ಚುನಾವಣಾ ಪ್ರಚಾರದಲ್ಲಿ ಕ್ಷೇತ್ರದ ಜನರ ಭಾವನೆಗಳಿಂದ ಗೆಲುವು ನಿಶ್ಚಿತ ಎಂದು ಗೋಚರಿಸಿತು. ಆದರೇ ನನ್ನ ನಿರೀಕ್ಷೆಗಿಂತಲೂ ಹೆಚ್ಚು ಮತವನ್ನು ನೀಡಿ ಗೆಲ್ಲಿಸಿರುವುದು ನನ್ನ ಕರ್ತವ್ಯವನ್ನು ಮತ್ತಷ್ಟು ಹೆಚ್ಚು ಮಾಡಿದೆ. ಆದ್ದರಿಂದ ಮತದಾರರ ಭರವಸೆಗಳನ್ನು ಹುಸಿಗೊಳಿಸದೇ ಕ್ಷೇತ್ರವನ್ನು ಸಮಗ್ರವಾಗಿ ಅಭಿವೃದ್ದಿಪಡಿಸಿ ಜನರ ಋಣ ತೀರಿಸುತ್ತೇನೆಂದು ಶಾಸಕ ಪಿ.ಎಂ ನರೇಂದ್ರಸ್ವಾಮಿ ತಿಳಿಸಿದರು.
ಮಳವಳ್ಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚುನಾವಣಾ ಪ್ರಚಾರದಲ್ಲಿ ತಾಲ್ಲೂಕಿನ ಅಧಿಕಾರಿಗಳ ಬಗ್ಗೆ ಆರೋಪ ಮಾಡಲಾಗಿತ್ತು. ಅಂತಹ ಅಧಿಕಾರಿಗಳು ತಿದ್ದಿಕೊಳ್ಳಬೇಕು, ಹಿಂದೆ ಯಾವ ರೀತಿ ಇದ್ದಿರೋ ಗೊತ್ತಿಲ್ಲ, ಆದರೇ ಒಂದು ವಾರದೊಳಗೆ ಎಲ್ಲವನ್ನು ಸರಿಪಡಿಸಿಕೊಂಡು ತಮ್ಮ ಕೆಲಸದಲ್ಲಿ ಬದಲಾವಣೆ ಮಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗಂತೆ ಕೆಲಸ ನಿರ್ವಹಿಸಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನನ್ನ ಅಧಿಕಾರದ ಅವಧಿಯಲ್ಲಿ ದರ್ಪ ದೌರ್ಜನ್ಯಕ್ಕೆ ಕ್ಷೇತ್ರದಲ್ಲಿ ಅವಕಾಶ ಮಾಡಿಕೊಡುವುದಿಲ್ಲ, ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಅಧಿಕಾರಿಗಳು ಕೆಲಸ ನಿರ್ವಹಿಸಬೇಕು, ಜನರ ನಿರೀಕ್ಷೆಯಂತೆ ಅಧಿಕಾರಿಗಳು ನಡೆದುಕೊಳ್ಳದಿದ್ದರೇ ಪರಿಣಾಮವನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕೊಟ್ಟಿದ್ದ ಗ್ಯಾರಂಟಿಗಳನ್ನು ನೀಡಲು ಈಗಾಗಲೇ ಅದೇಶ ಮಾಡಲಾಗಿದೆ, ಎಲ್ಲರಂತೆ ನನಗೂ ಸಚಿವನಾಗಬೇಕೆಂಬ ಆಸೆ ಇದೆ. ಪಕ್ಷದ ವರಿಷ್ಠರು ಸಮುದಾಯ ಹಾಗೂ ಪ್ರಾದೇಶಿಕ ಅನುಸಾರವಾಗಿ ಸಚಿವ ಸ್ಥಾನವನ್ನು ಹಂಚಿಕೆ ಮಾಡಲಾಗುತ್ತಿದೆ, ನನಗೂ ಸಚಿವ ಸ್ಥಾನ ಸಿಗುತ್ತದೆ ಎಂಬ ನಂಬಿಕೆ ಇದೆ, ನನಗೆ ಸಚಿವ ಸ್ಥಾನ ಸಿಗದಿದ್ದರೂ ಕೂಡ ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ನಿರ್ವಹಿಸಿ ಮುಂದಿನ ಲೋಕಸಭಾ ಚುನಾವಣೆಗಾಗಿ ಪಕ್ಷ ಸಂಘಟನೆಯಲ್ಲಿ ತೊಡಗುತ್ತೇನೆಂದು ಹೇಳಿದರು.
ನೆನೆಗುದಿಗೆ ಬಿದ್ದಿರುವ ಅಪೂರ್ಣ ಕಾಮಗಾರಿಗಳನ್ನು ಪೂರ್ಣಗೊಳಿಸುವ ಜವಾಬ್ದಾರಿ ನನ್ನಮೇಲೆ ಇದೆ, ಇದರ ಜೊತೆಗೆ ಹೊಸ ಯೋಜನೆಗಳನ್ನು ತರಬೇಕಿದೆ ಜನಪಯೋಗಿ ಕೆಲಸಗಳಿಗೆ ಮೊದಲ ಆದ್ಯತೆ ನೀಡಿದ ನಂತರ ನೆನಗುದಿಗೆ ಬಿದ್ದಿರುವ ಕಾಮಗಾರಿಗಳನ್ನು ಅಂತಿಮಗೊಳಿಸುವುದರ ಜೊತೆಗೆ ತಾಲ್ಲೂಕನ್ನು ಸಮಗ್ರವಾಗಿ ಅಭಿವೃದ್ದಿ ಪಡಿಸಲಾಗುವುದು ಎಂದರು.
ಪೂರಿಗಾಲಿ ಹನಿ ನೀರಾವರಿ ಯೋಜನೆ ಕಾಮಗಾರಿ ಯಾವ ಹಂತದಲ್ಲಿದೆ ಎನ್ನುವುದನ್ನು ಅಧಿಕಾರಿಗಳಿಂದ ಮಾಹಿತಿ ಪಡೆದು ಪೂರ್ಣಗೊಳಿಸಲು ಪ್ರಯತ್ನಿಸಲಾಗುವುದು, ಬಿ.ಜಿ. ಪುರ ಹೋಬಳಿಯ ಜನರಿಗೆ ಪೂರಿಗಾಲಿ ಹನಿ ನೀರಾವರಿ ಯೋಜನೆ ಬಗ್ಗೆ ಮಾಹಿತಿಯೇ ತಿಳಿದಿಲ್ಲ, ರೈತರಿಗೆ ಯೋಜನೆ ಬಗ್ಗೆ ತಿಳಿಸಲು ಪ್ರತಿ ಗ್ರಾಮದಲ್ಲಿಯೂ ಸಭೆ ನಡೆಸಿ ರೈತರಿಗೆ ಅರಿವು ಮೂಡಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಂದರ್ರಾಜು, ದೇವರಾಜು, ಎಪಿಎಂಸಿ ಮಾಜಿ ಅಧ್ಯಕ್ಷ ಅಂಬರೀಷ್, ಟಿಎಪಿಸಿಎಂಎಸ್ ಅಧ್ಯಕ್ಷ ದ್ಯಾಪೇಗೌಡ, ತಾ.ಪಂ. ಮಾಜಿ ಅಧ್ಯಕ್ಷ ನಾಗೇಶ್, ಪುರಸಭೆ ಸದಸ್ಯ ಶಿವಕುಮಾರ್, ಕೆಪಿಸಿಸಿ ಸದಸ್ಯ ಪುಟ್ಟಸ್ವಾಮಿ, ನಂಜುಂಡಸ್ವಾಮಿ, ಮಲ್ಲಣ್ಣ ಸೇರಿದಂತೆ ಇತರರು ಇದ್ದರು.




