ಶ್ರೀರಂಗಪಟ್ಟಣದಲ್ಲಿಂದು ಎಲ್ಲಿ ನೋಡಿದರಲ್ಲಿ ಜನವೋ ಜನ. ಸಹಸ್ರಾರು ಜೆಡಿಎಸ್ ಕಾರ್ಯಕರ್ತರು ಬಾವುಟ ಹಿಡಿದು ದೇವೇಗೌಡ, ಕುಮಾರಸ್ವಾಮಿ ಹಾಗೂ ರವೀಂದ್ರ ಶ್ರೀಕಂಠಯ್ಯ ಪರ ಜಯಘೋಷ ಹಾಕುತ್ತಿದ್ದರು. ಅಪಾರ ಜನ ಸಾಗರದ ಮಧ್ಯೆ ಮೆರವಣಿಗೆಯಲ್ಲಿ ಬಂದ ರವೀಂದ್ರ ಶ್ರೀಕಂಠಯ್ಯ ತಾಲ್ಲೂಕು ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದರು.
ಈ ಸಂದರ್ಭದಲ್ಲಿ ರವೀಂದ್ರ ಶ್ರೀಕಂಠಯ್ಯ ಅವರ ಪತ್ನಿ ಗೀತಾ,ಜೆಡಿಎಸ್ ವರಿಷ್ಠ,ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಿ.ಪಂ.ಮಾಜಿ ಸದಸ್ಯ ಮರೀಗೌಡ ಇದ್ದರು.
ಬೃಹತ್ ಮೆರವಣಿಗೆ
ನಾಮಪತ್ರ ಸಲ್ಲಿಕೆಗೂ ಮುನ್ನ ಪಟ್ಟಣದ ಬೆಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕುವೆಂಪು ವೃತ್ತದಿಂದ ಸಹಸ್ರಾರು ಜೆಡಿಎಸ್ ಕಾರ್ಯಕರ್ತರ ಜಯಘೋಷ, ತಮಟೆ, ನಗಾರಿ ಹಾಗೂ ವಿವಿಧ ಕಲಾತಂಡಗಳ ಮೆರವಣಿಗೆ ಯೊಂದಿಗೆ ಸಾಗಿ ಬಂದ ರವೀಂದ್ರ ಶ್ರೀಕಂಠಯ್ಯ ಅವರಿಗೆ ಸಾರ್ವಜನಿಕರು ಸಹ ಸಾಥ್ ನೀಡಿದರು.
ಪೇಟೆ ಬೀದಿ ಮೂಲಕ ಸಾಗಿ ಬಂದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರ ಹರ್ಷೋದ್ಘಾರ ಮುಗಿಲು ಮುಟ್ಟಿತ್ತು. ಮೆರವಣಿಗೆಯಲ್ಲಿದ್ದ ಸಹಸ್ರಾರು ಕಾರ್ಯಕರ್ತರು ದೇವೇಗೌಡ,ಕುಮಾರಸ್ವಾಮಿ ಹಾಗೂ ರವೀಂದ್ರ ಶ್ರೀಕಂಠಯ್ಯ ಅವರಿಗೆ ಜೈಕಾರ ಹಾಕಿ ಸಂಭ್ರಮಿಸಿದರು.
ನಂತರ ತಾಲ್ಲೂಕು ಕಚೇರಿಗೆ ಆಗಮಿಸಿದ ಅವರು ಒಳ ಬರಲು ಹರಸಾಹಸ ಪಡಬೇಕಾಯಿತು. ಈ ಸಂದರ್ಭದಲ್ಲಿ ಅವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ನಂತರ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.




