Wednesday, November 18, 2026

ಪ್ರಾಯೋಗಿಕ ಆವೃತ್ತಿ

ನ್ಯಾಯಬೆಲೆ ಅಂಗಡಿಯಲ್ಲಿ ಕಳಪೆ ಆಹಾರ ಧಾನ್ಯ ವಿತರಣೆ : ಸಾರ್ವಜನಿಕರಿಂದ ಪ್ರತಿಭಟನೆ

ಭಾರತೀನಗರ ಸಮೀಪದ ಕೆ.ಶೆಟ್ಟಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪ ಕೇಂದ್ರ ಹರಳಹಳ್ಳಿ ಗ್ರಾಮದಲ್ಲಿ ಕಳಪೆ ಆಹಾರ ಧಾನ್ಯ ವಿತರಣೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಾರ್ವಜನಿಕರು ಪಡಿತರ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ಮಾಡಿರುವ ಘಟನೆ ಜರುಗಿದೆ.

ಬಡತನ ರೇಖೆಗಿಂತ ಕೆಳಗಿರುವವರಿಗೆ ವಿತರಣೆ ಮಾಡುತ್ತಿರುವ ಆಹಾರ ಧಾನ್ಯ ಕಳಪೆ ಗುಣಮಟ್ಟದ್ದಾಗಿದೆ. ಪಡಿತರ ವಿತರಣೆಗಾಗಿ ಕಳುಹಿಸಲಾಗಿರುವ ರಾಗಿಯಲ್ಲಿ ಕಲ್ಲು, ಮಣ್ಣು, ಇಲಿ ಹಿಕ್ಕೆ, ಬೀಡಿ ತುಂಡುಗಳು ಇದ್ದು, ಇದರ ಜೊತೆಗೆ ರಾಗಿಯಲ್ಲಿ ಅಕ್ಕಿ ಕೂಡ ಮಿಶ್ರಣವಾಗಿದೆ ಎಂದು ಆರೋಪಿಸಿದ್ದಾರೆ.

ಹರಳಹಳ್ಳಿ ಕೃಷಿ ಕೂಲಿಕಾರ್ಮಿಕರ ಸಂಘದ ಹರಳಹಳ್ಳಿ ಘಟಕದ ಅಧ್ಯಕ್ಷ ಕೆಂಪರಾಜು, ಉಪಾಧ್ಯಕ್ಷ ಮಂಜುನಾಥ್, ಗ್ರಾಮದ ಶಿವಣ್ಣ, ಮಾದೇಶ, ಕೆಂಪಾಂಬಿಕಾ, ಮಾದೇವಪ್ಪ, ಮಹೇಶ್, ಅಂಕಪ್ಪ, ಮಾದೇಸ್ವಾಮಿ ಅವರುಗಳು ಹರಳಹಳ್ಳಿ ಗ್ರಾಮದ 119 ನೇ ಉಪಕೇಂದ್ರದಲ್ಲಿ ಪಡಿತರ ಆಹಾರ ಧಾನ್ಯ ಪಡೆಯಲು ಹೋದ ಸಂದರ್ಭದಲ್ಲಿ ಕಳಪೆ ಗುಣಮಟ್ಟದ ರಾಗಿ ವಿತರಿಸಿದ್ದರಿಂದ ಕೇಂದ್ರದ ಆಹಾರ ಧಾನ್ಯ ವಿತರಣೆ ಮಾಡುವ ಶೇಖರ್ ಎಂಬಾತನನ್ನು ಪ್ರಶ್ನೆ ಮಾಡಿ ಪ್ರತಿಭಟಿಸಿದರು.

ಇದಕ್ಕೆ ಆಹಾರ ಧಾನ್ಯ ವಿತರಕ ಶೇಖರ್ ಅವರು ,ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯು ಪೂರೈಕೆ ಮಾಡಿದ ಪಡಿತರ ಆಹಾರ ಧಾನ್ಯಗಳನ್ನು ನಾನು ವಿತರಣೆ ಮಾಡುತ್ತಿದ್ದೇನೆ. ಇದರಲ್ಲಿ ನನ್ನ ತಪ್ಪೇನಿಲ್ಲ ಎಂದು ಸಮರ್ಥಿ ಸಿಕೊಂಡಿದ್ದಾರೆ. ಇದರಿಂದ ಆಕ್ರೋಶಗೊಂಡ ಫಲಾನುಭವಿಗಳು ತಾಲ್ಲೂಕು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಆಹಾರ ಧಾನ್ಯವನ್ನು ಪರಿಶೀಲನೆ ನಡೆಸಬೇಕೆಂದು ಆಗ್ರಹಿಸಿ ಆಹಾರ ವಿತರಣಾ ಕೇಂದ್ರದ ಮುಂದೆ ಪ್ರತಿಭಟನೆ ನಡೆಸಿದರು.

ಜಾಹೀರಾತು

ಇಂತಹ ಕಳಪೆ ಗುಣಮಟ್ಟದ ಆಹಾರ ಧಾನ್ಯವನ್ನು ಖರೀದಿಸುವಾಗ ಸರ್ಕಾರದ ಅಧಿಕಾರಿಗಳು ಗುಣಮಟ್ಟ ಪರೀಕ್ಷಿಸಿಲ್ಲವೇ? ಇಲ್ಲ ಲಂಚ ಪಡೆದು ಇಂತಹ ಕಳಪೆ ಗುಣಮಟ್ಟದ ಆಹಾರ ಧಾನ್ಯವನ್ನು ಗೋದಾಮಿನಲ್ಲಿ ಖರೀದಿಸಿ ಶೇಖರಣೆ ಮಾಡಿದ್ದಾರೆಯೇ?. ಇದಕ್ಕೆ ಸಂಬಂಧಿಸಿದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಅಧಿಕಾರಿಗಳೇ ಉತ್ತರಿಸಬೇಕು ಎಂದು ಆಗ್ರಹಿಸಿದರು.

ಈ ಕೂಡಲೇ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಫಲಾನುಭವಿಗಳಿಗೆ ಉತ್ತಮ ಗುಣಮಟ್ಟದ ಆಹಾರ ಪಡಿತರ ಧಾನ್ಯಗಳ ವಿತರಣೆಗೆ ಕ್ರಮ ಕೈಗೊಳ್ಳಬೇಕು. ಇಂತಹ ಕಳಪೆ ಆಹಾರ ಧಾನ್ಯ ಖರೀದಿಸಿರುವ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಇಲ್ಲದಿದ್ದಲ್ಲಿ ಆಹಾರ ವಿತರಣಾ ಕೇಂದ್ರಕ್ಕೆ ಬೀಗ ಜಡಿದು, ಜಿಲ್ಲಾಧಿಕಾಗಳ ಕಚೇರಿ ಮುಂದೆ ಕಳಪೆ ಆಹಾರ ಧಾನ್ಯಗಳ ಸಮೇತ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ