ಮಂಡ್ಯ ತಾಲೂಕಿನ ಸಾತನೂರು ಗ್ರಾಮದಲ್ಲಿರುವ ವಿವಾದಿತ ರಾಮಕೃಷ್ಣ ತಪೋವನ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಹೈಕೋರ್ಟ್ ಆದೇಶಿಸಿದ್ದರೂ ಮಂಡ್ಯ ತಾಲೂಕು ಆಡಳಿತ ಅಕ್ರಮವಾಗಿ ಪ್ರವೇಶಿಸಿ ಬೀಗ ಜಡಿದ ಪರಿಣಾಮ ಅಲ್ಲಿ ನೆಲೆಸಿದ್ದ ಕುಟುಂಬ ಬೀದಿಪಾಲಾಗಿದೆ ಎಂದು ಡಾ.ಅಂಬೇಡ್ಕರ್ ಪೀಪಲ್ ಪಾರ್ಟಿ ಅಧ್ಯಕ್ಷ ಕೃಷ್ಣ ಆರೋಪಿಸಿದರು.
ಈ ಕುಟುಂಬ ಮಳೆ, ಚಳಿ, ಗಾಳಿ ಎನ್ನದೆ ಅಲ್ಲೇ ಟೆಂಟ್ ಹಾಕಿಕೊಂಡು, ಸದಸ್ಯರು ಮಕ್ಕಳೊಂದಿಗೆ ನೆಲೆಸಿದೆ. ಹೈಕೋರ್ಟ್ ತಡೆಯಾಜ್ಞೆ ಇರುವ ವಿಷಯ ಗೊತ್ತಾದ ಬಳಿಕವಾದರೂ ರಾಮಕೃಷ್ಣ ತಪೋವನಕ್ಕೆ ಹಾಕಿರುವ ಬೀಗವನ್ನು ತೆಗೆಯದೆ ಅಧಿಕಾರಿಗಳು ಅಮಾನವೀಯತೆ ಪ್ರದರ್ಶಿಸುತ್ತಿದ್ದಾರೆ ಎಂದು ಮಂಡ್ಯನಗರದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಸಾತನೂರು ಗ್ರಾಮದ ಹೊಸ ಸರ್ವೆ ನಂ.331, ಹಳೇ ಸರ್ವೆ ನಂ.77 ರಲ್ಲಿ ನನ್ನ ಪತಿ ಶ್ರೀ ಶ್ರದ್ಧಾನಂದನಾಥ ಸ್ವಾಮೀಜಿ ಅವರು 6 ಎಕರೆ ಜಮೀನಿನ ಅನುಭವದಲ್ಲಿದ್ದುಕೊಂಡು ರಾಮಕೃಷ್ಣ ತಪೋವನವನ್ನು ಧಾರ್ಮಿಕ ಕಾರ್ಯಗಳಿಗೆ ಪ್ರಾರಂಭಿಸಿ ಸ್ವತ್ತಿನ ಮಂಜೂರಾತಿಗೆ 1979 ರಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸಿ ಅಂದಿನ ವಿಶೇಷ ಜಿಲ್ಲಾಧಿಕಾರಿ ಕಿಮ್ಮತ್ತಿನ ಮುಖಾಂತರ ವ್ಯವಸಾಯೇತರ ಉದ್ದೇಶಕ್ಕೆ ಮಂಜೂರು ಮಾಡಿದ್ದರು. ಅದರಂತೆ ಶ್ರೀ ಶ್ರದ್ಧಾನಂದನಾಥ ಸ್ವಾಮೀಜಿ ಹೆಸರಿಗೆ ಕಂದಾಯ ಇಲಾಖೆಯಲ್ಲಿ ಖಾತೆಯಾಗಿ ಆರ್‌ಟಿಸಿ ದಾಖಲೆಗಳೆಲ್ಲವೂ ಬದಲಾವಣೆಗೊಂಡಿದ್ದವು. ಸ್ವತ್ತಿನ ಸಂಪೂರ್ಣ ಮಾಲೀಕರಾದ ಬಳಿಕ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಮಂಡ್ಯ ಶಾಖೆಗೆ 4,300 ರೂ. ಕಿಮ್ಮತ್ತನ್ನು ಪಾವತಿ ಮಾಡಿದ್ದರು. ಬಳಿಕ ನನ್ನ ಪತಿ ವ್ಯವಸಾಯದ ಉದ್ದೇಶಕ್ಕೆ ಅನುಮತಿ ನೀಡುವಂತೆ ವಿಶೇಷ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದಾಗ ಅದನ್ನು ಪುರಸ್ಕರಿಸಿ 25 -05- 1984 ರಂದು ಅಂದಿನ ತಹಸೀಲ್ದಾರ್ ಅವರು ಶ್ರದ್ಧಾನಂದನಾಥ ಸ್ವಾಮೀಜಿ ಅವರಿಗೆ ಸಾಗುವಳಿ ಚೀಟಿ ನೀಡಿರುವುದಾಗಿ ದಾಖಲೆಗಳ ಸಹಿತ ಆ ಕುಟುಂಬದ ಮಂಗಳಮ್ಮ ವಿವರಿಸಿದರು.
ವಿವಾದಿತ ಸ್ವತ್ತು ಆರಂಭದಲ್ಲಿ ವ್ಯವಸಾಯಕ್ಕೆ ಯೋಗ್ಯವಲ್ಲದ ಜಮೀನಾಗಿತ್ತು. 6 ಎಕರೆ ಜಾಗವನ್ನು ವ್ಯವಸಾಯಕ್ಕೆ ಯೋಗ್ಯವಾದ ಜಮೀನನ್ನಾಗಿ ಮಾಡಿದ್ದು ನನ್ನ ಪತಿ ಈ ಜಾಗದಲ್ಲಿ ಒಂದು ಪ್ರಾರ್ಥನಾ ಮಂದಿರ, ಗೋಶಾಲೆಗಳನ್ನು ನಿರ್ಮಿಸಿಕೊಂಡು ಭತ್ತ, ಕಬ್ಬು, ರಾಗಿ ಇನ್ನಿತರ ಬೆಳೆಗಳನ್ನು ಬೆಳೆದು ಕಬ್ಬನ್ನು ಸಕ್ಕರೆ ಕಾರ್ಖಾನೆಗೆ ಸರಬರಾಜು ಮಾಡಿದ್ದಾರೆ. ನನ್ನ ಪತಿ ಆರೋಗ್ಯವಾಗಿದ್ದಾಗಲೇ ವಿವಾದಿತ ಸ್ವತ್ತನ್ನು ತನ್ನ ಇಬ್ಬರು ಹೆಣ್ಣು ಮಕ್ಕಳಿಗೆ ಸಮಾನವಾಗಿ ನೀಡಿದ್ದಾರೆ. ಈ ವಿವಾದಿತ ಸ್ವತ್ತಿನಲ್ಲಿ 40 ತೆಂಗಿನಮರಗಳು, 2 ಹಲಸಿನ ಮರ, ಒಂದು ಮಾವಿನಮರ, 60 ತೆಂಗಿನ ಸಸಿಗಳಿವೆ. ನಮ್ಮ ಸ್ವಾಧೀನದಲ್ಲಿರುವ ಸ್ವತ್ತಿಗೂ ಶ್ರೀ ಕಂಬದ ನರಸಿಂಹಸ್ವಾಮಿ ದೇವಸ್ಥಾನಕ್ಕೂ ಯಾವುದೇ ಸಂಬಂಧವಿರುವುದಿಲ್ಲ. ವಸ್ತುಸ್ಥಿತಿ ಹೀಗಿದ್ದರೂ ಕೆಲವರು ನಮ್ಮ ಸ್ವಾಧೀನದಲ್ಲಿರುವ ಸ್ವತ್ತನ್ನು ಕಬಳಿಸುವ ಉದ್ದೇಶದಿಂದ ವೃಥಾ ಹಸ್ತಕ್ಷೇಪ ಮಾಡುತ್ತಾ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿದರು.
ಮಂಡ್ಯ ಉಪವಿಭಾಗಾಧಿಕಾರಿಗಳು ದಾಖಲೆಗಳನ್ನು ಸೂಕ್ಷ್ಮವಾಗಿ ಪರಿಶಶೀಲಿಸದೆ, ಸರ್ವೆ ನಂ.77ರ ವಿಸ್ತೀರ್ಣದ 6 ಎಕರೆ ದೇವಸ್ಥಾನಕ್ಕೆ ಸೇರಿದ ಸ್ವತ್ತಲ್ಲ ಎಂಬುದನ್ನು ಅರಿಯದೆ, 6 ಎಕರೆ ಜಮೀನು ಶ್ರೀಕಂಬದ ನರಸಿಂಹಸ್ವಾಮಿ ಸ್ವಾಮಿ ದೇವಸ್ಥಾನದ ಆಸ್ತಿ ಎಂದು ತಪ್ಪು ಅಭಿಪ್ರಾಯಕ್ಕೆ ಬಂದು ಆದೇಶ ಮಾಡಿದ್ದಾರೆ ಎಂದರು.
ಇದೇ ಆದೇಶವನ್ನು ಜಿಲ್ಲಾಧಿಕಾರಿ ನ್ಯಾಯಾಲಯವೂ ಎತ್ತಿಹಿಡಿದಿದೆ. ಈ ಇಬ್ಬರ ಆದೇಶವನ್ನು ಪ್ರಶ್ನಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ದಾಖಲಿಸಿದ್ದು ಇತ್ಯರ್ಥ ಬಾಕಿ ಇದೆ. ವಿವಾದಿತ ಜಾಗದಲ್ಲಿ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯ ಸೂಚಿಸಿದ್ದರೂ ಅದನ್ನು ತಹಸೀಲ್ದಾರ್ ಅವರು ಪೊಲೀಸರೊಂದಿಗೆ ಏಕಾಏಕಿ ಸ್ಥಳ ಪ್ರವೇಶಿಸಿ ವಿವಾದಿತ ಜಾಗದಲ್ಲಿದ್ದ ಪ್ರಾರ್ಥನಾ ಮಂದಿರಕ್ಕೆ ಬೀಗ ಜಡಿದಿದ್ದಾರೆ. ಹೀಗಾಗಿ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಆಶ್ರಯವಿಲ್ಲದೆ ಬೀದಿ ಬದಿಯಲ್ಲೇ ಮಲಗುವಂತಾಗಿದೆ. ಮಂದಿರ ದೊಳಗಿರುವ ಸಾಮಾನುಗಳ ಸಹಿತ ಬೀಗ ಜಡಿದಿದ್ದಾರೆ ಎಂದು ಅಳಲು ತೋಡಿಕೊಂಡರು. ಗೋಷ್ಟಿಯಲ್ಲಿ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.




