Friday, November 20, 2026

ಪ್ರಾಯೋಗಿಕ ಆವೃತ್ತಿ

ಅತ್ಯಾಚಾರ-ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಕರವೇ ಆಗ್ರಹ

 


  • ಅತ್ಯಾಚಾರ-ಕೊಲೆ ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಕರವೇ ಸ್ವಾಭಿಮಾನಿ ಸೇನೆ ಆಗ್ರಹ

  • ಆರೋಪಿ ಪರವಾಗಿ ವಕೀಲರು ವಕಾಲತ್ತುವಹಿಸದಿರಲು ಮನವಿ
  • ಅತ್ಯಾಚಾರಿಗಳಿಗೆ ನಡುಬೀದಿಯಲ್ಲಿ ಕಲ್ಲು ಹೊಡೆದು ಸಾಯಿಸುವ ಶಿಕ್ಷೆ ವಿಧಿಸಿ

ಮಳವಳ್ಳಿಯಲ್ಲಿ ಮನೆಪಾಠಕ್ಕೆ ಹೋದ 10 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿ ಅಮಾನುಷವಾಗಿ ಕೊಲೆ ಮಾಡಿದ ಆರೋಪಿಯನ್ನು ಕೂಡಲೇ ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಒತ್ತಾಯಿಸಿದರು.

ಕೆ.ಆರ್.ಪೇಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ  ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಸೇನೆಯ ಕಾರ್ಯಕರ್ತರು ಸಂತಾಪ ಸೂಚಕ ಸಭೆ ನಡೆಸಿದರು, ಈ ಸಂದರ್ಭದಲ್ಲಿ ರೈತ ನಾಯಕಿ ನಂದಿನಿ ಜಯರಾಂ ಮಾತನಾಡಿ, 10ವರ್ಷದ ಬಾಲಕಿಯ ಮೇಲೆ ಅಮಾನುಷವಾಗಿ ಲೈಂಗಿಕ ದೌರ್ಜನ್ಯ ನಡೆಸಿ ಹತ್ಯೆ ಮಾಡಿರುವ ಘಟನೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ವಿಚಾರವಾಗಿದೆ. ಇಂತಹ ಹೀನ ಕೃತ್ಯವೆಸಗಿದ ಆರೋಪಿಗೆ ಕಠಿಣ ಶಿಕ್ಷೆ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ಆರೋಪಿ ಪರವಾಗಿ ಯಾವುದೇ ವಕೀಲರು ವಕಾಲತ್ತು ವಹಿಸಬಾರದು. ಆರೋಪಿಗೆ ಶಿಕ್ಷೆಯಾಗುವಂತೆ ಎಲ್ಲಾ ವಕೀಲರು ನೋಡಿಕೊಳ್ಳಬೇಕು, ಹೆಣ್ಣು ಮಕ್ಕಳಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಆಗ್ರಹಿಸಿದರು.

ವಿದ್ಯಾರ್ಥಿಗಳ ಮೇಲೆ ಲೈಂಗಿಕ ದೌರ್ಜನ್ಯಗಳು, ಶಿಕ್ಷಕ ಕುಲವೇ ತಲೆ ತಗ್ಗಿಸುವಂತಹದ್ದು, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳ ತಡೆಗೆ ಕೇಂದ್ರ ಸರ್ಕಾರ ಕಠಿಣ ಕಾನೂನು ರೂಪಿಸಬೇಕು. ಪೋಕ್ಸೋ ಕಾಯ್ದೆ ಜಾರಿಯಲ್ಲಿದ್ದರೂ, ಅತ್ಯಾಚಾರದ ಪ್ರಕರಣಗಳು ಕಡಿಮೆಯಾಗುತ್ತಿಲ್ಲ. ಲೈಂಗಿಕ ಅತ್ಯಾಚಾರ ಪ್ರಕರಣದ ಬಗ್ಗೆ ಶಾಲಾ ಮಕ್ಕಳನ್ನು ಜಾಗೃತಿಗೊಳಿಸಬೇಕಾಗಿದೆ. ಅತಿ ಶೀಘ್ರದಲ್ಲಿಯೇ ತಾಲ್ಲೂಕಿನ ಮಹಿಳಾ ಸಂಘಟನೆಗಳ ಸೇರಿ, ಎಲ್ಲಾ ಪ್ರೌಢ ಶಾಲೆಗಳಲ್ಲಿ ಮಹಿಳಾ ಜಾಗೃತಿ ಕಾರ್ಯಕ್ರಮ ರೂಪಿಸಲಾಗುವುದು ಎಂದರು.

ಕರವೇ ಮುಖಂಡರು ಮಾತನಾಡಿ, ಇಂತಹ ಘಟನೆಗಳು ನಡೆಯುತ್ತಿರುವುದನ್ನು ಗಮನಿಸಿದರೆ, ಸಮಾಜ ಯಾವ ಕಡೆ ಹೋಗುತ್ತಿದೆ ಎನ್ನುವ ಬಗ್ಗೆ ಆತಂಕವಾಗುತ್ತದೆ, ಇಂತಹ ಘಟನೆಗಳ ವಿರುದ್ದ ಕನ್ನಡ ಪರ ಸಂಘಟನೆಗಳು ಹಾಗೂ ಮಹಿಳಾ ಸಂಘಟನೆಗಳು ಧ್ವನಿ ಎತ್ತಬೇಕೆಂದು ಆಗ್ರಹಿಸಿದರು.

ಶಿಕ್ಷಕರ ಮೇಲೆ ನಂಬಿಕೆ ಇಟ್ಟು ಪಾಲಕರು ಮಕ್ಕಳನ್ನು ವಿದ್ಯಾಭ್ಯಾಸಕ್ಕೆ ಕಳಿಸುತ್ತಾರೆ, ಶಿಕ್ಷಕರೇ ಇಂತಹ ಕೃತ್ಯವನ್ನು ಮಾಡಿದರೆ, ಬೇಲಿಯೇ ಎದ್ದ ಹೊಲ ಮೇಯ್ದಂತೆ ಆಗಿದೆ, ಈ ಕೃತ್ಯ ನಡೆಸಿದ ಆರೋಪಿಗೆ ತ್ವರಿತಗತಿಯಲ್ಲಿ ಕಠಿಣ ಶಿಕ್ಷೆ ವಿಧಿಸಬೇಕು, ಆಗ ಮಾತ್ರ ಸಮಾಜಕ್ಕೆ ಒಂದು ಎಚ್ಚರಿಕೆಯ ಸಂದೇಶ ರವಾನೆಯಾಗುತ್ತದೆ ಎಂದರು.

ಬಾಲಕಿ ದಿವ್ಯ ಆತ್ಮಕ್ಕೆ ಶಾಂತಿ ಕೋರಿ ಮೌನಾಚಾರಣೆ ನಡೆಸಿ, ಭಾವಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಗೌರವ ಸಲ್ಲಿಸಿದರು. ನಂತರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸೇನೆಯ ಜಿಲ್ಲಾ ಉಪಾಧ್ಯಕ್ಷ ಸಮೀರ್, ಸಮಿತಿಯ ಮುಖಂಡರಾದ ಮಂಗಳಾ, ಗೌರವಾಧ್ಯಕ್ಷ ದೇವರಾಜು, ತಾಲೂಕು ಘಟಕದ ಮೂಡನಹಳ್ಳಿ ಮಧು, ನವ್ಯವಾಸು, ಕರವೇ, ಅಧ್ಯಕ್ಷ ಅಮದ್‌ ಖಾನ್‌, ಕಾನೂನು ಸಲಹೆಗಾರ ಸ್ವಾಭಿಮಾನಿ ಸೇನೆಯ ಯುವ ಘಟಕದ ಅಧ್ಯಕ್ಷ ವಕೀಲ ಆರ್.ಎಂ.ದೇವಾನಂದ್, ಅನುವಿನಕಟ್ಟೆ ಸಲ್ಮಾನ್‌ ಖಾನ್, ಜಮೀಲ್, ಇಲಿಯಾಜ್ ಸೋಮು, ಮಹಿಳಾ ಹೋರಾಟ ಸಮಿತಿಯ ಮಂಗಳಾ ಹಾಜರಿದ್ದರು. ಪ್ರತಿಭಟನೆಯ ನಂತರ ಉಪ ತಹಶೀಲ್ದಾರ್ ರವಿ ಅವರಿಗೆ ಮನವಿ ಸಲ್ಲಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ