ಮಂಡ್ಯ ನಗರಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಮಾರ್ಚ್ 12ರಂದು ಆಗಮಿಸಲಿರುವ ಹಿನ್ನೆಲೆಯಲ್ಲಿ ನಗರದ ವರ್ತಕರಿಗೆ ಸಂಚಾರಿ ಪೊಲೀಸರು ನೀಡಿರುವ ನೋಟಿಸ್ ಸಾಕಷ್ಟು ಗೊಂದಲ ಮೂಡಿಸಿದೆ.
ಮಾ.12ರಂದು ಮಂಡ್ಯ ನಗರದಲ್ಲಿ ಪ್ರಧಾನಿ ಮೋದಿಯವರು ರೋಡ್ ಷೋ ಹಮ್ಮಿಕೊಂಡಿದ್ದು ಈ ಸಮಾರಂಭಕ್ಕೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಭದ್ರತೆಯ ಹಿತದೃಷ್ಟಿಯಿಂದ ಮಾ.11 ಮತ್ತು 12 ರಂದು ಎರಡು ದಿನಗಳು ರೋಡ್ ಷೋಗೆ ತೊಂದರೆಯಾಗದಂತೆ ತಮ್ಮ ಕಛೇರಿಗಳು, ಅಂಗಡಿ- ಮುಂಗಟ್ಟುಗಳನ್ನು ತೆರವುಗೊಳಿಸಿ ಹಾಗೂ ತಮ್ಮ ಅಂಗಡಿ ಮುಂದೆ ಇರುವ ಬೋರ್ಡ್‌ಗಳು, ತಳ್ಳುವ ಗಾಡಿಗಳು, ವರ್ಕ್ ಷಾಪ್‌ಗಳ ಮುಂದೆ ನಿಲ್ಲಿಸಿರುವ ಯಾವುದೇ ತರಹದ ವಾಹನಗಳು, ಜಲ್ಲಿಕಲ್ಲು, ಮಣ್ಣು, ಇನ್ನಿತರೆ ಯಾವುದೇ ವಸ್ತುಗಳು ಇದ್ದಲ್ಲಿ ಅವುಗಳನ್ನು ತೆರವುಗೊಳಿಸಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕೆಂದು ತಪ್ಪಿದ್ದಲ್ಲಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಸಂಚಾರಿ ಪೋಲಿಸರು ನೋಟೀಸ್ ನೀಡಿದ್ದಾರೆ.
ಮಂಡ್ಯ ಸಂಚಾರಿ ಪೊಲೀಸರು ಕಚೇರಿಗಳು ಮತ್ತು ಅಂಗಡಿ ಮುಗ್ಗಟ್ಟುಗಳನ್ನು ತೆರವುಗೊಳಿಸುವಂತೆ ಸೂಚಿಸಿರುವುದಕ್ಕೆ ಕೆಲವು ವರ್ತಕರು ಅಂಗಡಿಯನ್ನು ಎರಡು ದಿನ ಮುಚ್ಚಬೇಕೆಂದು ತಿಳಿದುಕೊಂಡಿದ್ದರೆ, ಮತ್ತೆ ಕೆಲವರು ತೆರವುಗೊಳಿಸುವುದು ಎಂದರೆ ಏನೆಂದು ಅರ್ಥವಾಗದೆ ಗೊಂದಲಕ್ಕೆ ಒಳಗಾಗಿದ್ದಾರೆ.
ಈ ಬಗ್ಗೆ ನುಡಿ ಕರ್ನಾಟಕ.ಕಾಂ ಜೊತೆ ಮಾತನಾಡಿದ ಮಂಡ್ಯ ಎಸ್ಪಿ ಎನ್.ಯತೀಶ್, ನಾವು ಯಾವುದೇ ಕಚೇರಿ, ಅಂಗಡಿ- ಮುಂಗಟ್ಟು ತೆರವುಗೊಳಿಸುವಂತೆ ನೋಟಿಸ್ ನೀಡಿಲ್ಲ. ಅಂಗಡಿಗಳನ್ನು ಬಂದ್ ಮಾಡುವಂತೆಯೂ ಸೂಚಿಸಿಲ್ಲ ಎಂದು ತಿಳಿಸಿದರು.




