ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಅವರು ಮಾಡಿದ ಸಾಧನೆಗಳು ಅವಿಸ್ಮರಣೀಯ. ಯಾರಿಗೂ ಹೇಳದಂತೆ ನಿರಂತರವಾಗಿ ಅವರು ಮಾಡಿದ ಸಹಾಯ ಅನುಕರಣೀಯವಾದದ್ದು ಪಿಇಟಿ ಟ್ರಸ್ಟ್ ಅಧ್ಯಕ್ಷ ಕೆ.ಎಸ್.ವಿಜಯಾನಂದ ಹೇಳಿದರು.
ಮಂಡ್ಯ ನಗರದ ಸಿಲ್ವರ್ ಜ್ಯೂಬಿಲಿ ಪಾರ್ಕಿನಲ್ಲಿ ವಿವಿಧ ಕಲಾ ತಂಡಗಳು, ಪುನೀತ್ ರಾಜ್ಕುಮಾರ್ ಅವರ ಸ್ಥಬ್ಧ ಚಿತ್ರಗಳು, ಸಾಮಾಜಿಕ ಸಮನ್ವಯ ರಥ ಮತ್ತು ಆಟೋ ಜಾಥಾವನ್ನು ಒಳಗೊಂಡ ಮೆರವಣಿಗೆಗೆ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಯುವಜನರು ಏನನ್ನಾದರೂ ಸಾಧಿಸಬೇಕೆಂದರೆ ಅಂತಹ ಸಾಧನೆಗೆ ಪುನೀತ್ ರಾಜ್ಕುಮಾರ್ ಆದರ್ಶವಾಗಿದ್ದಾರೆ. ಅವರಲ್ಲಿನ ಜನಪರತೆ ಇಂದಿನ ಸಮಾಜಕ್ಕೆ ಮಾದರಿ ಎಂದು ಬಣ್ಣಿಸಿದರು.
ನಗರಸಭೆ ಅಧ್ಯಕ್ಷ ಎಚ್.ಎಸ್.ಮಂಜು ಮಾತನಾಡಿ, ಅಪ್ಪು ಎಂಬ ಹೆಸರನ್ನು ಕೇಳಿದರೆ ಮೈ ರೋಮಾಂಚನವಾಗುತ್ತದೆ. ಬಾಲನಟನಾಗಿ ಅವರು ಮಾಡಿರುವ ಕಲಾಪ್ರದರ್ಶನ ತಂದೆಯನ್ನು ಮೀರಿಸಿದ ಮಗ ಎಂಬುದಕ್ಕೆ ಸಾಕ್ಷಿಯಾಗಿದೆ. ಅವರು ಚಿತ್ರರಂಗದ ಜೊತೆಗೆ ಬಡಜನರು, ಅಸಹಾಯಕರು ಮತ್ತು ನೊಂದವರಿಗೆ ಅವರು ಮಾಡಿರುವ ಸೇವೆ ಅದ್ಬುತವಾದದ್ದು ಅದನ್ನು ನಾವೆಲ್ಲರೂ ಸ್ಮರಿಸಬೇಕು ಮತ್ತು ಪಾಲಿಸಬೇಕು ಎಂದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಎಲ್.ಸಂದೇಶ್ ಮಾತನಾಡಿ, ಪುನೀತ್ ರಾಜ್ಕುಮಾರ್ ಅವರ ಸೇವೆ ಕೇವಲ ಸ್ಮರಣೆಗೆ ಸೀಮಿತವಾಗದೆ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕು. ಅವರ ಜೀವನ ಮೌಲ್ಯ ಮತ್ತು ಆದರ್ಶಗಳನ್ನು ಜೀವಂತವಾಗಿಡುವ ಉದ್ದೇಶದಿಂದಾಗಿ ಅಪ್ಪು ಜನೋತ್ಸವವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ವತಿಯಿಂದ ಅಪ್ಪು ಜನೋತ್ಸವದ ಅಂಗವಾಗಿ ಮಂಡ್ಯ ನಗರದಲ್ಲಿಂದು ಆಕರ್ಷಕ ಮೆರವಣಿಗೆ ನಡೆಸಲಾಯಿತು.
ಎನ್ಸಿಸಿ ವಿದ್ಯಾರ್ಥಿಗಳು, ಯುವಜನರು, ಕನ್ನಡ ಸಂಘಟನೆ ಮುಖಂಡರು, ವಿವಿಧ ಸಮುದಾಯ ಮತ್ತು ಧರ್ಮದ ಮುಖಂಡರು ಒಗ್ಗೂಡಿ ನಡೆಸಿದ ಮೆರವಣಿಗೆ ನಗರದ ವಿ.ವಿ. ರಸ್ತೆ, ಹೊಸಹಳ್ಳಿ ವೃತ್ತ, ನೂರಡಿ ರಸ್ತೆ, ಅಂಬೇಡ್ಕರ್ ವೃತ್ತ, ವಿನೋಭ ರಸ್ತೆ ಮಾರ್ಗವಾಗಿ ಡಾ. ಬಿ.ಆರ್.ಅಂಬೇಡ್ಕರ್ ಭವನದ ಬಳಿ ಸಂಪನ್ನಗೊಂಡಿತು.
ಡೊಳ್ಳು, ಪೂಜಾ ಕುಣಿತ, 20 ಕ್ಕೂ ಹೆಚ್ಚು ಆಟೋಗಳು, ಪುನೀತ್ ರಾಜ್ಕುಮಾರ್ ಅವರ ಅಲಂಕೃತಗೊಂಡ ಬೃಹತ್ ಭಾವಚಿತ್ರ ಮೆರವಣಿಗೆಯಲ್ಲಿ ಗಮನ ಸೆಳೆಯಿತು.
ಹಾಪ್ಕಾಮ್ಸ್ ನಿರ್ದೇಶಕ ಹೊಸಹಳ್ಳಿ ಡಿ.ನಾಗೇಶ್, ಸಮಾಜ ಸೇವಕ ಬಿ.ಎಂ.ಅಪ್ಪಾಜಪ್ಪ,, ಜಿಲ್ಲಾ ಕುಂಬಾರರ ಜಾಗೃತಿ ವೇದಿಕೆ ಅಧ್ಯಕ್ಷ ಎಂ.ಕೃಷ್ಣ, ಕುರುಬರ ಸಂಘದ ಅಧ್ಯಕ್ಷ ಸುರೇಶ್, ಜಿ.ಪಂ ಮಾಜಿ ಅಧ್ಯಕ್ಷ ಲಿಂಗಯ್ಯ, ಮುಖಂಡರಾದ ಅಮ್ಜದ್ಪಾಷ, ಡಿ.ರಮೇಶ್, ಪ್ರದೀಪ್, ಅಂಕರಾಜು, ಬಸವರಾಜು, ಎಸ್.ಪಿ. ನಾರಾಯಣಸ್ವಾಮಿ, ಹಾಲಹಳ್ಳಿ ಪುಟ್ಟಸ್ವಾಮಿ ಇತರರು ಇದ್ದರು.




