ಮಂಡ್ಯ ನಗರಸಭೆಯ ಎಲ್ಲಾ ಸದಸ್ಯರ ವಿಶ್ವಾಸದೊಂದಿಗೆ ನಗರದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವುದಾಗಿ ಮಂಡ್ಯ ನಗರಸಭೆಯ ನೂತನ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಂಡ್ಯ ನಗರಸಭೆಯ ನೂತನ ಅಧ್ಯಕ್ಷನಾಗಿ ನನ್ನನ್ನು ಆಯ್ಕೆ ಮಾಡಿದ ಪಕ್ಷದ ವರಿಷ್ಠರು, ನಗರಸಭಾ ಸದಸ್ಯರು ಹಾಗೂ ಜನತೆಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಮಂಡ್ಯ ನಗರದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಶಾಸಕ ಗಣಿಗ ರವಿಕುಮಾರ್ ಅವರಿಗೂ ಮನವಿ ಮಾಡಿದ್ದೇನೆ. ಅದರಂತೆ ನಗರದ ಅಭಿವೃದ್ಧಿಗೆ ಎಚ್.ಡಿ. ಕುಮಾರಸ್ವಾಮಿ,ಸಚಿವರು, ಶಾಸಕರ ಸಹಾಯ ಪಡೆದು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ ಎಂದರು.
ಮಂಡ್ಯ ನಗರದ ಸ್ವಚ್ಛತೆಗೆ ಮೊದಲ ಆದ್ಯತೆ ನೀಡುವುದರ ಜೊತೆಗೆ ರಸ್ತೆ, ಚರಂಡಿ,ಪುಟ್ ಪಾತ್ ಅಭಿವೃದ್ಧಿ, ಫುಟ್ ಪಾತ್ ವ್ಯಾಪಾರಿಗಳಿಗೆ ಪ್ರತ್ಯೇಕ ಸ್ಥಳ, ಆಟೋ ಚಾಲಕರಿಗೆ ತಂಗುದಾಣ, ಬಸ್ ನಿಲ್ದಾಣ ಸೇರಿದಂತೆ ಹತ್ತಾರು ಅಭಿವೃದ್ಧಿ ಕೆಲಸಗಳ ಬಗ್ಗೆ ಯೋಜನೆ ರೂಪಿಸಿಕೊಂಡಿದ್ದೇನೆ. ಈ ಬಗ್ಗೆ ಎಲ್ಲಾ ಸದಸ್ಯರ ಜೊತೆ ಚರ್ಚೆ ನಡೆಸಿ ನಗರದ ಅಭಿವೃದ್ಧಿಗೆ ಆದ್ಯತೆ ನೀಡುವುದಾಗಿ ತಿಳಿಸಿದರು.
ಸೆ.5ರಂದು ಅಧಿಕಾರ ಸ್ವೀಕಾರ
ಮಂಡ್ಯ ನಗರಸಭೆಯ ಅಧ್ಯಕ್ಷನಾಗಿ ಸೆ.5ರ ಗುರುವಾರದಂದು ಅಧಿಕಾರ ಸ್ವೀಕಾರ ಮಾಡಲಿದ್ದೇನೆ ಎಂದು ನೂತನ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್) ತಿಳಿಸಿದರು.
ಅಂದು ನಗರಸಭೆಯ 35 ಮಂದಿ ಸದಸ್ಯರು, ಮೈತ್ರಿ ಪಕ್ಷದ ಎಲ್ಲಾ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನನಗೆ ಶುಭ ಕೋರಬೇಕು ಎಂದು ಮನವಿ ಮಾಡಿದರು.
ವಿ.ವಿ. ರಸ್ತೆ, ಕೆ.ಆರ್.ರಸ್ತೆ ಸೇರಿದಂತೆ ಇನ್ನಿತರ ರಸ್ತೆಗಳಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಫುಟ್ಪಾತ್ ಅತಿಕ್ರಮಣವನ್ನು ತೆರವುಗೊಳಿಸಲಾಗುವುದು. ನಗರದ ಜನರಿಗೆ ಕುಡಿಯುವ ನೀರು ಸಮರ್ಪಕವಾಗಿ ಸಿಗಬೇಕೆಂದು ಈಗಾಗಲೇ ನೀರು ಸರಬರಾಜು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ನಗರದ ರಸ್ತೆಗಳು ಹದಗೆಟ್ಟಿದ್ದು 50 ಲಕ್ಷ ರೂ. ಅನುದಾನ ನೀಡುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಿದ್ದೇನೆ. ಮನವಿಗೆ ಕಾರ್ಯ ಪಾಲಕ ಅಭಿಯಂತರರು ಸಮ್ಮತಿ ನೀಡಿದ್ದಾರೆ. ಮಂಡ್ಯ ನಗರದ ಅಭಿವೃದ್ಧಿಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಕೂಡ ಮುಂದಾಗಿದ್ದು, ಅವರು ಅನುದಾನ ಕೊಡಿಸುವ ಬಗ್ಗೆ ಭರವಸೆ ನೀಡಿದ್ದಾರೆ ಎಂದರು.
ನಗರಸಭೆಯ ಅಧ್ಯಕ್ಷ ಸ್ಥಾನಕ್ಕೆ ಯಾವ ಗಡುವನ್ನೂ ನಮ್ಮ ಪಕ್ಷದ ವರಿಷ್ಠರು ವಿಧಿಸಿಲ್ಲ.ನಾನು ವರಿಷ್ಠರ ಆಯ್ಕೆ ಮಾಡಿದ್ದು,ಅವರು ಹೇಳಿದಂತೆ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದೇನೆ.ವರಿಷ್ಠರು ಯಾವಾಗ ರಾಜೀನಾಮೆ ನೀಡಿ ಎಂದರೂ,ಆ ಕ್ಷಣದಲ್ಲಿ ರಾಜೀನಾಮೆ ನೀಡುತ್ತೇನೆ.ನಾಳೆ ರಾಜೀನಾಮೆ ನೀಡು ಎಂದರೂ ನೀಡುತ್ತೇನೆ ಎಂದು ಸ್ಪಷ್ಟ ಪಡಿಸಿದರು.
ಉಪಾಧ್ಯಕ್ಷ ಅರುಣ್ ಕುಮಾರ್ ಮಾತನಾಡಿ, ನಗರಸಭೆ ವ್ಯಾಪ್ತಿಯಲ್ಲಿರುವ ಹಲವು ಸಮಸ್ಯೆಗಳ ಬಗ್ಗೆ ಅರಿವಿದೆ. ನಾನು 14 ವರ್ಷಗಳ ಹಿಂದೆ ನಗರಸಭೆ ಅಧ್ಯಕ್ಷನಾಗಿ ಕೆಲಸ ಮಾಡಿದ್ದ ಸಂದರ್ಭದಲ್ಲಿ ನಗರದ ಜನಸಂಖ್ಯೆ ಕಡಿಮೆ ಇತ್ತು. ಈಗ ಜನಸಂಖ್ಯೆ ಹೆಚ್ಚಾಗಿದೆ. ಅಂದಿಗೂ ಇಂದಿಗೂ ತುಂಬಾ ವ್ಯತ್ಯಾಸವಿದ್ದು, ಇದಕ್ಕೆ ಅನುಗುಣವಾಗಿ ನಗರದ ಅಭಿವೃದ್ಧಿಗೆ ಯೋಜನೆ ಹಾಕಿಕೊಳ್ಳುತ್ತೇವೆ. ಸದಸ್ಯರ ಹಾಗೂ ಅಧಿಕಾರಿಗಳ ಸಲಹೆ-ಸೂಚನೆಗಳನ್ನು ಪಡೆದು ಉತ್ತಮ ಅಭಿವೃದ್ಧಿ ಮಾಡುವುದು ನಮ್ಮ ಗುರಿ ಎಂದರು.
ಗೋಷ್ಠಿಯಲ್ಲಿ ನಗರಸಭಾ ಸದಸ್ಯ ಟಿ.ರವಿ ಇದ್ದರು.




