ಮೈಷುಗರ್ ಪ್ರೌಢಶಾಲೆ ಹಾಗೂ ಸಮುದಾಯ ಭವನಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡುವುದನ್ನು ಜೆಡಿಎಸ್ ಮತ್ತು ಬಿಜೆಪಿಯ ಕೆಲ ಮುಖಂಡರು ವಿರೋಧಿಸಿ ವಿನಃಕಾರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಸಿ.ಎಂ.ದ್ಯಾವಪ್ಪ ಆರೋಪಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಷುಗರ್ ಶಾಲೆ ಮತ್ತು ಸಮುದಾಯಭವನಗಳಲ್ಲಿ ನೌಕರರ ಕೊರತೆಯಿಂದಾಗಿ ಹಾಗೂ ಚೆನ್ನಾಗಿ ನಡೆಸಲೆಂದು ರೈತರಿಗೆ ಅನುಕೂಲವಾಗಲೆಂದು ಗುತ್ತಿಗೆ ನೀಡಲು ರೈತರ ಕ್ಷೇಮಾಭಿವೃದ್ಧಿ ಟ್ರಸ್ಟ್‌ನ ಟ್ರಸ್ಟಿಗಳು ಶಿಕ್ಷಣ ತಜ್ಞರೊಂದಿಗೆ ಚರ್ಚಿಸಿ ಸದರಿ ಕ್ರಮಕ್ಕೆ ಮುಂದಾಗಿದ್ದಾರೆ ಎಂದರು.

ರೈತರ ಅಭಿವೃದ್ಧಿ ಇಷ್ಟವಿಲ್ಲದ ಜೆಡಿಎಸ್ ಮತ್ತು ಬಿಜೆಪಿ ಪಕ್ಷದವರು ಪಾಂಡವಪುರದ ಪಿಎಸ್‌ಎಸ್‌ಕೆ ಸಕ್ಕರೆ ಕಾರ್ಖಾನೆಯನ್ನು 40 ವರ್ಷಗಳಿಗೆ ಗುತ್ತಿಗೆಗೆ ನೀಡಿದ್ದಾರೆ. ಮೈಷುಗರ್ ಸಕ್ಕರೆ ಕಾರ್ಖಾನೆಯನ್ನು ಖಾಸಗಿಯವರಿಗೆ ನೀಡಲು ಯೋಜನೆ ರೂಪಿಸಿದ್ದರು. ಇವರು ಮೈಷುಗರ್ ಪ್ರೌಢಶಾಲೆಯ ಬಗ್ಗೆ ಮಾತನಾಡುವ ಅರ್ಹತೆ ಕಳೆದುಕೊಂಡಿದ್ದಾರೆಂದು ಟೀಕಿಸಿದರು.
ಮೈಷುಗರ್ ಮಾಜಿ ಅಧ್ಯಕ್ಷ ಸಿದ್ದರಾಮೇಗೌಡ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಬಟ್ಟೆಯನ್ನು ತೊಳೆಯಲೂ ಮೈಷುಗರ್ ಕಂಪನಿಯಿಂದ ಹಣ ಪಡೆದಿದ್ದು ಇಂತವರಿಂದ ರೈತರ ಕಾಳಜಿ ನಿರೀಕ್ಷಿಸುವಂತಿಲ್ಲ. ಇವರು ಮೈಷುಗರ್ ಪ್ರೌಢಶಾಲೆ ಅಭಿವೃದ್ಧಿಗೆ ಸಲಹೆ ಸಹಕಾರ ನೀಡದೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಖಂಡಿಸಿದರು.
ಗೋಷ್ಠಿಯಲ್ಲಿ ಕಾಂಗ್ರೆಸ್ ಎಸ್ಸಿ,ಎಸ್ಟಿ ಜಿಲ್ಲಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ಹೆಚ್.ನಾಗರಾಜು, ವೀಣಾ ಶಂಕರ್, ಪ್ರಶಾಂತ್‌ಬಾಬು, ಮಹೇಶ್, ವೆಂಕಟೇಶ್ ತಿಳಿಸಿದರು.




