ಮಂಡ್ಯ ಜಿಲ್ಲಾ ಹಾಲು ಒಕ್ಕೂಟದ ಚುನಾವಣೆಗೆ ತಾವು ಸಹ ಆಕಾಂಕ್ಷಿತರಾಗಿದ್ದು ಪಕ್ಷದ ವರಿಷ್ಠರು ತಮಗೊಂದು ಅವಕಾಶ ನೀಡುವಂತೆ ಸೊಳ್ಳೆಪುರ ಎಂಪಿಸಿಎಸ್ ಅಧ್ಯಕ್ಷ ಪ್ರಕಾಶ್ ಗೌಡ ತಿಳಿಸಿದರು.
ಮದ್ದೂರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ಹಾಲು ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಯ ದಿನಾಂಕ ನಿಗದಿಯಾಗಿದ್ದು ತಾವು ಸಹ ಮದ್ದೂರು ತಾಲೂಕಿನಿಂದ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸಲು ಆಕಾಂಕ್ಷಿಯಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರು ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು ತಮಗೂ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.
ಕಳೆದ ಮೂರು ವರ್ಷಗಳಿಂದಲೂ ಕ್ಷೇತ್ರದಾದ್ಯಂತ ಪ್ರವಾಸ ಕೈಗೊಂಡು ಮತದಾನದ ಹಕ್ಕು ಹೊಂದಿರುವ ಮತದಾರರನ್ನು ಸಂಪರ್ಕಿಸಿ ಚರ್ಚಿಸಿ ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಲಾಗಿದೆ. ಸೊಳ್ಳೆಪುರ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಚುನಾವಣೆಯಲ್ಲಿ 10 ಮಂದಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸುವುದರ ಮೂಲಕ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು ಈ ಸಂಬಂಧ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರೊಂದಿಗೂ ಚರ್ಚಿಸಿದ್ದು ಉಪಚುನಾವಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸ್ಥಳೀಯ ಶಾಸಕರು, ಸಚಿವರು ಹಾಗೂ ಸ್ಥಳೀಯ ಮುಖಂಡರೊಟ್ಟಿಗೆ ಚರ್ಚಿಸಿ ಕ್ರಮ ವಹಿಸುವ ಭರವಸೆ ನೀಡಿದ್ದಾರೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಸ್ಥಳೀಯ ಮುಖಂಡರು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸದೆ ಮತ್ತು ಯಾವುದೇ ಸಭೆಗಳನ್ನು ನಡೆಸದೆ ಮತ್ತು ಆಕಾಂಕ್ಷಿತರ ಮನವಿಗಳನ್ನು ಆಲಿಸದೇ ಏಕಾಏಕಿ ಸ್ವಯಂ ಘೋಷಿತವಾಗಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕ್ರಮವನ್ನು ಖಂಡಿಸಿದರು.
ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಏಕಾಏಕಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿರುವ ಕ್ರಮ ಸರಿಯಾದುದ್ದಲ್ಲ, ಈಗಾಗಲೇ ಮನ್ ಮುಲ್ ಅಧ್ಯಕ್ಷರಾಗಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮತ್ತು ಕೆಪಿಸಿಸಿ ಸದಸ್ಯರಾಗಿರುವ ಕದಲೂರು ರಾಮಕೃಷ್ಣ ಮೂರು ಭಾರಿ ಸ್ಪರ್ಧೆ ಮಾಡಿ ಅಧಿಕಾರ ಅನುಭವಿಸಿದ್ದು ಸಾಮಾನ್ಯ ಕಾರ್ಯಕರ್ತರ ಕಥೆ ಏನೆಂದು ಪ್ರಶ್ನಿಸಿದರು.
ಶಾಸಕ ಕೆ.ಎಂ.ಉದಯ್ ಹಾಗೂ ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ಅವರ ಗ್ರಾಮದವರನ್ನೇ ಅಭ್ಯರ್ಥಿಯನ್ನಾಗಿಸಿದ್ದಾರೆ, ಇದು ಸರಿಯಲ್ಲ. ದೊಡ್ಡ ಗ್ರಾ ಪಂ ಗಳಲ್ಲಿರುವರನ್ನು ಗುರುತಿಸಿ ಅವರಿಗೂ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿದರು.
ಮನ್ ಮುಲ್ ಚುನಾವಣೆಗೆ ಸ್ಪರ್ಧಿಸುವ ಹಿನ್ನೆಲೆಯಲ್ಲಿ ತಾಲೂಕಿನದ್ಯಾಂತ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಿದ್ದು ಮತ್ತು ತಮಗೆ ಒಂದು ಬಾರಿ ಸ್ಪರ್ಧಿಸಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿರುವ ಅವರು, ತಪ್ಪಿದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೆಗೆ ಮೂರು ತಿಂಗಳ ಅವಧಿ ಇದ್ದು ಈ ಸಂಬಂಧ ಸಚಿವರು, ಶಾಸಕರಲ್ಲಿ ಮನವಿ ಮಾಡಲಿದ್ದು ತಮ್ಮ ಮನವಿಯನ್ನು ಪುರಸ್ಕರಿಸದಿದ್ದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿದ್ದು, ತಾವು ಇತರೆ ಯಾವುದೇ ಪಕ್ಷದ ನಾಯಕರುಗಳ ಮನೆ ಬಾಗಿಲಿಗೆ ಹೋಗಿ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ ಎಂದು ಮನವಿ ಮಾಡುವುದಿಲ್ಲ. ತಮ್ಮ ಮಾತೃ ಪಕ್ಷ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಲಿದ್ದು ಇದನ್ನರಿತು ಪಕ್ಷದ ವರಿಷ್ಠರು ಸೂಕ್ತ ತೀರ್ಮಾನ ಕೈಗೊಂಡು ತಮಗೂ ಸ್ಪರ್ಧಿಸಲು ಅವಕಾಶ ಕಲ್ಪಿಸುವ ವಿಶ್ವಾಸ ತಮಗಿದೆ ಎಂದರು.
ಗೋಷ್ಟಿಯಲ್ಲಿ ಸೊಳ್ಳೆಪುರ ಎಂಪಿಸಿಎಸ್ ನಿರ್ದೇಶಕರಾದ ಎಸ್. ಕೆ. ಕೃಷ್ಣ , ಎಸ್. ದಯಾನಂದ್, ಡಿ. ಪುಟ್ಟಸ್ವಾಮಿ, ಎಸ್.ಬಿ. ವೆಂಕಟೇಶ, ಶಶಿಕುಮಾರ್, ಎಸ್. ಪಿ. ಶಿವರಾಮ, ಮುಖಂಡರಾದ ಎಸ್. ಡಿ. ವೆಂಕಟೇಶ್, ಎಸ್.ಎನ್.ಕೆಂಪೇಗೌಡ, ಎಸ್.ಎನ್.ಸಂತೋಷ್, ಶಿವರಾಮ, ರಮೇಶ್, ಎಸ್.ಟಿ.ಸೋಮಶೇಖರ್, ಶ್ರೀನಿವಾಸ್, ಸುರೇಶ್, ರಕ್ಷಿತ್ ಇತರರಿದ್ದರು.




