೆ ನನ್ನ ಹಿಂದಿಯೋ ಅಷ್ಟಕಷ್ಟೇ ಮರುಕ್ಷಣ ಇಲ್ಲ ಬಿಡು ಸಾಧ್ಯವಿಲ್ಲ , ದೇಶದ ಗಡಿದಾಟಿ ಭೌಗೋಳಿಕವಾಗಿ ಇಷ್ಟು ಮದ್ಯ ಬಂದಿರುವಾಗ ಹಿಂದಿ ಹೇಗೆ ಗೊತ್ತಿರಲು ಸಾದ್ಯ ? ದೇಶದ ಗಡಿಬಾಗದಲ್ಲಾದರೆ ಎರಡೂ ಕಡೆಯ ಭಾಷೆಗಳು ಒಂದಷ್ಟು ಮಟ್ಟಿಗಾದರೂ ಎರಡೂ ಗಡಿಗಳ ಆಚೀಚಿನವರಿಗೆ ತಿಳಿದಿರುತ್ತದೆ.
ಮನೆಯಿಂದ ಹೊರಗೆ ಬಂದ ಮಹಿಳೆ ಬಾಯಿಯಲ್ಲಿ ಅಡಿಕೆಯನ್ನೋ ಅಥವಾ ಯಾವುದೋ ತಂಬಾಕನ್ನೋ ಆಗಿಯುತ್ತಿರುವಂತೆ ಕಾಣುತ್ತಿದ್ದರು. ನಾನು ನನಗೆ ಗೊತ್ತಿದ್ದ ಕೆಲವೇ ಹಿಂದಿ ಪದಗಳನ್ನು ಬಳಸಿ ಸರ್ಕಸ್ ಮಾಡುತ್ತಾ ಮನೆಯ ಮಾಲೀಕರನ್ನು ಕರೆಯಿರಿ ಎನ್ನುತ್ತಿದ್ದೆ. ಆಕೆಗೆ ಅದೇನು ಅರ್ಥವಾಯಿತೋ ನಾನಂತು ಕಾಣೆ ಮನೆಯ ಒಳಗೆ ಹೋಗಿ ಸುಮಾರು ಐವತ್ತರ ವಯಸ್ಸಿನ ಆಜುಬಾಜಿನ ಗಂಡಸೊಬ್ಬನೊಂದಿಗೆ ಹೊರಗೆ ಬಂದಳು. ಈಗ ಮತ್ತೆ ನನ್ನ ಕೆಲವೇ ಹಿಂದಿ ಪದಗಳೊಂದಿಗೆ ಆಂಗಿಕ ಭಾಷೆಯ ಸರ್ಕಸ್ಸು ಶುರುವಾಯಿತು. ಆಮೇಲೆ ಆತನಿಗೂ ನನ್ನಂತೆಯೇ ಒಂದೊಂದೇ ಹಿಂದಿ ಪದಗಳು ಬರುತ್ತದೆ ಎಂದು ಅರಿವಾಯಿತು. ಎಲ್ಲಿಯವರು ಎಂದನಾತ, ನಾನೆಂದೆ ಇಂಡಿಯಾ. ಅದಕ್ಕವ ಇಂಡಿಯಾದಲ್ಲಿ ಎಲ್ಲಿ ? ನಿಮ್ಮಂತ ಮುಖ ಲಕ್ಷಣವಿರುವವರನ್ನು ನಾನು ಇಂಡಿಯಾದಲ್ಲಿ ನೋಡಿಲ್ಲವಲ್ಲ, ನಾನು ಅಸ್ಸಾಂ, ಬೆಂಗಾಳಿ , ನಾಗಾಲ್ಯಾಂಡ್ ಜನರನ್ನು ನೋಡಿದ್ದೇನೆ ಆದರೆ ನಿಮ್ಮಂತೆ ಇರುವವರನ್ನು ನೋಡಿಲ್ಲ, ನೀವು ಇಂಡಿಯಾದ ಯಾವ ಭಾಗದವರು ಎಂದ. ನನ್ನನು ಆಗಂತುಕಯೆಂದುಕೊಂಡುಬಿಟ್ಟಾನು ಆತ, ಆಮೇಲೆ ಇಲ್ಲ ಸಲ್ಲದ ಇನ್ನೇನಾದರೂ ಆದೀತು ಎಂಬ ಭಯ ಒಳಗೊಳಗೇ ಕಾಡಹತ್ತಿತು. ಮತ್ತೆ ನಾನು ನನ್ನ ಅಂಗೀಕ ಭಾಷೆಯ ಜೊತೆ ಅದ್ಬುತ ಹಿಂದಿ ಬಳಸಿ ಸೌತ್ ಇಂಡಿಯಾ…. ! ಸೌತ್ ಇಂಡಿಯಾ…! ಎನ್ನುತ್ತಾ ಬೆಂಗಳೂರ್… ಬೆಂಗಳೂರ್…! ಎಂದೆ.
ಅಷ್ಟರಲ್ಲಿ ಚಳಿ ಇನ್ನೂ ಹೆಚ್ಚಾದಂತೆ ಬಾಸವಾಗುತ್ತಿತ್ತು, ನನ್ನ ಕೈಗಳೆರಡನ್ನು ಒಂದರೊಳಗೊಂದು ಕಟ್ಟಿಕೊಂಡು ಶಾಲಾ ಮಕ್ಕಳಂತೆ ನಡುಗುತ್ತಾ ನಿಂತು ನಿಮ್ಮ ಮನೆಯ ಹೊರಗೆ ಮುಂಭಾಗದಲ್ಲಿರುವ ಸ್ಥಳದಲ್ಲಿ ಸ್ವಲ್ಪ ಸ್ಥಳವನ್ನು ಕೊಡಿ ,ನಮ್ಮ ಬಳಿ ಟೆಂಟ್ ಇದೆ ಹಾಕಿಕೊಂಡು ಮಲಗಿ ಬೆಳಿಗ್ಗೆ ಬೇಗನೆ ಹೊರಡುತ್ತೇವೆ ಎಂದೆ. ಹೇಗಾದರೂ ಮಾಡಿ ಜಾಗ ಗಿಟ್ಟಿಸಿಕೊಳ್ಳಬೇಕೆಂದು ಸ್ವಲ್ಪ ಹೆಚ್ಚೇ ನಡುಗತೊಡಗಿದೆ. ಮನೆಯ ಒಡೆಯನೆಂದ ಹೊರಗೆ ತುಂಬಾ ಚಳಿಯಾಗುತ್ತದೆ ಎನ್ನುವ ಅರ್ಥ ಬರುವಂತೆ ಆಂಗಿಕ ಭಾಷೆಯಲ್ಲಿ ಆಕಾಶ ತೋರಿಸುತ್ತಾ ಹಿಂದಿ ಪದಗಳನ್ನು ಬಳಸುತ್ತಾ ಹೇಳಿದ. ನಾನೆಂದೆ ನಮ್ಮ ಬಳಿ ಚಳಿಯಲ್ಲಿ ಮಲಗಲು ಸ್ಲೀಪಿಂಗ್ ಬ್ಯಾಗ್ ಇದೆ ಪರವಾಗಿಲ್ಲ ನಾವು ನಾಲ್ಕು ಜನರಿದ್ದೇವೆ ಎಂದೆ.
ಅಲ್ಲಿಯ ಉಷ್ಣಾಂಶ ಎಷ್ಟಿರಬಹುದೆಂದು ಒಮ್ಮೆ ಮೊಬೈಲ್ ನೋಡಿದೆ 0℃ ತೋರಿಸುತ್ತಿತ್ತು. ನಾನು ಚಳಿಯಲ್ಲಿ ನಡುಗುತ್ತಿದ್ದದ್ದು ನೋಡಿ ಏನೋ ದೊಡ್ಡ ಮನಸ್ಸುಮಾಡಿ ಮನೆಯ ಒಳಗೆ ಬರಲು ಕರೆದ. ಆತ ಕರೆದದ್ದೇ ತದ ಈ ಅವಕಾಶಕ್ಕಾಗಿ ಕಾಯುತ್ತಿದ್ದ ನಾನು ಒಮ್ಮೆ ನನ್ನ ಹಿಂಬದಿಯಲ್ಲಿ ಸ್ವಲ್ಪದೂರ ರಸ್ತೆಯಲ್ಲಿ ನಿಂತಿದ್ದ ಕಾರಿನಲ್ಲಿ ಕುಳಿತಿದ್ದವರೆಡೆಗೆ ತಿರುಗಿ ನೋಡುತ್ತಾ ಹಾಗೆಯೇ ಮನೆಯ ದಪ್ಪ ಗಾತ್ರದ ಹೊಸಿಲನ್ನು ದಾಟಿ ಮನೆಯ ಮದ್ಯ ಹಜಾರಾದಲ್ಲಿ ಕುಳಿತಿದ್ದವರೆಡೆಗೆ ನೋಡುತ್ತಾ ಒಳ ಹೋದೆ.
ಒಳಗೆ ಅವರು ಕುಳಿತಿದ್ದ ಸ್ಥಳ ಒಂದು ಬೆಂಕಿ ಕಾಯಿಸುವ ಕಬ್ಬಿಣದ ಒಲೆ ಅದು ಹಜಾರಾದ ಮಧ್ಯದಲ್ಲಿ, ಅದರ ಮೇಲೆ ಒಂದು ದೊಡ್ಡ ಬೊಸಿ ಯಂತಹ ಪಾತ್ರೆ ಅದರಲ್ಲಿ ಸದಾ ನೀರು ಕಾಯುತ್ತಿರುತ್ತದೆ, ಸೌದೆಯಿಂದ ಬೆಂಕಿ ಹಾಕಲಾಗುತ್ತದೆ, ಹೊಗೆ ಹೊರ ಹೋಗಲು ಕೊಳವೆಯೊಂದನ್ನು ಒಲೆಯ ಮೇಲುಬಾಗಕ್ಕೆ ಸೇರಿಸಿ ಅದರ ಇನ್ನೊಂದು ತುದಿಯನ್ನು ಮನೆಯಿಂದ ಹೊರ ಹೋಗುವಂತೆ ವ್ಯವಸ್ಥೆ ಮಾಡಲಾಗಿತ್ತು. ಮನೆಯ ಮಧ್ಯದಲ್ಲಿರುವ ಈ ಒಲೆ ಬರೀ ಒಲೆ ಮಾತ್ರವಲ್ಲ ರಾತ್ರಿಯಾಗುತ್ತಿದ್ದಂತೆ ಅದರ ಸುತ್ತಲೂ ಹಾಸಿಗೆಗಳನ್ನು ಹಾಕಿ ಅದರಮೇಲೆ ಮನೆ ಮಂದಿಯೆಲ್ಲರೂ ಕುಳಿತುಕೊಳ್ಳುತ್ತಾರೆ. ನಾನು ಮನೆಯ ಒಳಗೆ ಹೋದಾಗ ಮನೆಯವರೆಲ್ಲರೂ ಹೀಗೆಯೇ ಕುಳಿತಿದ್ದರು.
ನಾನು ಒಳಗೆ ಹೋಗುವಾಗ ನನ್ನನ್ನು ಕಂಡವರೆ ಆಶ್ಚರ್ಯದಿಂದ ಎಲ್ಲರೂ ಕಣ್ಣುಗಳ ಅರಳಿಕೊಂಡು ನನ್ನನ್ನೇ ನೋಡುತ್ತಿದ್ದರು. ಅವರೆಲ್ಲರಿಗೂ ನಾನು ವಿದೇಶಿಯನಂತೆ ಕಂಡಿರಬೇಕು, ಏಕೆಂದರೆ ನಮ್ಮಂತಹ ದೇಹ, ಮುಖ ರಚನೆಯುಳ್ಳವರನ್ನು ಅವರು ಎಂದಿಗೂ ನೋಡಿರಲಿಲ್ಲ ಎಂಬುದು ಆ ನಂತರದ ಸಂಭಾಷಣೆಯಲ್ಲಿ ತಿಳಿಯಿತು. ಸರಿ ಮನೆಯ ಒಳಗೆ ಹೋಗುತ್ತಾ ನಾನ್ನ ಎರಡು ಕೈಗಳಿಂದ ಅವರಿಗೆ ಹಾಯ್ ಹೇಳುತ್ತಾ.. ನಗುತ್ತಾ ಒಳಗೆ ಹೋದೆ, ಕಾರಣ ಅವರು ನನ್ನ ಕಂಡು ಗಾಬರಿಯಾಗದಿರಲೆಂದು ಏಕೆಂದರೆ ಮನೆಯ ಒಳಗೆ ಇದ್ದ ನಾಲ್ಕೈದು ಮಂದಿಯೂ ಮಹಿಳೆಯರೇ ಆಗಿದ್ದರು. ಇಷ್ಟನ್ನೂ ಕಷ್ಟಪಟ್ಟು ಸಂಬಾಳಿಸಿದ್ದ ನನಗೆ ಮನೆಯೊಳಗಿನ ಚಳಿ ಕಾಯಿಸಿಕೊಳ್ಳುತ್ತಿದ್ದ ಒಲೆ ಯನ್ನು ನೋಡಿದ್ದೆ ತಡ ಮತ್ತೇನನ್ನೂ ಯೋಚಿಸದೆ ನೇರವಾಗಿ ಬೆಂಕಿಯ ಹತ್ತಿರ ಹೋಗಿ ಕುಳಿತುಬಿಟ್ಟೆ.
ಆಗ ಮನೆಯವರು ಮೊದಲು ಕೇಳಿದ್ದು ಬಿಸಿ ಬಿಸಿ ಚಹಾ ಕೊಡಿಯುತ್ತೀರಾ ಎಂದು. ಬಹುಷಹ ಚಳಿಯಲ್ಲಿ ನನ್ನ ದೇಹ ನಡುಗುತ್ತಿದ್ದದ್ದು ಕಂಡು ಹಾಗೆ ಕೇಳಿರಬೇಕು. ತಕ್ಷಣ ನನಗೆ ಹೊಳೆದದ್ದು ಕಾರಿನಲ್ಲಿ ಕುಳಿತಿದ್ದ ನನ್ನ ಮೂವರು ಸ್ನೇಹಿತರು. ಇಂತಹ ತರಾಗುಟ್ಟುವ ಚಳಿಯಲ್ಲಿ ಅವರನ್ನು ಬಿಟ್ಟು ಒಬ್ಬನೇ ಚಹಾ ಕುಡಿಯುವುದಾದರು ಹೇಗೆ ಅನ್ನಿಸಿ ಸ್ವಲ್ಪ ಮುಜುಗರಪಡುತ್ತಲೇ ಕೇಳಿದೆ, ಹೊರಗೆ ಕಾರಿನಲ್ಲಿ ನನ್ನ ಮೂವರು ಸ್ನೇಹಿತರು ಕುಳಿತಿದ್ದಾರೆ ಅಭ್ಯಂತರವಿಲ್ಲದಿದ್ದರೆ ಅವರಿಗೂ ಚಹಾ ಸಿಗಬಹುದೇ…? ಅವರನ್ನೂ ಒಳಗೆ ಕರೆದು ಬೆಂಕಿಯ ಸುತ್ತ ಕೂರಿಸುವ ಯೋಜನೆ ನನ್ನದಾಗಿತ್ತು. ಇಷ್ಟೂ ಸಂಬಾಷಣೆ ನಡೆದಿದ್ದು ಇಂಗ್ಲಿಷ್ ನಲ್ಲಿ. ಹೇಗೆಂದರೆ ಮನೆಯ ಒಳಗಿದ್ದ ಮಹಿಳೆಯರಲ್ಲಿ ಒಬ್ಬಳು ಯುವತಿಗೆ ಇಂಗ್ಲಿಷ್ ಬರುತ್ತಿತ್ತು. ಆಕೆಯ ಹೆಸರು ಸೋನಂ ಯಾಂಗ್ಚು. ಇಲ್ಲಿಂದ ನನ್ನ ಮತ್ತು ಅವರ ಸಂವಹನ ಸುಲಭವಾಯಿತು.
ಮನೆಯ ಇತರರ ಸದಸ್ಯರಿಗೆ ಸೋನಂ ನಾನು ಹೇಳಿದ್ದನ್ನು ಅವರ ಭಾಷೆಗೆ ಅನುವಾದಿಸಿ ಹೇಳಿದಳು, ಅದಕ್ಕೆ ಮನೆಯ ಒಡತಿ, ಒಡೆಯ ಎಲ್ಲರೂ ಒಪ್ಪಿಗೆನೀಡಿ ನನ್ನ ಸ್ನೇಹಿತರನ್ನು ಕರೆಯಲು ಹೇಳಿದರು. ಇಷ್ಟು ಹೇಳಿದ್ದೇ ತಡ ಹೊರಗೆಬಂದು ಕಾರಿನಲ್ಲಿದ್ದ ದಿನೇಶ, ಯೋಗಿ, ಹೇಮಂತ ಮೂವರನ್ನು ಕರೆಯಲು ಕಾರಿನೆಡೆ ನೋಡಿದೆ. ಮೂವರೂ ನನ್ನ ಬರುವಿಕೆಗಾಗಿಯೇ ಕಾದಿದ್ದವರಂತೆ ನನ್ನ ಕೈ ಸನ್ನೆಯನ್ನು ನೋಡಿ ಕಾರಿನಿಂದ ಹೊರಬಂದು, ಏನು ? ನಾವು ಟೆಂಟ್ ಹಾಕಲು ಒಪ್ಪಿಕೊಂಡರೇ ಎಂದರು. ಆಗ ನಾನು ಯಾರೂ ಮಾತನಾಡಬೇಡಿ ಸುಮ್ಮನೆ ಒಳಗೆಬನ್ನಿ ಹೇಗೋ ಸಂಬಾಳಸುತ್ತಿದ್ದೇನೆ ಎಂದು ಅವರೆಲ್ಲರನ್ನೂ ಒಳಗೆ ಕರೆದೊದೆ.
ಇವರುಗಳು ಸಹ ಬೆಂಕಿ ಕಂಡೊಡನೆ ನನ್ನಂತೆಯೇ ಬೇಗ ಬೇಗ ಅದರ ಪಕ್ಕದಲ್ಲಿ ಜಾಗ ಹಿಡಿಯಲು ಪ್ರಯತ್ನಿಸುತ್ತಿದ್ದರು ಅಷ್ಟರಲ್ಲಿ ಮನೆಯವರು ಬೆಂಕಿಯಪಕ್ಕ ಕುಳಿತುಕೊಳ್ಳಲು ಅನುಕೂಲವಾಗುವಂತೆ ನಮಗೂ ಒಂದು ಹಾಸಿಗೆ ಹಾಕಿಕೊಟ್ಟರು. ಎಲ್ಲರೂ ಕುಳಿತು ಸ್ವಲ್ಪಹೊತ್ತು ನಮ್ಮಗಳ ಪರಿಚಯ ಮಾಡಿಕೊಂಡೆವು. ಅವರು ಮೊದಲು ನಮ್ಮನ್ನೆಲ್ಲಾ ಕೇಳಿದ್ದು ವಿವಾಹಿತರೇ ನೀವು ಎಂದು. ನಮ್ಮೆಲ್ಲರ ಉತ್ತರ ಹೌದು ಜೊತೆಗೆ ಮಕ್ಕಳೂ ಇದ್ದಾರೆ ಆದರೆ ನನ್ನನ್ನು ತೋರಿಸಿ ಈತನನ್ನು ಬಿಟ್ಟು ಎಂದು, ಮುಂದುವರಿದು ಈತನೂ ವಿವಾಹಿತ ಕೇವಲ ಒಂದು ತಿಂಗಳಿಂದಷ್ಟೇ ಎಂದಾಗ ಮನೆಯವರೆಲ್ಲಾ ನಕ್ಕರು.
ಅಷ್ಟರಲ್ಲಿ ಚಹಾ ತಯಾರಾಯಿತು ಎಲ್ಲರೂ ತರಗುಟ್ಟುವ ಚಳಿಯಲ್ಲಿ ಬೆಂಕಿಯಪಕ್ಕ ಹಾಸಿಗೆಯಲ್ಲಿ ಕುಳಿತು ಹೀರಿದ್ದೂ ಆಯಿತು. ಇನ್ನು ನನ್ನ ತಲೆಯಲ್ಲಿ ಊಟದ ಚಿಂತೆ ಶುರುವಾಯಿತು. ಮೊದಲೇ ಹೇಳಿದಂತೆ ನನಗೆ ಅಸಿಡಿಟಿ ಚಿಂತೆ. ಸರಿ ನಿಮ್ಮದೆಲ್ಲಾ ಊಟವಾಯಿತೆ ಎಂದೇ ಅವರು ಆಯಿತೆಂದರು, ಹತ್ತಿರ ಇಲ್ಲಿ ಎಲ್ಲಿಯಾದರೂ ಊಟ ಸಿಗುತ್ತದೆಯೇ ಎಂದೇ. ಅದಕ್ಕವರು ಗಡಿಯಾರನೋಡಿ ತಡವಾಗಿದೆ ಇನ್ನು ಸಿಗುವುದಿಲ್ಲ ಎನ್ನುತ್ತಾ ಕೇಳಿದರು ಏನು ತಿನ್ನುತ್ತೀರಿ ? ವೆಜ್ ಆರ್ ನಾನ್ ವೆಜ್ ಎಂದರು.
ನಾನೂ ಎಲ್ಲಕ್ಕೂ ಸೈ, ಹಾಗಾಗಿ ಯಾವುದಾದರೂ ಸರಿ ಎಂದೆ. ಆಗವರು ಪೋರ್ಕ್ ತಿನ್ನುವಿರಾ ಎಂದರು ನಾನು ತಕ್ಷಣ ಆಗಬಹುದೆಂದೆ. ಆಗ ಇತರ ಮೂವರು ಹೇ.. ಬೇಡ ಬೇಡ ಎಂದು ರಾಗ ಶುರು ಮಾಡಿದರು. ನಂತರ ಮನೆಯವರು ಬೀಫ್ ತಿನ್ನುವಿರಾ ಎಂದರು. ನಾನು ಅದಕ್ಕೂ ಹೂ ತಿನ್ನುತ್ತೇನೆ ಎಂದದ್ದೇ ಮತ್ತೆ ರಾಗ ಅಯ್ಯೋ ಬೇಡ ಬೇಡ ಅದೆಲ್ಲಾ…. ಇತರ ಮೂವರದು ಒಂದೇ ಕತೆಯಾಯಿತು. ನಂತರ ಅವರು ಅನ್ನ ಮಾಡಿ ಅದರ ಜೊತೆಗೆ ನೀರಿನಲ್ಲಿ ಬೇಯಿಸಿದ್ದ ಆಲೂಗೆಡ್ಡೆ ಜೊತೆಗೆ ಸ್ವಲ್ಪ ಉಪ್ಪು ಮತ್ತು ಹಸಿರು ಮೆಣಸಿನಕಾಯಿ ಇಷ್ಟನ್ನೂ ಒಂದೊಂದು ತಟ್ಟೆಯಲ್ಲಿ ಹಾಕಿ ಎಲ್ಲರಿಗೂ ಕೊಟ್ಟರು. ನಾವೆಲ್ಲರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ಮನೆಯವರನ್ನು ಕೇಳಿಕೊಂಡು ಆಲೂಗೆಡ್ಡೆಯನ್ನು ಅನ್ನದೊಂದಿಗೆ ಚಿವುಕಿ ಕಲಸಿ, ಉಪ್ಪು ಮತ್ತು ಮೆಣಸಿನಕಾಯಿ ನೆಂಚಿಕೊಂಡು ತಿಂದೆವು. ಅಷ್ಟರಲ್ಲಿ ಹೊರಹೋಗಿದ್ದ ಮನೆಯ ಇತರೆ ಸದಸ್ಯರು ಒಬ್ಬೊಬ್ಬರಾಗಿ ಬಂದು ನಮ್ಮನ್ನು ಆಶ್ಚರ್ಯದಿಂದ ನೋಡುತ್ತಾ ಸೇರಿಕೊಂಡರು. ಅವರ ಮನೆ ಸಂಪೂರ್ಣ ಮರದಿಂದ ಮಾಡಿದ್ದ ಡ್ಯೂಪ್ಲೆಕ್ಸ್ ಮನೆಯಾಗಿತ್ತು.
ಊಟ ಮುಗಿದ ನಂತರ ಮನೆಯ ಒಡಯ ಮೆಟ್ಟಿಲನ್ನು ತೋರಿಸುತ್ತಾ ಇವರು ಹೊರಗೆ ಮಲಗುವುದುಬೇಡ, ಮೇಲಿನ ಮಾಳಿಗೆಯ ಕೊನೆಯಲ್ಲಿ ಮಲಗಲಿಯೆಂದದ್ದನ್ನು ಸೋನಂ ನಮಗೆ ಇಂಗ್ಲೀಷಿನಲ್ಲಿ ವಿವರಿಸಿದಳು. ಆಗ ನಾನು ಮತ್ತೆ ಶುರುಮಾಡಿದೆ ದಯಮಾಡಿ ಚಳಿಯನ್ನು ತಡೆಯಲಾಗುತ್ತಿಲ್ಲ ಹಾಗಾಗಿ ಇಲ್ಲೇ ಈ ಬೆಂಕಿಯ ಪಕ್ಕದಲ್ಲೇ ಮಲಗುತ್ತೇನೆ ಅಂತ. ಆಗ ಮನೆಯೊಡೆಯನೆಂದ ಇದು ಅರ್ಧರಾತ್ರಿಯಲ್ಲಿ ಕೆಟ್ಟುಹೋಗುತ್ತದೆ. ನೀವು ಮೇಲೆ ಕೋಣೆಯಲ್ಲಿ ಮಲಗಿ ಅಲ್ಲಿ ಚಳಿಯಾಗುವುದಿಲ್ಲವೆಂದರು. ನಾನು ಮತ್ತೆ ಅವರನ್ನು ಬೆಂಕಿಯಪಕ್ಕದಲ್ಲೇ ಮಲಗಲು ಅನುಮತಿಸುವಂತೆ ಕೇಳಿ, ಬೆಳಿಗ್ಗೆ 6 ಕ್ಕೇ ಎದ್ದು ಹೊರಡುತ್ತೇವೆ ಎಂದೆ. ಕೊನೆಗೆ ಮನೆಯವರೆಲ್ಲಾ ಸರಿ ಎಂದು ಒಪ್ಪಿ ಅವರುಗಳೇ ಮೇಲಿನ ಮಾಳಿಗೆಯ ಕೋಣೆಗೆ ಹೋದರು.
ಒಲೆಯ ಬೆಂಕಿಯಪಕ್ಕ ಎರಡು ಬದಿಗೂ ಎರಡೆರಡು ಹಾಸಿಗೆ ಸಿದ್ಧಪಡಿಸಿಕೊಟ್ಟರು ನಾಲ್ಕೂ ಜನಕ್ಕೂ. ನಾನಂತು ಹ್ಯಾಂಡ್ ಗ್ಲೋಸ್ಸ್, ಜಾಕೆಟ್, ಅದರೊಳಗೆ ಟೀ ಶರ್ಟ್, ಅದರೊಳಗೆ ಥರ್ಮಲ್ಸ್, ತಲೆಗೆ ಮಂಕಿ ಟೋಪಿ, ಕಾಲಿಗೆ ಕಾಲುಚೀಲ ಹಾಕಿದ್ದು, ಮೇಲೆ ಒಂದು ಹೊದಿಕೆ ಹೊದ್ದಿದ್ದರೂ ಚಳಿ ತಡೆಯಲಾಗದೆ ಥರ ಥರ ನಡಗುತ್ತಿದ್ದೆ. ಅದನ್ನ ಕಂಡ ಸೋನಂ ಕೊಣಿಯೊಳಗಿಂದ ಮತ್ತೊಂದು ದಪ್ಪದಾದ ಉಣ್ಣೆಯ ಹೊದಿಕೆ ತಂದು ನನ್ನ ಮೇಲೆ ಹೊದಿಸಿದಳು. ಬೆಂಕಿಯಪಕ್ಕ ಹೊದಿಕೆಯೊಳಗೆ ಬೆಚ್ಚಗೆ ನಿದ್ದೆಗೆ ಜಾರಿದೆ. ಬಹುಶಃ ನನ್ನ ಇತರ ಮೂವರು ಸಹ ಪ್ರಯಾಣಿಕ ಸ್ನೇಹಿತರೂ ನಿದ್ದೆಯೊಳಗೆ ಮುಳುಗಿದರು.
ಮುಂದುವರೆಯುವುದು……..




