Friday, June 21, 2024

ಪ್ರಾಯೋಗಿಕ ಆವೃತ್ತಿ

ಪ್ರತಿ ಕುಟುಂಬಕ್ಕೆ ತಿಂಗಳಿಗೆ ₹10,500 ,ಇದು ಕಾಂಗ್ರೆಸ್ ಗ್ಯಾರಂಟಿ: ರಾಹುಲ್ ಗಾಂಧಿ

ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರ ಬಂದರೆ ಪ್ರತಿ ತಿಂಗಳು ಪ್ರತಿಯೊಂದು ಕುಟುಂಬಕ್ಕೆ ₹8,500 ರೂ ನೀಡಲಿದೆ, ಇದರ ಜೊತೆಗೆ ಕರ್ನಾಟಕ ಸರ್ಕಾರದ ಗೃಹಲಕ್ಷ್ಮಿ ಯೋಜನೆಯ ₹2,000 ಎಂದಿನಂತೆ ಮುಂದುವರಿಯಲಿದೆ, ಇದರಿಂದಾಗಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಒಟ್ಟು ₹10,500 ದೊರೆಯಲಿದೆ, ಇದು ದೇಶದ ಜನತೆಗೆ ಕಾಂಗ್ರೆಸ್ ನೀಡುವ ಗ್ಯಾರಂಟಿ ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದರು.

ಮಂಡ್ಯ ವಿಶ್ವ ವಿದ್ಯಾಲಯದ ಮೈದಾನದಲ್ಲಿ ನಡೆದ ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್‌ ಚಂದ್ರು ಪರ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಈ ಗ್ಯಾರಂಟಿ ಯೋಜನೆಗಳಿಂದ ಬಡ ಮಹಿಳೆಯರ ಕುಟುಂಬಕ್ಕೆ ವರ್ಷಕ್ಕೆ 1 ಲಕ್ಷ 24 ಸಾವಿರ ರೂ. ನೀಡುತ್ತೇವೆ” ಎಂದು ನುಡಿದರು.

ಉದ್ಯಮಿಗಳ 16 ಲಕ್ಷ ಕೋಟಿ ಸಾಲ

“ಕೇಂದ್ರ ಸರ್ಕಾರ 20-25 ಉದ್ಯಮಿಗಳ ಏಳಿಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ. ಉದ್ಯಮಿಗಳ 16 ಲಕ್ಷ ಕೋಟಿ ರೂ. ಸಾಲ ಮನ್ನಾ ಮಾಡಿದೆ. ಆದರೆ, ರೈತರ ಸಾಲಮನ್ನಾ ಮಾಡಿಲ್ಲ” ಎಂದು ಪ್ರಧಾನಿ ಮೋದಿ ನೇತೃತ್ವದ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವು ಅಧಿಕಾರಕ್ಕೆ ಬಂದರೆ ದೇಶದ ರೈತರ ಸಂಪೂರ್ಣ ಸಾಲ ಮನ್ನಾ ಮಾಡುತ್ತಿದೆ, ರೈತರು ಬೆಳೆದ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ (MSP) ನೀಡುತ್ತೇವೆಂದು ಆಭಯ ನೀಡಿದರು.

“ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರ ಸಂಬಳ ಹೆಚ್ಚಿಸುತ್ತೇವೆ. ಸರ್ಕಾರಿ, ಅರೆ ಸರ್ಕಾರಿ ನೌಕರರ ಗುತ್ತಿಗೆ ಪದ್ಧತಿ ರದ್ದುಗೊಳಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಉದ್ಯೋಗ ಭದ್ರತಾ ಯೋಜನೆ ಜಾರಿ ಮಾಡುತ್ತೇವೆ” ಎಂದು ಹೇಳಿದರು.

ಸಂವಿಧಾನ ಮುಗಿಸುವ ಕೆಲಸ ನಡೆಸುತ್ತಿದೆ

“ಈ ಬಾರಿಯ ಚುನಾವಣೆ ಎರಡು ವಿಚಾರದಲ್ಲಿ ನಡೆಯುತ್ತಿದೆ. ಒಂದು ಸಂವಿಧಾನ ಉಳಿವು ಮತ್ತೊಂದು ಕಡೆ ಸಂವಿಧಾನ ಮುಗಿಸುವ ಕೆಲಸ. ನಾವು ಸಂವಿಧಾನ ಉಳಿವಿಗಾಗಿ ಭಾರತ್‌ ಜೋಡೋ ಯಾತ್ರೆ ಮಾಡಿದೆವು. ಆದ್ರೆ ಬಿಜೆಪಿ ಇ.ಡಿ, ಐಟಿ ಹಾಗೂ ಸಿಬಿಐ ಮೂಲಕ ಹೆದರಿಸಿ ದೊಡ್ಡ ಭ್ರಷ್ಟಾಚಾರ ಮಾಡಿದೆ. ಚುನಾವಣಾ ಬಾಂಡ್‌ ಕಾನೂನುಬಾಹಿರವೆಂದು ಸುಪ್ರೀಂಕೋರ್ಟ್‌ ಹೇಳಿದೆ. ಚುನಾವಣಾ ಬಾಂಡ್‌ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹಿಸಲಾಗಿದೆ. ಇದು ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದೆ” ಎಂದು ರಾಹುಲ್ ಗಾಂಧಿ ಆರೋಪಿಸಿದರು.

“ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನುಡಿದಂತೆ ನಡೆದಿದ್ದೇವೆ. 5 ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಬಡವರಿಗೆ, ಮಹಿಳೆಯರು, ಯುವಕರಿಗೆ ಅನುಕೂಲವಾಗಿದೆ. ಮೋದಿ ನೇತೃತ್ವದ ಕೇಂದ್ರ ಸರ್ಕಾರದಿಂದ ರೈತರಿಗೆ ನ್ಯಾಯ ಸಿಕ್ಕಿಲ್ಲ. ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದ್ದು, ಈ ವೇಳೆ ರೈತರ ಸಂಕಷ್ಟ ಕಂಡಿದ್ದೇನೆ” ಎಂದರು.

“ವಿಧಾನಸಭಾ ಚುನಾವಣೆ ವೇಳೆ ಜೆಡಿಎಸ್‌ ಅನ್ನು ಬಿಜೆಪಿ ಬಿ ಟೀಮ್‌ ಎಂದು ಹೇಳಿದ್ದೆ. ಆದರೆ ಈಗ ಜೆಡಿಎಸ್‌, ಬಿಜೆಪಿ ಇಬ್ಬರೂ ಪಾರ್ಟನರ್ಸ್‌ ಆಗಿದ್ದಾರೆ” ಎಂದು ಟೀಕಿಸಿದರು.

ವೇದಿಕೆಯಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ, ಸಚಿವ ಎಚ್.ಸಿ.ಮಹದೇವಪ್ಪ, ಶಾಸಕರಾದ ನರೇಂದ್ರಸ್ವಾಮಿ, ರವಿಕುಮಾರ್ ಸೇರಿದಂತೆ ಜಿಲ್ಲೆಯ ಇತರೆ ಶಾಸಕರು ಸೇರಿದಂತೆ ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!