ರಾಷ್ಟ್ರೀಯ ಭೀಮಪಡೆಯ ಜಿಲ್ಲಾಧ್ಯಕ್ಷರಾಗಿ ಎಸ್.ಪಿ.ನಾರಾಯಣಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ ಎಂದು ಸಂಘಟನೆಯ ರಾಜ್ಯಾಧ್ಯಕ್ಷ ಹೆಚ್.ಎ.ಆತ್ಮಾನಂದ ಘೋಷಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಭೀಮಪಡೆ ಕಳೆದ 3 ವರ್ಷಗಳಿಂದ ದಲಿತ ಸಮುದಾಯದ ಪರ ಹೋರಾಟ ಮಾಡುತ್ತಿದೆ. ರಾಜ್ಯದಲ್ಲಿ ಎಲ್ಲಾ ಜಿಲ್ಲೆಗಳ ಪದಾಧಿಕಾರಿಗಳ ನೇಮಕ ಮಾಡುವ ಸಲುವಾಗಿ ಮಂಡ್ಯ ಜಿಲ್ಲೆಯಲ್ಲಿ ಪ್ರಥಮವಾಗಿ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗಿದೆ ಎಂದರು.
ದಲಿತ ಸಮುದಾಯದ ಪರ ಹೋರಾಡುವ ಸಲುವಾಗಿ ಯುವಕರ ಪಡೆ ಕಟ್ಟುವ ಕೆಲಸ ನಡೆದಿದೆ. ಈ ಸಂಘಟನೆಯು ರಾಜ್ಯಾದ್ಯಂತ ಕಾರ‍್ಯ ಚಟುವಟಿಕೆಗಳನ್ನು ಮಾಡಲಿದ್ದು, ಜಿಲ್ಲಾಧ್ಯಕ್ಷರಾದ ಎಸ್.ಪಿ.ನಾರಾಯಣಸ್ವಾಮಿ ಜಿಲ್ಲೆಯ ಪದಾಧಿಕಾರಿಗಳನ್ನು ನೇಮಕ ಮಾಡಿಕೊಂಡು, ಪಡೆಯನ್ನು ಸಂಘಟಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದರು.
ನೂತನ ಜಿಲ್ಲಾಧ್ಯಕ್ಷ ಎಸ್.ಪಿ.ನಾರಾಯಣಸ್ವಾಮಿ ಮಾತನಾಡಿ, ಇದೇ ಸೆ.11ರಂದು ಮಂಡ್ಯನಗರದ ಎಸ್ಸಿ,ಎಸ್ಟಿ ನೌಕರರ ಸಂಘದ ಆವರಣದಲ್ಲಿ ಭೀಮ ಪಡೆಯ 15 ಮಂದಿ ಪದಾಧಿಕಾರಿಗಳ ಆಯ್ಕೆ ನಡೆಯಲಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ವಿಜಯೇಂದ್ರ ಮೂರ್ತಿ, ರಾಜ್ಯ ಕಾರ್ಯದರ್ಶಿ ನಿತ್ಯಾನಂದ, ಸದಸ್ಯ ವೈರಮುಡಿ ಇದ್ದರು.




