Friday, November 20, 2026

ಪ್ರಾಯೋಗಿಕ ಆವೃತ್ತಿ

ಬಡ ಮಕ್ಕಳಿಗೆ ಉಚಿತ ಶಾಲೆ ತೆರೆಯಲು ಮಧು ಜಿ.ಮಾದೇಗೌಡ ಸಂಕಲ್ಪ: ಚುಂಚಶ್ರೀ ಸಂತಸ

ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡರು ತಮ್ಮ 60ನೇ ವರ್ಷದ ಜನ್ಮದಿನದ ಸಂದರ್ಭದಲ್ಲಿ ಬಡ ಮಕ್ಕಳಿಗೆ ಸಂಪೂರ್ಣ ಉಚಿತ ಶಾಲೆ ತೆರೆಯುವ ಸಂಕಲ್ಪ ಮಾಡಿರುವುದು ಸಂತಸ ತಂದಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.

ಮಂಡ್ಯ ನಗರದ ಹೊರವಲಯದಲ್ಲಿರುವ ಎ & ಎ ಸಮುದಾಯ ಭವನದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಹಾಗೂ ಮಧು ಜಿ.ಮಾದೇಗೌಡ ಹಿತೈಷಿಗಳ ಬಳಗ ಆಯೋಜಿಸಿದ್ದ ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡರ ಷಷ್ಠ್ಯಬ್ಧಿ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಧು ಅವರು ಅವರ ತಂದೆ ಜಿ. ಮಾದೇಗೌಡರಿಂದ ಸಾಕಷ್ಟು ಉತ್ತಮ ವಿಚಾರಗಳನ್ನು ಕಲಿತಿದ್ದಾರೆ. ಜಿ. ಮಾದೇಗೌಡರು ಸಕ್ರಿಯ ರಾಜಕಾರಣದಲ್ಲಿದ್ದ ಸಂದರ್ಭದಲ್ಲೂ ತಮ್ಮ ಮಕ್ಕಳಿಗೆ ಉತ್ತಮ ಸಂಸ್ಕಾರ ಕೊಡಿಸಲು ಶ್ರಮ ಪಟ್ಟಿದ್ದಾರೆ. ಕಾಲ ಕಾಲಕ್ಕೆ ಮಕ್ಕಳ ಶಿಕ್ಷಣ, ಯೋಗ ಕ್ಷೇಮ ತಿಳಿದುಕೊಂಡಿದ್ದಾರೆ. ಅವರಲ್ಲಿರುವ ಉತ್ತಮ ಗುಣಗಳು ಮಧು ಅವರಿಗೂ ಬಂದಿದೆ ಎಂದು ತಿಳಿಸಿದರು. ಮಧು ಮಾದೇಗೌಡರ 60 ನೇ ಜನ್ಮದಿನದ ಸಂದರ್ಭದಲ್ಲಿ ಆದಿಚುಂಚನಗಿರಿ ಮಠದ 53 ಮಕ್ಕಳಿಗೆ ವಿದ್ಯಾರ್ಥಿ ವೇತನ ಕೊಡುವುದಾಗಿ ತಿಳಿಸಿದ್ದರು. ಆದರೆ ಅವರಿಗೆ ನಾನು ನಿಮ್ಮ ತಂದೆಯ ಜೀವನ ಸಾರ್ಥಕವಾಗುವ ಉದ್ದೇಶದಿಂದ,ನಿಮ್ಮ ತಂದೆ ಜಿ.ಮಾದೇಗೌಡರ ಹೆಸರಿನಲ್ಲಿ ಉಚಿತ ಶಾಲೆ ಆರಂಭಿಸುವಂತೆ ತಿಳಿಸಿದೆ. ಅದರಂತೆ ಅವರು ಎಚ್.ಮಲ್ಲಿಗೆರೆ ಬಳಿ ಇರುವ ಗಾಂಧಿ ಗ್ರಾಮದಲ್ಲಿ ಸುಮಾರು 500-1000 ಬಡ ಮಕ್ಕಳಿಗೆ ಉಚಿತ ಶಿಕ್ಷಣ ಕೊಡುವ ಸಂಕಲ್ಪ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಮಧು ಜಿ.ಮಾದೇಗೌಡರಿಗೆ ಶುಭ ಕೋರಿದರು.

ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಜಿ.ಮಾದೇಗೌಡರ ವ್ಯಕ್ತಿತ್ವ, ಹೋರಾಟ ಇನ್ನೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ. ಈ ಜಿಲ್ಲೆಯ ರಾಜಕಾರಣಕ್ಕೆ ಘನತೆ ತಂದವರಾದ ಜಿ. ಮಾದೇಗೌಡ,ಎಚ್.ಡಿ. ಚೌಡಯ್ಯ, ಎಸ್. ಎಂ. ಕೃಷ್ಣ, ಕೆ.ಆರ್. ಪೇಟೆ ಕೃಷ್ಣ ಅವರ ಸಾಮೀಪ್ಯ ನನಗೆ ಸಿಕ್ಕಿದ್ದು ನನ್ನ ಸೌಭಾಗ್ಯ.ಇವರೆಲ್ಲರೂ ನನ್ನ ಬಗ್ಗೆ ಹೊಂದಿದ್ದ ಪ್ರೀತಿ, ವಿಶ್ವಾಸ ಮರೆಯಲು ಸಾಧ್ಯವಿಲ್ಲ. ಜಿ ಮಾದೇಗೌಡರಂತೆ ಮಧು ಅವರಿಗೂ ರಾಜಕಾರಣದಲ್ಲಿ ಅರ್ಹತೆ ಇದೆ.ಮಾದೇಗೌಡರ ಹೆಸರನ್ನು ಉಳಿಸುವ ಕೆಲಸವನ್ನು ಮಧು ಮಾಡುತ್ತಿದ್ದಾರೆ.

ಭಾರತೀ ಶಿಕ್ಷಣ ಸಂಸ್ಥೆಯ ಮೂಲಕ ಕೆ. ಎಂ. ದೊಡ್ಡಿಯನ್ನು ದೊಡ್ಡ ತಾಲೂಕು ಕೇಂದ್ರವನ್ನಾಗಿ ಮಾಡಿದ್ದಾರೆ. ಮಾದೇಗೌಡರಂತೆ ಶಿಸ್ತು ಬದ್ಧವಾಗಿ ಮಧು ಕೂಡ ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಬೆಳೆಸುತ್ತಿದ್ದಾರೆ.ಅವರು ಜಿ. ಮಾದೇಗೌಡರ ಹೆಸರನ್ನು ಚಿರಸ್ಥಾಯಿಯಾಗಿ ಉಳಿಸುತ್ತಾರೆಂಬ ನಂಬಿಕೆ ನನಗಿದೆ.ನಾನು ಅವರೊಂದಿಗೆ ಸದಾ ಜೊತೆಯಲ್ಲಿ ಇರುತ್ತೇನೆ. ಕಾವೇರಿ ನೀರಿನ ಹೋರಾಟ, ರೈತರಿಗಾಗಿ ತಮ್ಮ ಬದುಕನ್ನು ಮೀಸಲಾಗಿಟ್ಟಿದ್ದ ಜಿ.ಮಾದೇಗೌಡರ ಎತ್ತರಕ್ಕೆ ಮಧು ಕೂಡ ಬೆಳೆಯಲಿ ಎಂದು ಶುಭ ಕೋರಿದರು.

ವಿಧಾನ ಪರಿಷತ್ ಸದಸ್ಯ ಮಧು ಜಿ. ಮಾದೇಗೌಡ ಮಾತನಾಡಿ, ನನ್ನ ಸ್ನೇಹಿತರು 60ನೇ ವರ್ಷದ ಷಷ್ಠ್ಯಬ್ಧಿ ಸಮಾರಂಭ ಮಾಡುತ್ತೇವೆ ಎಂದು ಹೇಳಿದಾಗ ನನಗೆ ಮುಜುಗರ ತರುತ್ತದೆ ಬೇಡವೆಂದು ಹೇಳಿದೆ. ಆದರೆ ನನ್ನ ಸ್ನೇಹಿತರು ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರಿಂದ ಆಶೀರ್ವಾದ ಕೊಡಿಸಬೇಕೆಂದು ಈ ಕಾರ್ಯಕ್ರಮ ಮಾಡಿದ್ದೇವೆ.ನೀವು ಒಪ್ಪಿಕೊಳ್ಳಬೇಕು ಎಂದರು.ನನ್ನ ಪತ್ನಿ ಚಿಕ್ಕ ಮಕ್ಕಳ ಹಾಗೆ ಹುಟ್ಟುಹಬ್ಬ ಮಾಡಿಕೊಳ್ತೀರಿ, ನಾಚಿಕೆಯಾಗಲ್ವ ಎಂದು ಹೇಳಿ ನಾನು ಈ ಬರಲ್ಲ ಎಂದು ಸಾಕಷ್ಟು ವಿರೋಧ ವ್ಯಕ್ತಪಡಿಸಿದರು. ಆದರೆ ನಮ್ಮ ಹಿತೈಷಿಗಳಲ್ಲಿ ಒಬ್ಬರಾದ ನಂಜೇಗೌಡರು ಕರೆದಿದ್ದಕ್ಕೆ ಈ ಸಮಾರಂಭಕ್ಕೆ ನನ್ನ ಪತ್ನಿ ಬಂದಿದ್ದಾರೆ.ನನ್ನ ಷಷ್ಠ್ಯಬ್ಧಿ ಸಮಾರಂಭ ಆಯೋಜಿಸಿದ ನನ್ನ ಅಭಿಮಾನಿ ಬಳಗ ಹಾಗೂ ಸ್ನೇಹಿತರಿಗೆ ಅನಂತ ಧನ್ಯವಾದಗಳನ್ನ ತಿಳಿಸುತ್ತೇನೆ ಎಂದರು.

ನಾನೇನು ಸಾಧನೆ ಮಾಡಿದ್ದೇನೆ ಎಂಬುದು ನನಗೆ ಗೊತ್ತಿಲ್ಲ. ನಮ್ಮ ತಂದೆ ಕಟ್ಟಿದ ವಿದ್ಯಾ ಸಂಸ್ಥೆ ಯನ್ನು ಮುನ್ನಡೆಸಿಕೊಂಡು, ಅವರು ಹಾಕಿಕೊಟ್ಟ ದಾರಿಯಲ್ಲಿ ಹೋಗುತ್ತಿದ್ದೇನಷ್ಟೇ. ನಮ್ಮ ಸಂಸ್ಥೆಯಲ್ಲಿ 13,000 ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಪ್ರತಿ ವರ್ಷ ನಾಲ್ಕು ಸಾವಿರ ವಿದ್ಯಾರ್ಥಿಗಳು ಪದವಿ ಪಡೆದು ಹೊರ ಬರುತ್ತಿದ್ದಾರೆ. ನಾನು ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಇವೆಲ್ಲ ವಿಚಾರಗಳು ನನಗೆ ಅರಿವಾಯಿತು. ನನ್ನನ್ನು ವಿಧಾನ ಪರಿಷತ್ ಸದಸ್ಯನಾಗಿ ಮಾಡಲು ಕಾರಣಕರ್ತರಾದ ನನ್ನ ಸಂಸ್ಥೆಯ ಅಧ್ಯಾಪಕ ಹಾಗೂ ಅಧ್ಯಾಪಕೇತರ ವೃಂದಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ನನಗೆ ರಾಜಕಾರಣ ಬೇಸರ ತರಿಸಿದೆ.ನಾನು ನನ್ನ ಮುಂದಿನ ಜೀವನವನ್ನು ಗಾಂಧಿ ಗ್ರಾಮಕ್ಕೆ ಪೂರ್ಣವಾಗಿ ಮೀಸಲಿಟ್ಟು, ಗಾಂಧಿಯವರ ತತ್ವ,ಆದರ್ಶ, ಸಿದ್ಧಾಂತವನ್ನು ಯುವ ಪೀಳಿಗೆಗೆ ತಿಳಿಸಬೇಕೆಂಬ ಆಲೋಚನೆ ನನ್ನಲ್ಲಿದೆ. ನನ್ನ ತಂದೆಯವರ ಆಶಯದಂತೆ ಗಾಂಧಿ ಗ್ರಾಮ ಪರಿಕಲ್ಪನೆಯನ್ನು ಸಾಕಾರ ಮಾಡುವ ನಿಟ್ಟಿನಲ್ಲಿ ನಾನು ಮುಂದುವರಿಯುತ್ತಿದ್ದು, ಇದಕ್ಕೆ ತಮ್ಮೆಲ್ಲರ ಸಹಕಾರ ಬೇಕು ಎಂದು ಮನವಿ ಮಾಡಿದರು.

ಕೊಮ್ಮೇರಹಳ್ಳಿಯ ಆದಿಚುಂಚನಗಿರಿ ಶಾಖಾಮಠದ ಪುರುಷೋತ್ತಮಾನಂದ ಸ್ವಾಮೀಜಿ, ಶಾಸಕ ಗಣಿಗ ರವಿ ಕುಮಾರ್,ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್,ಮುಡಾ ಅಧ್ಯಕ್ಷ ನಯೀಂ ಮತ್ತಿತರರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ