Friday, November 20, 2026

ಪ್ರಾಯೋಗಿಕ ಆವೃತ್ತಿ

ಅತ್ಯಾಚಾರ|ಕೊಲೆ ಆರೋಪಿಗೆ ಕಠಿಣ ಕಾನೂನು ಶಿಕ್ಷೆಯಾಗಲಿ

ಮಳವಳ್ಳಿ ಪಟ್ಟಣದ 10 ವರ್ಷದ ಮುಗ್ಧ ಬಾಲಕಿಯ ಮೇಲೆ ಅಮಾನುಷವಾಗಿ ಅತ್ಯಾಚಾರ ನಡೆಸಿ, ಕೊಲೆ ಮಾಡಿರುವ ಆರೋಪಿ ಯಾವುದೇ ಕಾರಣಕ್ಕೂ ಕಾನೂನು ಕುಣಿಕೆಯಿಂದ ತಪ್ಪಿಸಿ ಕೊಳ್ಳದಂತೆ ಅಗತ್ಯವಾದ ಸಾಕ್ಷ್ಯಾಧಾರಗಳನ್ನು ಮಳವಳ್ಳಿ ಪಟ್ಟಣ ಪೊಲೀಸರು ಸಂಗ್ರಹಿಸಬೇಕಿದೆ.

ಒಂದು ವೇಳೆ ಪೊಲೀಸರು ಸಾಕ್ಷ್ಯಾಧಾರ ಸಂಗ್ರಹದಲ್ಲಿ ವಿಫಲವಾದರೆ ಮುಂದೆ ತನಿಖೆಯ ಸಂದರ್ಭದಲ್ಲಿ ಆರೋಪಿ ತಪ್ಪಿಸಿಕೊಳ್ಳುವ ಎಲ್ಲಾ ಸಾಧ್ಯತೆಗಳು ಇರುತ್ತವೆ. ಏಕೆಂದರೆ ಕಳೆದ ಹತ್ತು ವರ್ಷಗಳ ಹಿಂದೆ ಪಾಂಡವಪುರ ತಾಲೂಕಿನ ಗ್ರಾಮವೊಂದರ ಹನ್ನೆರಡು ವರ್ಷದ ಬಾಲಕಿಯನ್ನು ಆಕೆಯ ಊರಿನ ಯುವಕನೊಬ್ಬ ಅತ್ಯಾಚಾರ ನಡೆಸಿ ಕೊಂದು ಕಬ್ಬಿನ ಗದ್ದೆಯಲ್ಲಿ ಹೂತುಹಾಕಿದ್ದ.

ಈ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆದು ಸಾಕ್ಷಿಗಳ ಹೇಳಿಕೆ ಮುಗಿದ ನಂತರ ಆರೋಪಿಗೆ ಕಠಿಣ ಶಿಕ್ಷೆಯಾಗುತ್ತದೆ ಎಂದೇ ಭಾವಿಸಲಾಗಿತ್ತು. ಆದರೆ ಹುಡುಗಿಯ ಬಟ್ಟೆಯ ಮೇಲಿದ್ದ ಕಲೆಗೂ ಯುವಕನ ಬಟ್ಟೆಯ ಮೇಲಿದ್ದ ಕಲೆಗೂ ಹೊಂದಾಣಿಕೆಯಾಗದ ಕಾರಣ ಆತ ಖುಲಾಸೆಯಾಗಿದ್ದಾನೆ. ಈ ಪ್ರಕರಣದ ಸಂತ್ರಸ್ತರು ನ್ಯಾಯ ಪಡೆಯಲು ಇಂದಿಗೂ ಹೈಕೋರ್ಟ್ ಗೆ ಅಲೆಯುತ್ತಿದ್ದಾರೆ. ಆದರೆ ಆ ಯುವಕ ರಾಜಾರೋಷವಾಗಿ ತಿರುಗಾಡಿಕೊಂಡಿದ್ದಾನೆ.

ಆರೋಪಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಪ್ರತಿಭಟಿಸುತ್ತಿರುವುದು.

ಹೀಗೆ ಹಲವಾರು ಪ್ರಕರಣಗಳಲ್ಲಿ ಅತ್ಯಾಚಾರ, ಕೊಲೆ ಆರೋಪಿಗಳು ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಂಡಿದ್ದಾರೆ. ಅತ್ಯಾಚಾರ ಪ್ರಕರಣಗಳು ನಡೆದಾಗ ಜನರು ಆಕ್ರೋಶ ಗೊಳ್ಳುತ್ತಾರೆ. ಕೋಪಗೊಂಡು ಪ್ರತಿಭಟನೆ ನಡೆಸುತ್ತಾರೆ. ಆದರೆ ಕೆಲ ದಿನಗಳಲ್ಲಿ ಮರೆತುಬಿಡುತ್ತಾರೆ. ಎಷ್ಟೋ ವರ್ಷಗಳ ನಂತರ ಆರೋಪಿ ಬಿಡುಗಡೆ ಆಗಿದ್ದಾನೆ ಎಂಬುದು ಗೊತ್ತಾದ ಕೂಡಲೇ ನ್ಯಾಯಾಂಗ ವ್ಯವಸ್ಥೆ, ಪೊಲೀಸ್ ವ್ಯವಸ್ಥೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಆದರೆ ಅತ್ಯಾಚಾರ ಪ್ರಕರಣಗಳಲ್ಲಿ ಪೊಲೀಸರು ಮೊದಲು ಪ್ರಾಥಮಿಕ ಸಾಕ್ಷ್ಯಾಧಾರ ಸಂಗ್ರಹಿಸುವುದು ಬಹಳ ಮುಖ್ಯ. ಅತ್ಯಾಚಾರ ನಡೆದ ಸಂದರ್ಭದಲ್ಲಿ ವೀರ್ಯಾಣುಗಳು ಇರುವ ಬಟ್ಟೆಗಳನ್ನು ಸಂಗ್ರಹ ಮಾಡಬೇಕು. ಕೆಲವೊಂದು ವೇಳೆ ಆಸ್ಪತ್ರೆಯಲ್ಲಿ ದಿನಗಟ್ಟಲೆ ಸಾಕ್ಷ್ಯ ಸಂಗ್ರಹ ಮಾಡುವುದಿಲ್ಲ. ಇಂತಹ ಸಂದರ್ಭದಲ್ಲಿ ಆರೋಪಿ ಸುಲಭವಾಗಿ ತಪ್ಪಿಸಿಕೊಳ್ಳುತ್ತಾನೆ. ಅತ್ಯಾಚಾರ ಮತ್ತೆ ಲೈಂಗಿಕ ದೌರ್ಜನ್ಯದ ಘಟನೆಗಳು ನಡೆದ ಸಂದರ್ಭದಲ್ಲಿ ಪ್ರತ್ಯೇಕ ವೈದ್ಯಕೀಯ ಸಂಗ್ರಹಣ ಘಟಕ ಇದ್ದರೆ ಸಾಕ್ಷ್ಯ ನಾಶವಾಗುವ ಮುಂಚೆ ಸಂಗ್ರಹಿಸಿ, ಆರೋಪಿಗಳಿಗೆ ಕಠಿಣ ಶಿಕ್ಷೆಯನ್ನು ಕೊಡಿಸಬಹುದು ಎಂದು ಪ್ರಗತಿಪರ ವಕೀಲ ಬಿ.ಟಿ.ವಿಶ್ವನಾಥ್ ತಿಳಿಸಿದರು.

ಹಲವು ಸಂಘಟನೆಯ ಮುಖಂಡರು ಡಿವೈಎಸ್ ಪಿ ಗೆ ಮನವಿ ಮಾಡಿ ಪೋಕ್ಸೋ ಕಾಯ್ದೆಯಡಿ ಶಿಕ್ಷೆಗೆ ಒಳಪಡಿಸಲು ಮನವಿ ಮಾಡಿದರು.

ಮಳವಳ್ಳಿ ಪಟ್ಟಣದ ಬಾಲಕಿಯ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ಪೋಲಿಸರು ಎಲ್ಲಾ ಸಾಕ್ಷಾಧಾರಗಳನ್ನು ಸಂಗ್ರಹಿಸಿ, ಆರೋಪಿಯ ಮೇಲೆ ಪೋಕ್ಸೋ ಪ್ರಕರಣ ದಾಖಲಿಸಿ, ತ್ವರಿತಗತಿ ನ್ಯಾಯಾಲಯದಲ್ಲಿ ವಿಚಾರಣೆ ಮಾಡಿ ಆರು ತಿಂಗಳೊಳಗೆ ಕಠಿಣ ಶಿಕ್ಷೆ ಆಗುವಂತೆ ನೋಡಿ ಕೊಳ್ಳಬೇಕು. ಇಲ್ಲದಿದ್ದರೆ ಇಂತಹ ಕಾಮುಕರು ಕಾನೂನಿಗೆ ಹೆದರದೆ ಮತ್ತಷ್ಟು ಇಂತಹ ಕೃತ್ಯಗಳನ್ನು ಎಸಗುತ್ತಾರೆ. ಈ ರೀತಿ ಆಗದಂತೆ ಮಳವಳ್ಳಿ ಪೋಲಿಸರು ಅಗತ್ಯ ಸಾಕ್ಷ್ಯಾಧಾರ ಸಂಗ್ರಹಿಸಿ, ಆರೋಪಿಗೆ ಕಠಿಣ ಶಿಕ್ಷೆಯಾಗುವಂತೆ ಮಾಡಲಿ ಎಂದು ಮಹಿಳಾ ಮುನ್ನಡೆಯ ರಾಜ್ಯ ಸಂಚಾಲಕಿ ಪೂರ್ಣಿಮಾ ಒತ್ತಾಯಿಸಿದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ