ಕೆಲವರ ಕುತಂತ್ರದಿಂದಾಗಿ ಮಂಡ್ಯ ಹಾಲು ಒಕ್ಕೂಟದ ನಿರ್ದೇಶಕ ಸ್ಥಾನದ ಚುನಾವಣೆಗೆ ಮದ್ದೂರು ತಾಲ್ಲೂಕಿನಿಂದ ಬಿಜೆಪಿ ಬೆಂಬಲಿತನಾಗಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ಆದರೂ ನಾನು ಎದೆಗುಂದದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಗೆಲುವು ಸಾಧಿಸಿದ್ದೇನೆ, ಇದಕ್ಕೆ ಪಕ್ಷದ ಯಾರನ್ನಾ ಹೊಣೆಯಾಗಿಸುವುದಿಲ್ಲ ಎಂದು ಎಸ್.ಪಿ.ಸ್ವಾಮಿ ಹೇಳಿದರು.
ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಮನ್ಮುಲ್ ನಿರ್ದೇಶಕರನ್ನಾಗಿ, ಸಾದೊಳಲು ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಐದು ವರ್ಷಗಳ ಅವಧಿಗೆ ಎರಡನೇ ಬಾರಿಗೆ ಆಯ್ಕೆ ಮಾಡಿದ್ದ ಮದ್ದೂರು ತಾಲೂಕಿನ ಎಲ್ಲ ಸಹಕಾರಿ ಕ್ಷೇತ್ರದ ಮತದಾರರಿಗೆ, ಗ್ರಾಮದ ಎಲ್ಲ ಯಜಮಾನರು, ಮುಖಂಡರು ಹಾಗೂ ಗ್ರಾಮಸ್ಥರಿಗೆ ತುಂಬು ಹೃದಯದ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ ಎಂದರು.
ಬಿಜೆಪಿಗೆ ಪಾದಾರ್ಪಣೆ ಮಾಡಿದಾಗಿನಿಂದಲೂ ನಾನು ಪಕ್ಷ ನಿಷ್ಠೆ, ಪ್ರಾಮಾಣಿಕತೆಯಿಂದ ಪಕ್ಷ ಕಟ್ಟುವ ಕೆಲಸ ಮಾಡಿದ್ದೇನೆ. ಇದರಲ್ಲಿ ಯಾವುದೇ ತೊಡಕೂ ಉಂಟಾಗಿಲ್ಲ. ಆದರೆ ಕೆಲವರ ಕುತಂತ್ರದ ಪರಿಣಾಮವಾಗಿ ಈ ಬಾರಿ ಇಂತಹ ಕಹಿ ಘಟನೆ ನಡೆದಿದೆ. ಈ ಎಲ್ಲ ಬೆಳವಣಿಗೆಗಳೂ ಸಹ ಪಕ್ಷದ ವರಿಷ್ಠರ ಗಮನಕ್ಕೂ ಬಂದಿದೆ. ಮುಂದೆಯೂ ಸಹ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.
ಮಂಡ್ಯ ಹಾಲು ಒಕ್ಕೂಟದ ಚುನಾವಣೆಯಲ್ಲಿ ಆಯ್ಕೆಯಾದ ನಂತರ ನಾನು ಬಿಜೆಪಿ ಬಿಟ್ಟು ಬೇರೆ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತೇನೆ ಎಂದು ಕಿಡಿಗೇಡಿಗಳು ಗೊಂದಲ ಸೃಷ್ಠಿಸುತ್ತಿದ್ದು, ನಾನು ಯಾವುದೇ ಕಾರಣಕ್ಕೂ ಪಕ್ಷಾಂತರ ಮಾಡುವುದಿಲ್ಲ. ನನ್ನ ನಿಷ್ಠೆ ಏನಿದ್ದರೂ ಬಿಜೆಪಿ ಪಕ್ಷಕ್ಕೇ ಹೊರತು ಬೇರೆ ಪಕ್ಷಕ್ಕೆ ಅಲ್ಲ. ಬಿಜೆಪಿ ಪಕ್ಷ ಬಿಡುವ ಸಂದರ್ಭದ ಎದುರಾದರೇ ರಾಜಕೀಯದಿಂದಲೇ ಹೊರಗುಳಿಯುತ್ತೇನೆ ಎಂದು ಸ್ಪಷ್ಟಪಡಿಸಿದರು.
ಗೋಷ್ಠಿಯಲ್ಲಿ ಜಿ.ಪಂ ಮಾಜಿ ಸದಸ್ಯ ಬೋರಯ್ಯ, ಎಂಡಿಸಿ ಮಾಜಿ ನಿರ್ದೇಶಕ ಪ್ರಕಾಶ್, ಮನು, ಪ್ರಸನ್ನ, ಕೃಷ್ಣ ನಾಗೇಶ್ ಇದ್ದರು.




