Sunday, November 22, 2026

ಪ್ರಾಯೋಗಿಕ ಆವೃತ್ತಿ

ಕನ್ನಡ ಪರ ಹೋರಾಟಗಾರರ ಮೇಲಿನ ಪ್ರಕರಣ ಹಿಂಪಡೆಯದ ಸರ್ಕಾರ : ನಾರಾಯಣಗೌಡ ಕಿಡಿ

ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಿದೆ. ಆದರೆ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು, ಕಾರ್ಯಕರ್ತರೂ ಸೇರಿದಂತೆ ಕನ್ನಡಪರ ಕಾರ್ಯಕರ್ತರ ಮೇಲಿನ ನೂರಾರು ಪ್ರಕರಣಗಳನ್ನು (ಅದರಲ್ಲಿ ಬಹುತೇಕವು ಸುಳ್ಳು ಪ್ರಕರಣಗಳು) ಹಿಂದಕ್ಕೆ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಮನಸು ಇದ್ದಂತಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಕಿಡಿಕಾರಿದ್ದಾರೆ.
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ 60 ಪ್ರಕರಣಗಳನ್ನು ಹಿಂಪಡೆಯಲು ಸಚಿವ ಸಂಪುಟ ನಿರ್ಧರಿಸಲಾಗಿದೆ. ಆದರೆ  ಕನ್ನಡ ಕಾರ್ಯಕರ್ತರ ಮೇಲಿನ ಮೊಕದ್ದಮೆಗಳನ್ನು ಹಿಂದಕ್ಕೆ ಪಡೆಯುತ್ತೇವೆ ಎಂದು ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಮೇಲಿಂದ ಮೇಲೆ ನೀಡಿದ್ದ ಭರವಸೆಗಳು ಸುಳ್ಳಾಗಿವೆ. ನಮ್ಮ ರಾಜಕಾರಣಿಗಳು ವಚನಭ್ರಷ್ಟರು ಅನ್ನೋದು ಪದೇಪದೇ ಸಾಬೀತಾಗುತ್ತ ಬಂದಿದೆ ಎಂದು ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಭಾರತೀಯ ಜನತಾ ಪಕ್ಷದ ಸರ್ಕಾರ ಇದ್ದಾಗಲೂ ಇದೇ ರೀತಿಯಾಗಿತ್ತು. ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಒಟ್ಟು 385 ಕ್ರಿಮಿನಲ್ ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು. ಅದರಲ್ಲಿ 182 ಪ್ರಕರಣಗಳು ಕೋಮು ಸಂಘರ್ಷ, ದ್ವೇಷ ಭಾಷಣಗಳಿಗೆ ಸಂಬಂಧಪಟ್ಟ ಪ್ರಕರಣಗಳು ಇದ್ದವು. ಆಗಲೂ ಕನ್ನಡ ಹೋರಾಟಗಾರರ ಮೇಲಿನ ಒಂದೇ ಒಂದು ಪ್ರಕರಣವನ್ನೂ ಹಿಂದಕ್ಕೆ ಪಡೆಯಲಾಗಿರಲಿಲ್ಲ. ನಂತರ ಬಸವರಾಜ ಬೊಮ್ಮಾಯಿಯವರ ಸರ್ಕಾರವಿದ್ದಾಗಲೂ 62 ಪ್ರಕರಣಗಳನ್ನು ಹಿಂದಕ್ಕೆ ಪಡೆಯಲಾಗಿತ್ತು. ಆಗಲೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರಲಿಲ್ಲ ಎಂದು ಬೊಟ್ಟು ಮಾಡಿದ್ದಾರೆ.
ಎನ್.ಧರ್ಮಸಿಂಗ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಕನ್ನಡ ಚಳವಳಿಗಾರರ ಮೇಲೆ ಹೂಡಲಾಗಿದ್ದ ಕೆಲವು ಮೊಕದ್ದಮೆಗಳನ್ನು ಹಿಂದಕ್ಕೆ ಪಡೆದಿದ್ದನ್ನು ಬಿಟ್ಟರೆ ಬೇರೆ ಯಾವ ಸರ್ಕಾರವೂ ಕನ್ನಡ ಚಳವಳಿಗಾರರ ಪ್ರಕರಣಗಳನ್ನು ಹಿಂದಕ್ಕೆ ಪಡೆದೇ ಇಲ್ಲ. ಕನ್ನಡ ಚಳವಳಿಗಾರರನ್ನು ಈ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ ಸರ್ಕಾರಗಳು ಯಾವಾಗಲೂ ಮಲತಾಯಿ ಮಕ್ಕಳಂತೆ ನೋಡುತ್ತ ಬಂದಿವೆ ಎಂದು ದೂರಿದ್ದಾರೆ.
ಕ್ರಿಮಿನಲ್ ಪ್ರಕ್ರಿಯೆ ಸಂಹಿತೆ (ಸಿಆರ್‌ ಪಿಸಿ) ಕಲಂ 321ರ ಅಡಿಯಲ್ಲಿ ಸಂಪುಟ ಸಭೆಯ ಅನುಮೋದನೆ ಯೊಂದಿಗೆ ಪ್ರಕರಣಗಳ ಪ್ರಾಸಿಕುಷನ್ ಅನುಮತಿಯನ್ನು ವಾಪಸ್ಸು ಪಡೆಯಲು ರಾಜ್ಯ ಸರ್ಕಾರಕ್ಕೆ ಅವಕಾಶವಿರುತ್ತದೆ. ಗೃಹ ಇಲಾಖೆಯ ಪ್ರಸ್ತಾವನೆಯೊಂದಿಗೆ, ಸಂಪುಟ ಸಭೆಯ ಉಪಸಮಿತಿಯು ನೀಡಿದ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರಗಳು ಅಂಗೀಕರಿಸುತ್ತ ಬಂದಿವೆ. ಈ ಅವಕಾಶವನ್ನು ಬಳಸಿಕೊಂಡು ಅಧಿಕಾರದಲ್ಲಿರುವ ಪಕ್ಷಗಳ ಮುಖಂಡರು ತಮ್ಮ ಮೇಲಿನ, ತಮ್ಮ ಕಾರ್ಯಕರ್ತರ ಮೇಲಿನ ಪ್ರಕರಣಗಳನ್ನು ಮುಕ್ತಾಯಗೊಳಿಸುತ್ತ ಬಂದಿದ್ದಾರೆ. ಆದರೆ ಈ ಅವಕಾಶವನ್ನು ಬಳಸಿಕೊಂಡು ಕನ್ನಡ ಕಾರ್ಯಕರ್ತರ ಮೇಲಿನ ಪ್ರಕರಣ ರದ್ದುಪಡಿಸುವ ಹೃದಯವೈಶಾಲ್ಯತೆಯನ್ನು ಈ ಸರ್ಕಾರಗಳು ತೋರುತ್ತಿಲ್ಲ. ನಾಡು, ನುಡಿ, ಗಡಿ, ಜಲ ರಕ್ಷಣೆ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ರಾಜಕಾರಣಿಗಳು ವಾಸ್ತವವಾಗಿ ಎಂಥ ಬೂಟಾಟಿಕೆಯ, ಆತ್ಮವಂಚಕರು ಎಂಬುದು ಇದರಿಂದ ಸಾಬೀತಾಗುತ್ತದೆ ಎಂದು ಕಿಡಿಕಾರಿದ್ದಾರೆ.
ನಮ್ಮ ಮೇಲಿನ ಪ್ರಕರಣಗಳನ್ನು ಹಿಂದಕ್ಕೆ ಪಡೆಯಿರಿ ಎಂದು ನಾವು ಯಾರನ್ನೂ ಭಿಕ್ಷೆ ಬೇಡುವ ಪರಿಪಾಠ ಇಟ್ಟುಕೊಂಡಿಲ್ಲ. ಕನ್ನಡ ನಾಡು ನುಡಿ ರಕ್ಷಣೆಗಾಗಿ, ಕನ್ನಡಿಗರ ಬದುಕಿನ ರಕ್ಷಣೆಗಾಗಿ ಈಗ ಇರುವ ಪ್ರಕರಣಗಳ ಜೊತೆ ಇನ್ನೂ ಒಂದಷ್ಟು ಪ್ರಕರಣಗಳನ್ನು ಮೈಮೇಲೆ ಹಾಕಿಕೊಳ್ಳಲು ನಾವು ಸಿದ್ಧರಿದ್ದೇವೆ. ಅದು ನಮ್ಮ ಬದ್ಧತೆ. ಕನ್ನಡತನದ ಉಳಿವಿಗಾಗಿ ನಾವು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧರಾಗಿರುತ್ತೇವೆ. ಆದರೆ ಒಂದು ಕಣ್ಣಿಗೆ ಬೆಣ್ಣೆ, ಒಂದು ಕಣ್ಣಿಗೆ ಸುಣ್ಣ ಬಳಿಯುವ ರಾಜಕಾರಣಿಗಳ ಆಷಾಢಭೂತಿತನದ ಬಗ್ಗೆ ಅಸಹ್ಯವೆನಿಸುತ್ತದೆ. ಇವರೇನಾ ನಮ್ಮ ಜನಪ್ರತಿನಿಧಿಗಳು? ಇವರೇನಾ ನಮ್ಮ ಸಂರಕ್ಷಕರು? ಇಂಥ ಸ್ವಾರ್ಥಿಗಳ ಕೈಗೆ ನಾವು ಅಧಿಕಾರ ಕೊಡುತ್ತ ಇರಬೇಕೆ ಎಂಬ ಪ್ರಶ್ನೆ ಕಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ