ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಗಳು ಕೃಷಿಯೆಡೆಗೆ ಮುಂದಾಗಿದ್ದು, ಕೃಷಿ ಮತ್ತು ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ, ಯುವಜನರ ಬದುಕಿಗೆ ಮಾರವಾಗಿದ್ದು,ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಗಳು ದೇಶ ಬಿಟ್ಟು ತೊಲಗಲಿ ಎಂದು ಒತ್ತಾಯಿಸಿ ಸಂಯುಕ್ತ ಹೋರಾಟ ಕರ್ನಾಟಕ ಮಂಡ್ಯದಲ್ಲಿ ಬುಧವಾರ ಪ್ರತಿಭಟನೆ ನಡೆಸಿತು.
ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರನ್ನು ದೇಶದಿಂದ ತೊಲಗಿಸಲು ಆಗಸ್ಟ್ 09 ರಂದು ಭಾರತ ಬಿಟ್ಟು ತೊಲಗಿ ಹೋರಾಟದಂತೆ ದೇಶಾದ್ಯಂತ ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಗಳನ್ನು ದೇಶದಿಂದ ಹೊರಗೆ ದೂಡಬೇಕೆಂದು ಆಗ್ರಹಿಸಿದರು.
ಬಹುರಾಷ್ಟ್ರೀಯ ಮತ್ತು ಕಾರ್ಪೋರೇಟ್ ಕಂಪನಿಗಳು ದೇಶದ ಆರ್ಥಿಕತೆಯನ್ನು ಖಾಸಗೀಕರಣಗೊಳಿಸಿ ಎಲ್ಲಾ ಕೇತ್ರಗಳಲ್ಲಿಯೂ ಲಗ್ಗೆ ಇಡುವ ಮೂಲಕ ದೇಶದ ಸ್ವಾವಲಂಬಿ ಹಾಗೂ ಸಾರ್ವಭೌಮತ್ವಕ್ಕೆ ತೊಂದರೆಯುಂಟಾ ಗಲಿದ್ದು, ರೈತ, ಕಾರ್ಮಿಕ, ದಲಿತ, ಮಹಿಳೆ, ವಿದ್ಯಾರ್ಥಿ, ಯುವಜನ ಸಂಘಟನೆಗಳು ಒಟ್ಟಾಗಿ ಕೇಂದ್ರ ಸರ್ಕಾರದ ಕಾರ್ಪೋರೇಟ್ ನೀತಿಯ ವಿರುದ್ದ ಹೋರಾಟ ಮಾಡಬೇಕೆಂದು ಆಗ್ರಹಿಸಿದರು.
ಕೇಂದ್ರ ಸರ್ಕಾರ ಅಮೆರಿಕಾದೊಂದಿಗೆ ಆರ್ಥಿಕ, ವಾಣಿಜ್ಯ, ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಳ್ಳಬಾರದು, ವಿದೇಶಿ ನೇರ ಹೂಡಿಕೆಗೆ ಕಡಿವಾಣ ಹಾಕಬೇಕು, ಎನ್‌ಪಿಎಫ್‌ಎಎಂ ಹಾಗೂ ಎನ್‌ಸಿಪಿ ರದ್ದುಪಡಿಸಬೇಕು, ಸಾರ್ವಜನಿಕ ಖಾಸಗಿ ಸಹಭಾಗಿತ್ವ ಮೂಲಕ ಖಾಸಗಿ ಬಂಡವಾಳ ಉತ್ತೇಜಿಸುವ ನೀತಿ ಕೈಬಿಡಬೇಕು. ರೈತರ ಎಲ್ಲಾ ಬೆಳೆಗಳಿಗೂ ಬೆಂಬಲ ಬೆಲೆಯಲ್ಲಿ ಖರೀದಿ ಮಾಡಬೇಕು, ಸಮಗ್ರ ಸಾಲಮನ್ನ ರೀತಿ ಜಾರಿ, ಮೈಕ್ರೋಫೈನಾನ್ಸ್ ಕಿರುಕುಳ ತಡೆ ಸೇರಿದಂತೆ ವಿವಿದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರೈತಸಂಘದ ಜಿಲ್ಲಾಧ್ಯಕ್ಷ ಕೆಂಪೂಗೌಡ, ಸಿಐಟಿಯು ಸಿ.ಕುಮಾರಿ, ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಸಂಚಾಲಕ ಎನ್.ಎಲ್.ಭರತ್‌ರಾಜ್, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಅಧ್ಯಕ್ಷ ಪುಟ್ಟಮಾದು, ಜಿಲ್ಲಾ ಕಾರ್ಯದರ್ಶಿ ಹನುಮೇಶ್, ಸಿಐಟಿಯು ಜಿಲ್ಲಾ ಮುಖಂಡ ಚಂದ್ರಶೇಖರ್, ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಸಹ ಕಾರ್ಯದರ್ಶಿ ಪ್ರೇಮ, ಸಿ.ಬಿ.ಚಂದ್ರಶೇಖರ್, ರೈತಸಂಘದ ತಾಲ್ಲೂಕು ಅಧ್ಯಕ್ಷ ಅಣ್ಣಯ್ಯ ಸೇರಿದಂತೆ ಮತ್ತಿತರರಿದ್ದರು.




