✍️ ಮಾಚಯ್ಯ ಎಂ. ಹಿಪ್ಪರಗಿ
-
ಮೊಟ್ಟಮೊದಲ ಪಬ್ಲಿಕ್ ರೌಡಿ, ರಾಷ್ಟ್ರೀಯ ಹಂತಕ ನಾಥೂರಾಮ್ ಗೋಡ್ಸೆ
- ಜನಪೀಡಕ ರೌಡಿಯೊಬ್ಬ ಜನಸೇವಕ ನಾಯಕನಾಗಲು ಸಾಧ್ಯವೇ?
ನಮ್ಮ ಒಂದಷ್ಟು ಜನ ಶಾಕ್ ಗೆ ತುತ್ತಾಗಿದ್ದಾರೆ. ಅದ್ಯಾವನೊ ’ಸೈಲೆಂಟ್ ಬಿರುದಾಂಕಿತ ರೌಡಿಶೀಟರ್ ಅಲಿಯಾಸ್ ಭಾವಿ ಸಮಾಜ ಸೇವಕ ಕಮ್ ರಕ್ತದಾನಿ(!)ಯೊಬ್ಬನನ್ನು ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಂಡು, ತಮ್ಮ ಚಿಲ್ಪುಪಲ್ಟು ನಾಯಕರ ಜೊತೆ ವೇದಿಕೆಯಲ್ಲಿ ರಾರಾಜಿಸುವಂತೆ ಮಾಡಿದ್ದಲ್ಲದೆ, ಆತನಿಗೆ ಟಿಕೆಟ್ ಕೂಡಾ ಕೊಟ್ಟು ಕಲಾಸಿಪಾಳ್ಯಕ್ಕೆ ಕ್ಯಾಂಡಿಡೇಟ್ ಮಾಡ್ತಾರೆ ಅನ್ನೋ ಸುದ್ದಿಯೇ ಆ ಶಾಕಿಗೆ ಮೂಲ.
‘ಬಿಜೆಪಿ ರೌಡಿಗಳಿಗೆ ಮಣೆ ಹಾಕ್ತಿದೆ’, ’ಇಂತವರು ಗೆದ್ದು ಬಂದ್ರೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಹೇಗೆ ಸಾಧ್ಯ?’, ’ಜನಪೀಡಕ ರೌಡಿಯೊಬ್ಬ ಜನಸೇವಕ ನಾಯಕನಾಗಲು ಸಾಧ್ಯವೇ?’… ಅದೂ ಇದು ಅಂತ ಬಿಜೆಪಿಯನ್ನು ಜನ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಆದರೆ ವೈಯಕ್ತಿಕವಾಗಿ ಹೇಳ್ತೀನಿ, ಬಿಜೆಪಿಯ ಈ ನಡೆಯಿಂದ ನನಗೆ ಕಿಂಚಿತ್ತೂ ಶಾಕ್ ಆಗಿಲ್ಲ. ಯಾಕಂದ್ರೆ, ನಮ್ಮ ಸ್ವತಂತ್ರ ಭಾರತದ ಮೊಟ್ಟಮೊದಲ ಪಬ್ಲಿಕ್ ರೌಡಿ, ರಾಷ್ಟ್ರೀಯ ಹಂತಕ ನಾಥೂರಾಮ್ ಗೋಡ್ಸೆಯನ್ನು ಓಪನ್ನಾಗಿ ಆರಾಧಿಸುವ, ಗುಡಿಕಟ್ಟಿ ಪೂಜಿಸುವ ಬಿಜೆಪಿಯವರು ಯಕಶ್ಚಿತ್ ಒಬ್ಬ ಮಾರ್ಕೆಟ್ ರೌಡಿಯನ್ನು ವಿಧಾನಸೌಧಕ್ಕೆ ಕಳಿಸಲು ಹೊರಟಿರೋದ್ರಲ್ಲಿ ಆಶ್ಚರ್ಯ ಪಡುವಂತದ್ದೇನಿದೆ.
ರೌಡಿಯೊಬ್ಬ ವೈಯಕ್ತಿಕ ದುಷ್ಮನಿ ಕಾರಣಕ್ಕೆ ಹೊಡೆದಾಡಿಕೊಂಡು ಸತ್ತರೆ, ಅವನನ್ನು ತಮ್ಮ ಪಕ್ಷದ ಕಾರ್ಯಕರ್ತ ಅಂತ ಹೇಳಿ ಸಾರ್ವಜನಿಕರ ತೆರಿಗೆಯ ಕಾಸನ್ನು ಬೇಕಾಬಿಟ್ಟಿ ಪರಿಹಾರವಾಗಿ ನೀಡುವ ಬಿಜೆಪಿಗರಿಗೆ ರೌಡಿಯ ನಂಟೇನು ಹೊಸದೇ? ಬಿಜೆಪಿಗೆ ಈ ದೇಶದಲ್ಲಿ ಒಂದು ಭದ್ರ ಬುನಾದಿ ಅಂತ ಒದಗಿಸಿದ್ದೇ, ಇವತ್ತು ಮೋದಿಯವರ ಕೃಪೆಯಿಂದ ಮೂಲೆ ಹಿಡಿದಿರುವ ಅಡ್ವಾಣಿಯವರು ಹಮ್ಮಿಕೊಂಡಿದ್ದ ರಥಯಾತ್ರೆ.
ಆ ರಥಯಾತ್ರೆ ದೇಶಾದ್ಯಂತ ಅದೆಷ್ಟು ರೌಡಿಶೀಟರುಗಳನ್ನು ಹುಟ್ಟುಹಾಕಲಿಲ್ಲ. ಎಷ್ಟೆಲ್ಲ ನೆತ್ತರು ಹರಿಸಲಿಲ್ಲ. ಹರಿದ ನೆತ್ತರಿನ ನಡುವೆ ನಾವು ಹಸಿರು ಪೈರನ್ನು ಹುಡುಕಲು ಸಾಧ್ಯವೇ? ಅಲ್ಲಿ ಸಿಗುವುದೇನಿದ್ದರೂ ಕ್ರೌರ್ಯದ ಕಮಟು ವಾಸನೆ! ಅದೇ ಬಿಜೆಪಿಯ ಅಂತರಾಳ!
ಇವತ್ತು ಸಹಾ ಕೋಮುಗಲಭೆ ಭುಗಿಲೇಳಿಸುವುದರಲ್ಲಿ, ಉರುಳಿದ ಹೆಣಗಳನ್ನಿಟ್ಟುಕೊಂಡು ವೋಟ್ ರಾಜಕಾರಣ ಮಾಡೋದ್ರಲ್ಲಿ ಬಿಜೆಪಿಯನ್ನು ಮೀರಿಸುವ ಮತ್ತೊಂದು ಪಕ್ಷವಿದೆಯೇ? ಹೆಗಲ ಮೇಲೆ ಕೇಸರಿ ಶಾಲು ಹಾಕಿಕೊಂಡರೆ ನೀವು ಪೊಲೀಸ್ ಸ್ಟೇಷನ್ಗೆ ನುಗ್ಗಿ ಕೂಡಾ ‘ಮಾಮೂಲಿ’ ವಸೂಲಿ ಮಾಡಿಕೊಂಡು ಬರಬಹುದು.
ಅಂತಹ ‘ರೌಡಿತ್ವ’ವನ್ನು ಬಿಜೆಪಿ ಪೋಷಿಸುತ್ತಿದೆ. ಎಷ್ಟೋ ‘ಹಳ್ಳಿ’ಯ ‘ಕೆರೆ’ಗಳಲ್ಲಿ ಈಜಾಡಿಕೊಂಡಿದ್ದ ಪುಟಗೋಸಿಗಳೆಲ್ಲ ಇವತ್ತು ಕೇಸರಿ ಶಾಲಿನ ರೌಡಿಗಳಾಗಿ ರೂಪಾಂತರ ಹೊಂದಿ, ಫೋನ್ ಪೇ, ಗೂಗಲ್ ಪೇಗಳಲ್ಲಿ ಮಾಮೂಲಿ ವಸೂಲಿ ಮಾಡಿಕೊಳ್ಳುತ್ತಾ ಪುನೀತರಾಗುತ್ತಿದ್ದಾರೆ. ಇಂತವರಿಗೆಲ್ಲ ಬಿಜೆಪಿಯೇ ತವರುಮನೆಯಲ್ಲವೇ? ಹಾಗಾಗಿ ’ಸೈಲೆಂಟ್ ವಿದ್ಯಮಾನದಿಂದ ನಾನಂತೂ ಶಾಕಿಗೆ ತುತ್ತಾಗಿಲ್ಲ.
ಅಂದಹಾಗೆ, ನಾವು ಯೌವ್ವನದಲ್ಲಿದ್ದಾಗ ಆಟಕ್ಕೂ ಇಲ್ಲದ ಲೆಕ್ಕಕ್ಕೂ ಇಲ್ಲದ ಈ ಬಿಜೆಪಿ ಆಗೊಮ್ಮೆ ಈಗೊಮ್ಮೆ ವಾಜಪೇಯಿಯವರ ಸುಗಮ ಸಂಗೀತದಂತಹ ಭಾಷಣಗಳಿಂದಾಗಿ ಸುದ್ದಿಯಾಗುತ್ತಿತ್ತು. ಆಗೆಲ್ಲ ಇದನ್ನು ಜನ ಬ್ರಾಹ್ಮಣರ ಪಕ್ಷ ಅಂತ ಲೇವಡಿ ಮಾಡುತ್ತಿದ್ದರು. ಅದು ಲೇವಡಿಯಷ್ಟೇ ಅಲ್ಲ, ಕಟು ಸತ್ಯ ಕೂಡಾ ಹೌದು. ಎಸ್ಸಿ ಎಸ್ಟಿ ಒಬಿಸಿ ಮಕ್ಕಳ ಸ್ಕಾಲರ್ಶಿಪ್ ಕಿತ್ತುಹಾಕಿ, ಈ.ಡಬ್ಲ್ಯು.ಎಸ್ ಅನ್ನೋ ವಿದ್ರೋಹದ ಹೆಸರಲ್ಲಿ ಬ್ರಾಹ್ಮಣರ ಭವಿಷ್ಯವನ್ನು ಬೆಳಗಲು ಹೊರಟಿರುವ ಬಿಜೆಪಿ ನೂರಕ್ಕೆ ನೂರಾ ಒಂದು ಪರ್ಸೆಂಟ್ ಬ್ರಾಹ್ಮಣರ ಪಾರ್ಟಿ ಅನ್ನೋದ್ರಲ್ಲಿ ಅನುಮಾನವಿಲ್ಲ. ಬ್ರಾಹ್ಮಣರ ಪಾರ್ಟಿ ಬಿಜೆಪಿಯಲ್ಲಿ ರೌಡಿಯೊಬ್ಬನ ಪ್ರಸ್ತಾಪವಾಗುತ್ತಿರೋದ್ರಿಂದ ಈ ‘ರೌಡಿ’ ಅನ್ನೋದರ ಬಗ್ಗೆ ಕೊಂಚ ಕೆದಕಿ ನೋಡಿದೆ. ಆಗ ನನಗೆ ಅರ್ಥವಾದದದ್ದು ಇಷ್ಟು…
ಆಕ್ಸ್ಫರ್ಡ್ ನ ಲರ್ನರ್ ಡಿಕ್ಷ್ನರಿಯು ರೌಡಿ ಪದಕ್ಕೆ (of people) making a lot of noise or likely to cause trouble ಎಂಬ ವಿವರಣೆಯನ್ನು ಕೊಡುತ್ತೆ. ಅಂದರೆ ವ್ಯವಸ್ಥೆಯಲ್ಲಿ ಏನಾದರೊಂದು ಉಪದ್ರವ ಕೊಡುವ, ಶಾಂತಿ-ಸೌಹಾರ್ದತೆಯನ್ನು ಕದಡುವಂತೆ ಗದ್ದಲ ಎಬ್ಬಿಸುವ ಜನರನ್ನು ರೌಡಿಗಳು ಅಂತ ಕರೀತಾರೆ. ಮನುಷ್ಯ ಮನುಷ್ಯರ ನಡುವೆ ಮೇಲು ಕೀಳಿನ ಗದ್ದಲವೆಬ್ಬಿಸಿ ವ್ಯವಸ್ಥೆಯಲ್ಲಿ ಉಪದ್ರವ ಉಂಟುಮಾಡುತ್ತಾ ಬಂದವರು ಸಹಾ ರೌಡಿ ಪಟ್ಟಕ್ಕೆ ಅರ್ಹರೇ ಅಲ್ಲವಾ? ಯಾರವರು? ಉತ್ತರ ನಿಮಗೇ ಬಿಟ್ಟದ್ದು.
ಹಾಗೇ ಮುಂದುವರೆಯುವ ಆಕ್ಸ್ಫರ್ಡ್ ನ ಲರ್ನರ್ ಡಿಕ್ಷ್ನರಿಯು ರೌಡಿ ಎಂಬ ಪದಕ್ಕೆ disorderly ಎಂಬ ಪದವನ್ನು Synonym ಎಂದು, ಅರ್ಥಾತ್ ಸಮನಾರ್ಥಕ ಪದವೆಂದು ಹೇಳುತ್ತದೆ. ಡಿಸ್ ಆರ್ಡರ್ ಅಂದ್ರೆ ಏನು? ವ್ಯವಸ್ಥೆಯ ನಿಯಮವನ್ನು ಬುಡಮೇಲು ಮಾಡಿ, ಅಲ್ಲೋಲ ಕಲ್ಲೋಲ ಮಾಡೋದು ಅಂತ ಅರ್ಥ.
ಚಾರ್ಲ್ಸ್ ಡಾರ್ವಿನ್ ಅನ್ನೋ ಪರಿಸರಶಾಸ್ತ್ರಜ್ಞ, survival of the fittest ಎಂಬುದೇ ಈ ನಮ್ಮ ನಿಸರ್ಗದ ನಿಯಮ ಎಂದು ತುಂಬಾ ಹಿಂದೆಯೇ ಮನದಟ್ಟು ಮಾಡಿಸಿದ್ದಾನೆ. ಇದನ್ನು ಅನ್ವಯಿಸಿ ನೋಡುವುದಾದರೆ ಈ ನೆಲದ ಮೂಲ ನಿವಾಸಿಗಳೂ, ಬಹುಜನರೂ ಆದ ಶೂದ್ರ ಮತ್ತು ಅಂತ್ಯಜರು ಬಲಾಢ್ಯವಾಗಿರಬೇಕಾದ್ದು ‘ಆರ್ಡರ್. ಆದರೆ ತಮ್ಮ ಕುಯುಕ್ತಿ, ಸ್ವಾರ್ಥ, ಕುತಂತ್ರಗಳಿಂದ ಆ ‘ಆರ್ಡರ್ ಅನ್ನು ‘ಡಿಸ್ ಆರ್ಡರ್ಗೊಳಿಸಿ, ಬಹುಜನರ ಮೇಲೆ ಅಲ್ಪಮಾನವರು ಸವಾರಿ ಮಾಡುವಂತೆ ಮಾಡಿಕೊಂಡಿರೋದು ಯಾರು? ಮತ್ತೊಮ್ಮೆ ಉತ್ತರ ನಿಮಗೇ ಬಿಟ್ಟದ್ದು….
ಕುತೂಹಲ ಹೆಚ್ಚಾಗಿ merriam-webster ನಿಘಂಟುವಿನಲ್ಲೂ ಈ ರೌಡಿ ಪದದ ಕುರಿತು ಇಣುಕಿ ನೋಡಿದೆ. The meaning of ROWDY is coarse or boisterous in behavior : rough; ಎಂದು ಹೇಳಿತು. ಅಂದರೆ ಒರಟು ಮತ್ತು ಅಬ್ಬರದ ವರ್ತನೆಯ ವ್ಯಕ್ತಿಗಳನ್ನು ರೌಡಿ ಎಂದು ವ್ಯಾಖ್ಯಾನಿಸುತ್ತದೆ.
ಒರಟುತನ ಅಂದ್ರೆ ಏನು? ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡುವುದನ್ನೆ ನಾವು ಒರಟುತನ ಅಂತ ಪರಿಗಣಿಸುತ್ತೇವಲ್ಲವಾ… ’ನೀನು ಕೀಳು ಜಾತಿಯವನು, ನಿನ್ನ ನೆರಳೂ ನಮ್ಮ ಮೇಲೆ ಬೀಳಬಾರದು’, ’ನೀನು ಕೆಳ ಜಾತಿಯವನು ಹಾಗಾಗಿ ನಮ್ಮ ಜೊತೆ ಕೂತು ಊಟ ಮಾಡಕೂಡದು, ನಿನ್ನ ಎಂಜಲು ನೆಲದ ಮೇಲೆ ಬೀಳಕೂಡದು, ಬಾವಿಯ ನೀರನ್ನು ಮುಟ್ಟಕೂಡದು, ನಾವು ಉಂಡ ಎಂಜಲಿನ ಮೇಲೆ ಉರುಳಾಡು, ನಿಮ್ಮ ಹೆಂಗಸರು ಮೊದಲು ನಮಗೆ ಎಡೆಯಾಗಬೇಕು’ ಅಂತೆಲ್ಲ ಬಹುಸಂಖ್ಯಾತರ ಜೊತೆ ನಿತ್ಯನಿರಂತರ ಒರಟುತನದಿಂದ ವರ್ತಿಸುತ್ತಾ ಬಂದವರು ಯಾರು? ಉತ್ತರ ನಿಮಗೇ ಗೊತ್ತಿದೆ ಅಲ್ವಾ!
ಇನ್ನು ಅಬ್ಬರದ (boisterous) ವಿಚಾರಕ್ಕೆ ಬರೋಣ. ನಾವು ಹೇಳಿದ್ದೇ ಸತ್ಯ, ಬರೆದದ್ದೇ ವೇದವಾಕ್ಯ, ನಮ್ಮ ವಾಕ್ಯವೇ ಅಂತಿಮ ಅಂತ ಬಹುಜನರನ್ನು ಶಿಕ್ಷಣದಿಂದ ದೂರವಿಟ್ಟು, ಇತಿಹಾಸದುದ್ದಕ್ಕೂ ಕೆಳಜಾತಿಗಳ ಮೇಲೆ ಅಬ್ಬರಿಸಿ, ಆರ್ಭಟಿಸುತ್ತಾ ಬಂದವರು ಯಾರು? ಇದಕ್ಕೂ ಉತ್ತರ ನಿಮಗೇ ತಿಳಿದಿದೆ.
ಇದೆಲ್ಲ ನಿಘಂಟುವಿನ ವ್ಯಾಖ್ಯಾನೆಗಳಾದವು, ಇನ್ನು ನಮ್ಮ ಭಾರತೀಯ ಕಾನೂನು ವ್ಯವಸ್ಥೆಯಲ್ಲಿ ಒಬ್ಬ ವ್ಯಕ್ತಿಯನ್ನು ರೌಡಿ ಶೀಟರ್ ಎಂದು ಕರೆಯಲು ಏನು ಮಾನದಂಡವಿದೆ ಅಂತ ಇಣುಕಿದಾಗ, ಮೇಲೆ ವಿವರಿಸಿದ ಎಲ್ಲಾ ಕಾನೂನುಬಾಹಿರ ಚಟುವಟಿಕೆಗಳನ್ನು ಅಂದರೆ ಸಮಾಜದಲ್ಲಿ ಗದ್ದಲವೆಬ್ಬಿಸೋದು, ಆರ್ಡರ್ ಅನ್ನು ಡಿಸ್ ಆರ್ಡರ್ ಮಾಡೋದು, ಮತ್ತೊಬ್ಬರ ಮೇಲೆ ಒರಟುತನ ಪ್ರದರ್ಶಿಸೋದು, ಅಸಹಾಯಕರ ಮೇಲೆ ಆರ್ಭಟಿಸೋದು ಮೊದಲಾದ ಕಾನೂನುಬಾಹಿರ ಕೃತ್ಯಗಳನ್ನು ಯಾವುದೇ ವ್ಯಕ್ತಿ ನಾಲ್ಕಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಿ, ಹೀಗೆ ವರ್ತಿಸುವುದನ್ನೇ ತನ್ನ ಅಭ್ಯಾಸ ಮಾಡಿಕೊಂಡಿದ್ದರೆ ಆತನನ್ನು ರೌಡಿಶೀಟರ್ ಆಗಿ ಪರಿಗಣಿಸಲು ಕಾನೂನು ಅವಕಾಶ ಕೊಟ್ಟಿದೆ.
ನಾಲ್ಕು ಸಲವೇನು, ನೂರಾರು ತಲೆಮಾರುಗಳಿಂದ ಈ ರೀತಿಯ ದೌರ್ಜನ್ಯ, ದಬ್ಬಾಳಿಕೆ, ಅಸಮಾನತೆಯ ಶೋಷಣೆ ಮಾಡಿಕೊಂಡು ಬಂದವರು ಯಾರು? ಅವರೂ ‘ರೌಡಿ’ಗಳಾಗಲಿಕ್ಕೆ ಲಾಯಕ್ಕುದಾರರಲ್ಲವೇ? ಸಾರಾಂಶದಲ್ಲಿ ಹೇಳ್ತೀನಿ, ಮೇಲು-ಕೀಳನ್ನು ಪ್ರತಿಪಾದಿಸುವ ‘ಜಾತಿವ್ಯವಸ್ಥೆ’ಯೇ ಒಂದು ರೌಡಿಸಂ; ಅದನ್ನು ಸಮರ್ಥಿಸಿಕೊಳ್ಳುವ ಪ್ರತಿಯೊಬ್ಬರೂ ‘ರೌಡಿ’ಗಳೆ!
ಮತ್ತೊಮ್ಮೆ ಹೇಳ್ತೀನಿ, ನಾವು ಯೌವ್ವನದಲ್ಲಿದ್ದಾಗ ಬಿಜೆಪಿ ಪಾರ್ಟಿಯನ್ನು ಬ್ರಾಹ್ಮಣರ ಪಕ್ಷ ಅಂತ ಲೇವಡಿ ಮಾಡಲಾಗುತ್ತಿತ್ತು! ನಿಘಂಟುಗಳು ಮತ್ತು ಕಾನೂನಿನ ವ್ಯಾಖ್ಯಾನಗಳ ಪ್ರಕಾರ ಸ್ಪಷ್ಟವಾಗಿ ’ರೌಡಿ’ಗಳು ಎಂದು ಕರೆಯಬಹುದಾದ ಸಮುದಾಯವೊಂದರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿರುವ ಬಿಜೆಪಿ ಪಕ್ಷದಲ್ಲಿ ಒಬ್ಬ ರೌಡಿ ಸೈಲೆಂಟಾಗಿ ಬಂದು ಕುಳಿತಿರೋದ್ರಲ್ಲಿ ಅಚ್ಚರಿಯೂ ಇಲ್ಲ, ಆಘಾತವೂ ಇಲ್ಲ. ಇದು ಆ ಪಕ್ಷದ ನಿಜಬಣ್ಣ ಅಷ್ಟೆ…..




