ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ರಾಜ್ಯದಲ್ಲಿ ಬೆಲೆ ಏರಿಕೆ ಹೆಚ್ಚಾಗಿದ್ದು, ಇದ್ದರಿಂದ ಸಾರ್ವಜನಿಕರು ತತ್ತರಿಸುವಂತಹ ಪರಿಸ್ಥಿತಿ ನಿರ್ಮಾಣವಾಗಿರುವುದನ್ನು ಖಂಡಿಸಿ ಏಪ್ರಿಲ್ 2 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅಹೋರಾತ್ರಿ ಪ್ರತಿಭಟನಾ ರ್‍ಯಾಲಿ ಹಾಗೂ ಏ.8ರಂದು ಜನಾಕ್ರೋಷ ರ್‍ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಇಂದ್ರೇಶ್ ತಿಳಿಸಿದರು.
ಮಂಡ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಹೋರಾತ್ರಿ ಪ್ರತಿಭಟನಾ ರ್‍ಯಾಲಿಯ ಹಾಗೂ ಜನಾಕ್ರೋಶ ರ್‍ಯಾಲಿಯ ಮೂಲಕ ಬೆಲೆ ಏರಿಕೆ ಸಂಬಂಧ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುವುದು.
ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲು ಗ್ಯಾರಂಟಿ ಹೆಸರಿನಲ್ಲಿ ಬೆಲೆ ಏರಿಕೆ ಮಾಡುತ್ತಿದ್ದು, ಅನಗತ್ಯ ಬೆಲೆ ಏರಿಕೆ ಮಾಡಿ ಜನಸಾಮಾನ್ಯರಿಗೆ ಹೊರೆಯಾಗಿ ಹೆಚ್ಚಿಸಿ, ತನ್ನ ಬೊಕ್ಕಸ ತುಂಬಿಕೊಳ್ಳುವಲ್ಲಿ ನಿರತವಾಗಿದೆ ಎಂದು ಹೇಳಿದರು.
ವಿದ್ಯುತ್ ದರ, ಸರ್ಕಾರಿ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬೆಲೆ, ಮುದ್ರಾಂಕ ಶುಲ್ಕ, ವೃತ್ತಿಪರ ಸೇವೆಗಳ ಬೆಲೆ ಏರಿಕೆ ಮಾಡಿ, ಸಾರ್ವಜನಿಕರಿಗೆ ಜೀವನ ನಡೆಸಲಾಗದಂತೆ ಮಾಡಿದ್ದು, ಎಸ್ಸಿಪಿ ಟಿಎಸ್ಪಿ ಯೋಜನೆಯ ೩೮,೮೬೦.೫೨ ಕೋಟಿ ಹಣವನ್ನು ಗ್ಯಾರೆಂಟಿ ಹೆಸರಿನಲ್ಲಿ ವಿನಿಯೋಗಿಸಿ ದಲಿತ ಸಮುದಾಯಕ್ಕೆ ಅನ್ಯಾಯವೆಸಗಿದೆ ಎಂದು ಆರೋಪಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಏ.7ರಂದು ನಡೆಯಲಿರುವ ಜನಾಕ್ರೋಶ ರ್‍ಯಾಲಿಯು ಏ.8ರಂದು ಮಂಡ್ಯದಲ್ಲಿ ಜಾಗೃತಿ ಮೂಡಿಸಲಿದ್ದು, ಸಾವಿರಾರು ಜನ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಟಿ.ಎಸ್.ವಿವೇಕ್, ನಗರ ಅಧ್ಯಕ್ಷ ವಸಂತ್, ಮಾಧ್ಯಮ ವಕ್ತಾರ ನಾಗಾನಂದ ಸೇರಿದಂತೆ ಮತ್ತಿತರರಿದ್ದರು.




