ಮಂಡ್ಯ ಜಿಲ್ಲೆಯ ಮೇರು ವ್ಯಕ್ತಿತ್ವದ ರಾಜಕಾರಣಿಯಾಗಿದ್ದ ಕೆ.ವಿ. ಶಂಕರಗೌಡರ ಕುಟುಂಬದ ರಾಜಕಾರಣವನ್ನು ಪೋಷಿಸಲು ಹಾಗೂ ಮಂಡ್ಯ ಜಿಲ್ಲೆಯ ಸ್ವಾಭಿಮಾನವನ್ನು ಕಾಪಾಡುವುದಕ್ಕಾಗಿ ಮಂಡ್ಯ ವಿಧಾನಸಭಾ ಕ್ಷೇತ್ರದ ಮತದಾರರು ಪಕ್ಷೇತರ ಅಭ್ಯರ್ಥಿ ಕೆ.ಎಸ್.ವಿಜಯ್ ಆನಂದ್ ಅವರನ್ನು ಬೆಂಬಲಿಸುವಂತೆ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಬಿ.ಜಯಪ್ರಕಾಶ್ ಗೌಡ ಹಾಗೂ ಡಾ.ರಾಮಲಿಂಗಯ್ಯ ಮನವಿ ಮಾಡಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಧರ್ಮವನ್ನು ರಕ್ಷಿಸಿದರೆ ಧರ್ಮ ನಮ್ಮನ್ನು ರಕ್ಷಿಸುತ್ತದೆ ಎಂಬ ನಾಣ್ಣುಡಿಗೆ ಸಾಕ್ಷಿಯಾಗಿ ಬದುಕಿದ್ದವರು ನಿತ್ಯ ಸಚಿವರೆನಿಸಿಕೊಂಡಿದ್ದ ಕೆ.ವಿ.ಶಂಕರಗೌಡರು. ಚುನಾವಣೆ ಎಂದಾಕ್ಷಣ ಹಣಬಲ ಮತ್ತು ತೋಳ್ಬಲಗಳ ಮೇಳೈಸುವಿಕೆಯ ಇಂದಿನ ರಾಜಕಾರಣದಲ್ಲಿ ಸ್ವಂತ ಮನೆ ಇಲ್ಲದೇ, ಬಾಡಿಗೆ ಮನೆಯಲ್ಲಿದ್ದುಕೊಂಡು ಸಮಾಜ ಸೇವೆಗೆ ನಿರತರಾಗಿರುವ ಕೆ.ವಿ.ಶಂಕರಗೌಡ ಮೊಮ್ಮೊಗ, ಸಚ್ಚಿದಾನಂದ ಸುಪುತ್ರ ಕೆ.ಎಸ್.ವಿಜಯ್ ಆನಂದ್ ಸ್ಪರ್ಧೆಯನ್ನು ಬೆಂಬಲಿಸುವಂತೆ ಕರೆ ನೀಡಿದರು.
ಪಾರದರ್ಶಕ ಆಡಳಿತ, ಶಿಕ್ಷಣದ ಉನ್ನತಿಗೆ ಶ್ರಮಿಸಿದ್ದ ಕೆ.ವಿ.ಶಂಕರಗೌಡರು ”ಮಂಡ್ಯದ ಶಿಲ್ಪಿ” ಎಂದೇ ಗೌರವಕ್ಕೆ ಪಾತ್ರರಾದವರು. ಜಿಲ್ಲಾ ಕೇಂದ್ರದಲ್ಲಿ ರೈತರ ಸೊಸೈಟಿ, ಡಿಸಿಸಿ ಬ್ಯಾಂಕ್, ಜನತಾ ಶಿಕ್ಷಣ ಸಂಸ್ಥೆಯಂತಹ ಬೃಹತ್ ಸಾರ್ವಜನಿಕ ಸ್ನೇಹಿ ಸಂಸ್ಥೆಗಳನ್ನು ಆರಂಭಿಸಿ ಸಮಾಜಮುಖಿ ಕಾರ್ಯಗಳಿಗೆ ನೆರವು ನೀಡಿದ್ದ ಗೌಡರ ಉದಾರತೆಗೆ ಜಿಲ್ಲೆಯ ಜನತೆ ಅಭಾರಿಯಾಗಿರಬೇಕೆಂದು ಮನವಿ ಮಾಡಿದರು.
ಶಿಕ್ಷಣ ಸಚಿವರಾಗಿ, ಸಂಸದರಾಗಿ ಮಾಡಿರುವ ಸಾಧನೆಗಳು ಅಪಾರ, ಕನ್ನಡದಲ್ಲಿರುವ ಏಕೈಕ ವಿಶ್ವಕೋಶದ ರೂವಾರಿಯಾಗಿದ್ದ ಗೌಡರ ರಾಜಕೀಯ ಪರಂಪರೆಯನ್ನು ಉಳಿಸಲು ಕೆ.ಎಸ್.ವಿಜಯ್ ಆನಂದ್ ಸಮರ್ಥ ಆಭ್ಯರ್ಥಿಯಾಗಿದ್ದು, ಜಿಲ್ಲಾ ಕೇಂದ್ರದ ಮತದಾರರು ವಾಸ್ತವ ಸ್ಥಿತಿ ಅರಿತು ವಿಜಯ್ ಆನಂದ್ ಬೆಂಬಲಿಸುವಂತೆ ವಿನಂತಿ ಮಾಡಿದರು.
ಜಿಲ್ಲಾ ನಾಯಕತ್ವ ಬೇಕಾಗಿದೆ
ರಾಜ್ಯ ವಿಧಾನಸಭೆ ಚುನಾವಣೆಯ ಹೊಸ್ತಿಲಲ್ಲಿರುವ ಮಂಡ್ಯ ಜಿಲ್ಲೆಯ ಜನರನ್ನು ಕಾಡುತ್ತಿರುವ ಜಿಲ್ಲಾ ನಾಯಕತ್ವದ ಉಳಿವಿಗಾಗಿ ಜಿಲ್ಲೆಯ ಮತದಾರರು ಸೂಕ್ತ ಸಂವೇದನೆಯ ಪಕ್ಷದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕೆಂದು ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ ಬಿ.ಜಯಪ್ರಕಾಶ್ ಗೌಡ ಮನವಿ ಮಾಡಿದರು.
ನಾಯಕತ್ವದ ವಿಚಾರದಲ್ಲಿ ಜಿಲ್ಲೆಯ ಸ್ವಾಭಿಮಾನಕ್ಕೆ ಆಗಿರುವ ಪೆಟ್ಟು ನಿವಾರಿಸಿಕೊಳ್ಳುವ ಅಗತ್ಯತೆ ಪ್ರಸ್ತುತ ಎದುರಾಗಿದ್ದು ನಮ್ಮ ಪೂರ್ವಿಕರ ಪ್ರಬಲ ನಾಯಕತ್ವವನ್ನು ಮರು ಸ್ಥಾಪಿಸುವ ಅಗತ್ಯವಿದೆ ಎಂದರು.
1990ರ ತನಕ ಮಂಡ್ಯ ಜಿಲ್ಲೆಯ ನಾಯಕತ್ವ ರಾಜ್ಯಕ್ಕೆ ಗೋಚರವಾಗುತ್ತಿತ್ತು, ಆದರೆ ಪ್ರಸ್ತುತ ದಿನಗಳಲ್ಲಿ ಜಿಲ್ಲೆಯ ಯಾವುದೇ ರಾಜಕೀಯ ಪಕ್ಷಗಳಲ್ಲೂ ಪ್ರಬಲ ಜಿಲ್ಲಾ ನಾಯಕತ್ವದ ಕೊರತೆ ಎದ್ದು ಕಾಣುತ್ತಿದೆ, ಇದನ್ನು ಮೆಟ್ಟಿ ನಿಲ್ಲಲು ಜಿಲ್ಲಾ ನಾಯಕತ್ವಕ್ಕೆ ಇಂಬು ನೀಡಬೇಕಿದೆ ಎಂದರು.
ಗೋಷ್ಠಿಯಲ್ಲಿ ನಿವೃತ್ತ ಪ್ರಾಂಶುಪಾಲರಾದ ಎಸ್.ಬಿ.ಶಂಕರಗೌಡ, ಶಿವಣ್ಣಗೌಡ, ಶಿವರುದ್ರಪ್ಪ ಉಪಸ್ಥಿತರಿದ್ದರು.




