ಕರ್ನಾಟಕ ಸಂಘದ ವತಿಯಿಂದ ಪ್ರಥಮ ವರ್ಷದ ಪ್ರೊ.ಜಯಪ್ರಕಾಶಗೌಡ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಫೆಬ್ರವರಿ 15ರ ಸಂಜೆ 4 ಗಂಟೆಗೆ ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಸಲಹೆಗಾರ ಎಸ್.ಬಿ.ಶಂಕರೇಗೌಡ ತಿಳಿಸಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರೊ.ಜಯಪ್ರಕಾಶಗೌಡರ ಹಿತೈಷಿ ಬಳಗದಿಂದ ಸುಮಾರು 15 ಲಕ್ಷ ರೂ.ಗಳ ದತ್ತಿಯನ್ನು ರಚಿಸಲಾಗಿದ್ದು, ಅವರ ಹೆಸರಿನಲ್ಲಿ ನೀಡಲಾಗುವುದು, ಪ್ರಥಮ ಪ್ರಶಸ್ತಿಗೆ ಐಆರ್‌ಎಸ್ ಅಧಿಕಾರಿ ಜಯರಾಮ್ ರಾಯಪುರ ಹಾಗೂ ಚಲನಚಿತ್ರ ಹಾಗೂ ರಂಗಭೂಮಿ ನಿರ್ದೇಶಕ ಬಿ.ಸುರೇಶ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದರು.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು ಆದಿಚುಂಚನಗರಿ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ವಿಶ್ವಮಾನವ ಕ್ಷೇತ್ರದ ಪುರುಷೋತ್ತಮಾನಂದನಾಥ ಸ್ವಾಮೀಜಿ ಅವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿದ್ದು, ಮಾಜಿ ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ ಅಧ್ಯಕ್ಷತೆ ವಹಿಸುವರು, ಮಾಜಿ ಶಾಸಕ ಎ.ಟಿ.ರಾಮಸ್ವಾಮಿ ಪ್ರಶಸ್ತಿ ಪ್ರದಾನ ಮಾಡಲಿದ್ದು, ಪುರಸ್ಕೃತರು ಉಪಸ್ಥಿತರಿರುವರು ಎಂದು ಮಾಹಿತಿ ನೀಡಿದರು.
ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಉಪ ಸಭಾಪತಿ ಮರಿತಿಬ್ಬೇಗೌಡ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಪುರಸ್ಕೃತರಿಗೆ ಪ್ರಶಸ್ತಿಯ ಮೊತ್ತ 50 ಸಾವಿರ ರೂ ನಗದು ಜೊತೆಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಕೆ.ಹರೀಶ್‌ಕುಮಾರ್, ಖಜಾಂಚಿ ಮಂಜುಳಾ ಉದಯಶಂಕರ್, ನಿರ್ದೇಶಕರಾದ ಕೆ.ಜಯರಾಮು, ಮೋಹನ್‌ಕುಮಾರ್ ಇದ್ದರು.




